ಡೆನ್ಮಾರ್ಕ್ ಓಪನ್ ಪ್ರಶಸ್ತಿ ಹೊಸ್ತಿಲಲ್ಲಿ ಶ್ರೀಕಾಂತ್

By Suvarna Web DeskFirst Published Oct 21, 2017, 10:20 PM IST
Highlights

ಕೇವಲ 39 ನಿಮಿಷಗಳ ಕಾದಾಟದಲ್ಲಿ ಸೊಗಸಾದ ಸ್ಮ್ಯಾಶ್ ಹಾಗೂ ಸರ್ವ್'ಗಳ ಮೂಲಕ ಎದುರಾಳಿ ಆಟಗಾರರನ್ನು ತಬ್ಬಿಬ್ಬು ಮಾಡಿದ ಶ್ರೀಕಾಂತ್ ಅರ್ಹವಾಗಿಯೇ ಫೈನಲ್ ಪ್ರವೇಶಿಸಿದರು.

ಒಡೆನ್ಸೆ(ಅ.21): ಭಾರತದ ಅನುಭವಿ ಶಟ್ಲರ್ ಕಿದಾಂಬಿ ಶ್ರೀಕಾಂತ್ ಡೆನ್ಮಾರ್ಕ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ 2017ರಲ್ಲಿ ಮೂರನೇ ಸೂಪರ್ ಸೀರೀಸ್ ಪ್ರಶಸ್ತಿ ಗೆಲ್ಲುವ ಹೊಸ್ತಿಲಲ್ಲಿದ್ದಾರೆ.

ಇಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವ ನಂ.8 ಆಟಗಾರ ಶ್ರೀಕಾಂತ್, ಹಾಂಕಾಂಗ್‌'ನ ವಿನ್ಸೆಂಟ್ ವಾಂಗ್ ವಿಂಗ್ ವಿರುದ್ಧ 21-18, 21-17 ನೇರ ಗೇಮ್‌'ಗಳಲ್ಲಿ ಸುಲಭ ಗೆಲುವು ದಾಖಲಿಸಿದರು.

ಕೇವಲ 39 ನಿಮಿಷಗಳ ಕಾದಾಟದಲ್ಲಿ ಸೊಗಸಾದ ಸ್ಮ್ಯಾಶ್ ಹಾಗೂ ಸರ್ವ್'ಗಳ ಮೂಲಕ ಎದುರಾಳಿ ಆಟಗಾರರನ್ನು ತಬ್ಬಿಬ್ಬು ಮಾಡಿದ ಶ್ರೀಕಾಂತ್ ಅರ್ಹವಾಗಿಯೇ ಫೈನಲ್ ಪ್ರವೇಶಿಸಿದರು.

ಹೋರಾಟ ಮುಗಿಸಿದ ಸೈನಾ, ಪ್ರಣಯ್

ಭಾರತದ ಸೈನಾ ನೆಹ್ವಾಲ್ ಹಾಗೂ ಎಚ್.ಎಸ್.ಪ್ರಣಯ್ ಡೆನ್ಮಾರ್ಕ್ ಓಪನ್‌ನಿಂದ ಹೊರಬಿದ್ದಿದ್ದಾರೆ. ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌'ನಲ್ಲಿ ಸೈನಾ ಜಪಾನ್‌'ನ ಅಕಾನೆ ಯಮಗೂಚಿ ವಿರುದ್ಧ 10-21, 13-21 ನೇರ ಗೇಮ್‌'ಗಳಲ್ಲಿ ಪರಾಭವಗೊಂಡರು.

ಇನ್ನು ಪ್ರೀ ಕ್ವಾರ್ಟರ್‌'ನಲ್ಲಿ ದಿಗ್ಗಜ ಲೀ ಚಾಂಗ್ ವೀ ಸೋಲಿಸಿದ್ದ ಪ್ರಣಯ್ ಕ್ವಾರ್ಟರ್ ಫೈನಲ್‌'ನಲ್ಲಿ ವಿಶ್ವ ನಂ.2, ಅಗ್ರಶ್ರೇಯಾಂಕಿತ ಆಟಗಾರ ಕೊರಿಯಾದ ಸೊನ್ ವಾನ್ ಹೊ ವಿರುದ್ಧ 13-21, 18-21 ಗೇಮ್‌'ಗಳಲ್ಲಿ ನಿರಾಸೆ ಅನುಭವಿಸಿದರು.

click me!