
ಹೈದರಾಬಾದ್(ಫೆ.10): ಮತ್ತೊಮ್ಮೆ ಏಕಪಕ್ಷೀಯ ಪ್ರದರ್ಶನ ನೀಡಿದ ಭಾರತ ಟಿ20 ಅಂಧರ ತಂಡ, ವಿಶ್ವ ಚುಟುಕು ಕ್ರಿಕೆಟ್ ಪಂದ್ಯಾವಳಿಯಲ್ಲಿ ಫೈನಲ್ ತಲುಪಿದ್ದು, ಬಹುತೇಕ ತನ್ನ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ವಿರುದ್ಧ ಪ್ರಶಸ್ತಿ ಸುತ್ತಿನಲ್ಲಿ ಕಾದಾಡಲು ವೇದಿಕೆ ಸಜ್ಜುಗೊಳಿಸಿಕೊಂಡಿದೆ.
ಇಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ 10 ವಿಕೆಟ್'ಗಳ ಭರ್ಜರಿ ಗೆಲುವು ಪಡೆಯಿತು. ಗೆಲ್ಲಲು 175 ರನ್ ಗುರಿ ಪಡೆದಿದ್ದ ಭಾರತ, 13 ಓವರ್'ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಜಯದ ನಗೆಬೀರಿತು.
ಆರಂಭಿಕ ಜೆ. ಪ್ರಕಾಶ್ (115) ಹಾಗೂ ಅಜಯ್ ಕುಮಾರ್ ರೆಡ್ಡಿ (51) ಅಜೇಯ ಆಟವಾಡಿ ತಂಡಕ್ಕೆ ಸುಲಭ ಗೆಲುವು ತಂದಿತ್ತರು. ಪ್ರಕಾಶ್ ಅಂತೂ ಲಂಕಾ ಬೌಲರ್'ಗಳನ್ನು ಮನಬಂದಂತೆ ದಂಡಿಸಿ ಶತಕ ದಾಖಲಿಸಿದರೆ, ಅವರಿಗೆ ಸೂಕ್ತ ಸಾಥ್ ನೀಡಿದ ಅಜಯ್ ಕುಮಾರ್ ಕೂಡ ಬಿರುಸಿನ ಬ್ಯಾಟಿಂಗ್'ನಿಂದ ತಂಡಕ್ಕೆ ಭರ್ಜರಿ ಜಯ ತಂದಿತ್ತರು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ, ಸಾಮಾನ್ಯ ಮೊತ್ತ ಕಲೆಹಾಕಿತು. ಆರಂಭಿಕ ಸುರಂಗ ಸಂಪತ್ (49) ಹಾಗೂ ಚಂದನ ದೇಶಪ್ರಿಯ (42) ಮತ್ತು ಕೆಳ ಕ್ರಮಾಂಕದಲ್ಲಿ ಚಂದನ ಕುಮಾರ 16 ರನ್ ಗಳಿಸಿದ್ದು ಬಿಟ್ಟರೆ ಮಿಕ್ಕವರಿಂದ ಉತ್ತಮ ಬ್ಯಾಟಿಂಗ್ ಹೊಮ್ಮಲಿಲ್ಲ. ಆದಾಗ್ಯೂ ಭಾರತದ ಬೌಲರ್‌ಗಳೇ ಹೆಚ್ಚುವರಿಯಾಗಿ ನೀಡಿದ 41 ರನ್'ಗಳು ಲಂಕಾ ತಂಡದ ಮೊತ್ತವನ್ನು ಹೆಚ್ಚಿಸಿತು.
ಭಾರತದ ಪರ ರಣಬೀರ್ ಪನ್ವಾರ್ ಹಾಗೂ ಸುನೀಲ್ ತಲಾ ಎರಡು ವಿಕೆಟ್ ಗಳಿಸಿದರೆ, ಅಜಯ್ ಕುಮಾರ್ ಮತ್ತು ಗೋಲು ಕುಮಾರ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ: 10 ಓವರ್'ಗಳಲ್ಲಿ 174/10
(ಸುರಂಗ 49, ಚಂದನ 42; ಸುನೀಲ್ 21ಕ್ಕೆ 2)
ಭಾರತ: 13 ಓವರ್‌ಗಳಲ್ಲಿ 175/0
(ಪ್ರಕಾಶ್ ಅಜೇಯ 115, ಅಜಯ್ ಅಜೇಯ 51)
ಫಲಿತಾಂಶ: ಭಾರತಕ್ಕೆ 10 ವಿಕೆಟ್ ಭರ್ಜರಿ ಗೆಲುವು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.