ವಿಶ್ವ ಗ್ರೂಪ್ 01ರಲ್ಲಿ ಸ್ಥಾನ ಉಳಿಸಿಕೊಳ್ಳುವ ಒತ್ತಡದಲ್ಲಿ ಭಾರತ
ಡೇವಿಸ್ ಕಪ್ ಪ್ಲೇ-ಆಫ್ ಪಂದ್ಯದಲ್ಲಿ ಬಲಿಷ್ಠ ಡೆನ್ಮಾರ್ಕ್ ಸವಾಲು
ಸಿಂಗಲ್ಸ್‌ನಲ್ಲಿ ಭಾರತ ಯೂಕಿ ಭಾಂಬ್ರಿ, ಸುಮಿತ್ ನಗಾಲ್ ಕಣಕ್ಕಿಳಿಯುವ ಸಾಧ್ಯತೆ
ಹಿಲ್ಲೆರಾಡ್(ಫೆ.03): ವಿಶ್ವ ಗುಂಪು-1ರಲ್ಲಿ ಸ್ಥಾನ ಉಳಿಸಿಕೊಳ್ಳುವ ಒತ್ತಡದಲ್ಲಿರುವ ಭಾರತ, ಶುಕ್ರವಾರದಿಂದ ಆರಂಭಗೊಳ್ಳಲಿರುವ ಡೇವಿಸ್ ಕಪ್ ಪ್ಲೇ-ಆಫ್ ಪಂದ್ಯದಲ್ಲಿ ಬಲಿಷ್ಠ ಡೆನ್ಮಾರ್ಕ್ ವಿರುದ್ಧ ಸೆಣಸಲಿದೆ. ಭಾರತ ತಂಡದಲ್ಲಿ ಸಿಂಗಲ್ಸ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 300ರೊಳಗಿರುವ ಒಬ್ಬ ಆಟಗಾರನೂ ಇಲ್ಲ. ಆದರೆ ಡೆನ್ಮಾರ್ಕ್‌ಗೆ ವಿಶ್ವ ನಂ.9 ಹೋಲ್ಗರ್ ರ್ಯುನೆ ಸೇವೆ ಲಭ್ಯವಿದ್ದು, ತವರಿನಲ್ಲಿ ಸುಲಭ ಜಯದ ನಿರೀಕ್ಷೆಯಲ್ಲಿದೆ.
ಒಳಾಂಗಣ ಹಾರ್ಡ್ ಕೋರ್ಟ್‌ನಲ್ಲಿ ಪಂದ್ಯ ನಡೆಯಲಿದ್ದು, ಸಿಂಗಲ್ಸ್‌ನಲ್ಲಿ ಭಾರತ ಯೂಕಿ ಭಾಂಬ್ರಿ, ಸುಮಿತ್ ನಗಾಲ್‌ರನ್ನು ಕಣಕ್ಕಿಳಿಸಲಿದೆ. ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಜೊತೆ ಯೂಕಿ ಆಡಲಿದ್ದಾರೆ.
ಹಾಕಿ ಇಂಡಿಯಾದಿಂದ ಹೊಸ ಕೋಚ್ ಹುಡುಕಾಟ
ನವದೆಹಲಿ: ವಿಶ್ವಕಪ್ ವೈಫಲ್ಯದ ಹೊಣೆ ಹೊತ್ತು ಕೋಚ್ ಹುದ್ದೆಯಿಂದ ಗ್ರಹಾಮ್ ರೀಡ್ ಕೆಳಗಿಳಿದ ಬಳಿಕ ಭಾರತ ಪುರುಷರ ಹಾಕಿ ತಂಡಕ್ಕೆ ನೂತನ ಕೋಚ್ ಆಯ್ಕೆ ಮಾಡಲು ಹಾಕಿ ಇಂಡಿಯಾ ಹುಡುಕಾಟ ಆರಂಭಿಸಿದೆ. ಕೋಚ್ ಹುದ್ದೆಗೆ ತನ್ನ ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿರುವ ಸಂಸ್ಥೆಯು ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಫೆಬ್ರವರಿ 15ರ ಗಡುವು ನೀಡಿದೆ.
2024ರ ಡಿಸೆಂಬರ್ ವರೆಗೂ ಹುದ್ದೆ ಒದಗಿಸುವ ಪ್ರಸ್ತಾಪವಿರಿಸಿರುವ ಹಾಕಿ ಇಂಡಿಯಾ, 2023ರ ಏಷ್ಯನ್ ಗೇಮ್ಸ್, 2024ರ ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು ಕೋಚ್ ಆಯ್ಕೆ ಮಾಡಬೇಕಿದೆ. ಸ್ಪೇನ್ ತಂಡದ ಕೋಚ್ ಅರ್ಜೆಂಟೀನಾದ ಮ್ಯಾಕ್ಸ್ ಕಾಲ್ಡಸ್, ಪಾಕಿಸ್ತಾನದ ಕೋಚ್ ಆಗಿದ್ದ ನೆದರ್‌ಲೆಂಡ್ಸ್‌ನ ಸೀಜ್‌ಫ್ರೈಡ್ ಐಕ್‌ಮನ್ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ಹುದ್ದೆಗೆ ಭಾರತೀಯರನ್ನು ಪರಿಗಣಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
ಜಾಬ್ರೆಬ್ ಓಪನ್ ಕುಸ್ತಿ: ಭಾರತದ ಅಮನ್‌ಗೆ ಕಂಚು
ಜಾಗ್ರೆಬ್(ಕ್ರೊವೇಷಿಯಾ): ಭಾರತದ ಅಮನ್ ಸೆಹ್ರಾವತ್ ಇಲ್ಲಿ ನಡೆಯುತ್ತಿರುವ ಜಾಗ್ರೆಬ್ ಓಪನ್ ಕುಸ್ತಿ ಚಾಂಪಿಯನ್‌ಶಿಪ್‌ನ ಪುರುಷರ 57 ಕೆ.ಜಿ. ಫ್ರೀ ಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಕಂಚಿಗಾಗಿ ನಡೆದ ಪಂದ್ಯದಲ್ಲಿ ಅವರು ಅಮೆರಿಕದ ರೋಡ್‌್ಸ ರಿಚರ್ಡ್ಸ್ ವಿರುದ್ಧ 10-4ರಲ್ಲಿ ಗೆದ್ದರು. ಭಾರತೀಯ ಕುಸ್ತಿ ಫೆಡರೇಷನ್ ವಿರುದ್ಧ ಧರಣಿ ನಡೆಸಿ ತಾರಾ ಕುಸ್ತಿಪಟುಗಳು ವರ್ಷದ ಮೊದಲ ಅಂ.ರಾ. ಟೂರ್ನಿಗೆ ಗೈರಾಗಿದ್ದಾರೆ.
ಖೇಲೋ ಇಂಡಿಯಾ: ರಾಜ್ಯಕ್ಕೆ ಮತ್ತೆ 4 ಪದಕ
ಭೋಪಾಲ್: 5ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಗುರುವಾರ ಕರ್ನಾಟಕಕ್ಕೆ ಮತ್ತೆ 4 ಪದಕ ದೊರೆತಿದೆ. ಅಂಡರ್-18 ಬಾಲಕರ ಸೈಕ್ಲಿಂಗ್ 10000 ಮೀ. ಟೈಮ್ ಟ್ರಯಲ್‌ನಲ್ಲಿ ಸಂಪತ್ ಚಿನ್ನ ಗೆದ್ದರೆ, ಟೀಂ ಸ್ಟ್ರಿಂಟ್ ವಿಭಾಗದಲ್ಲಿ ರಾಜ್ಯದ ಬಾಲಕರು ಕಂಚು ಪಡೆದರು.
ನಾನು ಪೂಜೆ-ಗೀಜೆ ಮಾಡುವ ವ್ಯಕ್ತಿಯಂತೆ ಕಾಣ್ತೀನಾ? ವಿರಾಟ್ ಕೊಹ್ಲಿ ನೀಡಿದ್ದ ಈ ಹಿಂದಿನ ಹೇಳಿಕೆ ಈಗ ವೈರಲ್..!
ಅಂಡರ್-18 ಕಯಾಕಿಂಗ್-4 ಸ್ಟ್ರಿಂಟ್ ಸ್ಪರ್ಧೆಯಲ್ಲಿ ಕರ್ನಾಟಕ ಬಾಲಕರ ತಂಡ ಕಂಚಿನ ಪದಕ ಜಯಿಸಿತು. ಇನ್ನು ಅಂಡರ್-18 ಬಾಲಕರ 10 ಮೀ. ಏರ್ ರೈಫಲ್ ಶೂಟಿಂಗ್‌ನಲ್ಲಿ ನರೇನ್ ಪ್ರಣವ್ ಬೆಳ್ಳಿ ಪದಕ ಜಯಿಸಿದರು. ಕರ್ನಾಟಕ ಒಟ್ಟು 6 ಪದಕಗಳೊಂದಿಗೆ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.