ನೈಟ್‌ರೈಡ​ರ್ಸ್’ಗೆ ಸನ್‌ರೈಸ​ರ್ಸ್ ಸವಾಲು

By Web DeskFirst Published Mar 24, 2019, 12:00 PM IST
Highlights

ಭಾರತದ ವೇಗಿ ಭುವನೇಶ್ವರ್‌ ಕುಮಾರ್‌ಗೆ ತಂಡ ಉಪನಾಯಕನ ಪಟ್ಟ ನೀಡಿದ್ದು, ಭಾನುವಾರದ ಪಂದ್ಯದಲ್ಲಿ ಸನ್‌ರೈಸ​ರ್ಸ್ ಪಡೆಯನ್ನು ಭುವಿ ಮುನ್ನಡೆಸಲಿದ್ದಾರೆ. ಜತೆಗೆ ಬೌಲಿಂಗ್‌ ವಿಭಾಗದ ಹೊಣೆ ಸಹ ಭುವನೇಶ್ವರ್‌ ಮೇಲೆಯೇ ಇದೆ.

ಕೋಲ್ಕತಾ[ಮಾ.24]: 2018ರ ಐಪಿಎಲ್‌ನ ರನ್ನರ್‌-ಅಪ್‌ ಸನ್‌ರೈಸ​ರ್ಸ್ ಹೈದರಾಬಾದ್‌ ತಂಡ 12ನೇ ಆವೃತ್ತಿಯ ಅಭಿಯಾನವನ್ನು ಭಾನುವಾರ ಆರಂಭಿಸಲಿದ್ದು, ಇಲ್ಲಿನ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಕೋಲ್ಕತಾ ನೈಟ್‌ರೈಡ​ರ್ಸ್ ವಿರುದ್ಧ ಸೆಣಸಲಿದೆ. ಚೆಂಡು ವಿರೂಪಗೊಳಿಸಿ ನಿಷೇಧಕ್ಕೊಳಗಾಗಿದ್ದ ಡೇವಿಡ್‌ ವಾರ್ನರ್‌, ಕಳೆದ ಆವೃತ್ತಿಯಲ್ಲಿ ಆಡಿರಲಿಲ್ಲ. ಈ ವರ್ಷ ವಾರ್ನರ್‌ ಐಪಿಎಲ್‌ಗೆ ವಾಪಸಾಗಿದ್ದು, ಎಲ್ಲರ ಕಣ್ಣು ಆಸ್ಪ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಮೇಲಿದೆ.

ವಾರ್ನರ್‌ ವಾಪಸಾದರೂ, ಸನ್‌ರೈಸ​ರ್ಸ್ ತಂಡ ಕಳೆದ ವರ್ಷ ತಂಡವನ್ನು ಫೈನಲ್‌ ವರೆಗೂ ಕೊಂಡೊಯ್ದಿದ್ದ ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ರನ್ನೇ ನಾಯಕನನ್ನಾಗಿ ಮುಂದುವರಿಸಿದೆ. ಆದರೆ ಬಾಂಗ್ಲಾದೇಶ ವಿರುದ್ಧ ಸರಣಿ ವೇಳೆ ಗಾಯಗೊಂಡಿದ್ದ ವಿಲಿಯಮ್ಸನ್‌ ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಹೀಗಾಗಿ ಮೊದಲ ಕೆಲ ಪಂದ್ಯಗಳಿಗೆ ಅವರು ಲಭ್ಯರಿರುವುದಿಲ್ಲ. ಭಾರತದ ವೇಗಿ ಭುವನೇಶ್ವರ್‌ ಕುಮಾರ್‌ಗೆ ತಂಡ ಉಪನಾಯಕನ ಪಟ್ಟ ನೀಡಿದ್ದು, ಭಾನುವಾರದ ಪಂದ್ಯದಲ್ಲಿ ಸನ್‌ರೈಸ​ರ್ಸ್ ಪಡೆಯನ್ನು ಭುವಿ ಮುನ್ನಡೆಸಲಿದ್ದಾರೆ. ಜತೆಗೆ ಬೌಲಿಂಗ್‌ ವಿಭಾಗದ ಹೊಣೆ ಸಹ ಭುವನೇಶ್ವರ್‌ ಮೇಲೆಯೇ ಇದೆ.

ಸನ್‌ರೈಸ​ರ್ಸ್ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ಬಲಿಷ್ಠವಾಗಿದೆ. ವಾರ್ನರ್‌, ಮನೀಶ್‌ ಪಾಂಡೆ, ಯೂಸುಫ್‌ ಪಠಾಣ್‌, ದೀಪಕ್‌ ಹೂಡಾರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಬಲಿವಿದೆ. ಭುವಿ ಜತೆ ಸಿದ್ಧಾರ್ಥ್ ಕೌಲ್‌, ರಶೀದ್‌ ಖಾನ್‌, ಶಕೀಬ್‌ ಅಲ್‌ ಹಸನ್‌, ಶಾಬಾಜ್‌ ನದೀಂ ರಂತಹ ಅತ್ಯುತ್ತಮ ಬೌಲರ್‌ಗಳಿದ್ದಾರೆ.

ಮತ್ತೊಂದೆಡೆ ಕೆಕೆಆರ್‌ ತಂಡವನ್ನು ದಿನೇಶ್‌ ಕಾರ್ತಿಕ್‌ ಮುನ್ನಡೆಸಲಿದ್ದು, ತಂಡ ತವರಿನಲ್ಲಿ ಶುಭಾರಂಭ ಮಾಡಲು ಎದುರು ನೋಡುತ್ತಿದೆ. ಕಾರ್ತಿಕ್‌ ತಂಡವನ್ನು ಪ್ರಶಸ್ತಿಯತ್ತ ಕೊಂಡೊಯ್ಯವ ಜತೆಗೆ ವೈಯಕ್ತಿಕ ಪ್ರದರ್ಶನದ ಮೇಲೂ ಹೆಚ್ಚು ಗಮನ ಹರಿಸಬೇಕಾದ ಒತ್ತಡದಲ್ಲಿದ್ದಾರೆ. ವಿಶ್ವಕಪ್‌ ತಂಡದಲ್ಲಿ ಮೀಸಲು ವಿಕೆಟ್‌ ಕೀಪರ್‌ ಸ್ಥಾನವನ್ನು ಪಡೆಯಬೇಕಿದ್ದರೆ ಈ ಐಪಿಎಲ್‌ನಲ್ಲಿ ಕಾರ್ತಿಕ್‌ ಮಿಂಚಬೇಕಿದೆ.

ಆ್ಯಂಡ್ರೆ ರಸೆಲ್‌ ಜತೆ ಈ ಬಾರಿ ಕಾರ್ಲೋಸ್‌ ಬ್ರಾಥ್‌ವೇಟ್‌ ಸಹ ಕೆಕೆಆರ್‌ ಪರ ಆಲ್ರೌಂಡರ್‌ ಆಗಿ ಆಡಲಿದ್ದಾರೆ. ಕ್ರಿಸ್‌ ಲಿನ್‌ ಜತೆ ಸುನಿಲ್‌ ನರೈನ್‌ ಈ ಬಾರಿಯೂ ಆರಂಭಿಕನಾಗಿ ಆಡುವ ನಿರೀಕ್ಷೆ ಇದೆ. ಶುಭ್‌ಮನ್‌ ಗಿಲ್‌, ರಾಬಿನ್‌ ಉತ್ತಪ್ಪ, ನಿತೀಶ್‌ ರಾಣಾರಂತಹ ದೇಸಿ ಬ್ಯಾಟಿಂಗ್‌ ತಾರೆಯರು ತಂಡದಲ್ಲಿದ್ದಾರೆ. ಕುಲ್ದೀಪ್‌ ಯಾದವ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಒಟ್ಟು ಮುಖಾಮುಖಿ: 15

ಸನ್‌ರೈಸ​ರ್ಸ್: 06

ಕೆಕೆಆರ್‌: 09

ಸಂಭವನೀಯ ತಂಡಗಳು
ಸನ್‌ರೈಸ​ರ್ಸ್: ಡೇವಿಡ್‌ ವಾರ್ನರ್‌, ಜಾನಿ ಬೇರ್‌ಸ್ಟೋವ್‌, ಮನೀಶ್‌ ಪಾಂಡೆ, ವಿಜಯ್‌ ಶಂಕರ್‌, ಶಕೀಬ್‌ ಅಲ್‌ ಹಸನ್‌, ದೀಪಕ್‌ ಹೂಡಾ, ರಶೀದ್‌ ಖಾನ್‌, ಭುವನೇಶ್ವರ್‌ ಕುಮಾರ್‌(ನಾಯಕ), ಶಾಬಾಜ್‌ ನದೀಂ, ಸಿದ್ಧಾರ್ಥ್ ಕೌಲ್‌, ಖಲೀಲ್‌ ಅಹ್ಮದ್‌.

ಕೆಕೆಆರ್‌: ಕ್ರಿಸ್‌ ಲಿನ್‌, ಸುನಿಲ್‌ ನರೈನ್‌, ರಾಬಿನ್‌ ಉತ್ತಪ್ಪ, ನಿತೀಶ್‌ ರಾಣಾ, ದಿನೇಶ್‌ ಕಾರ್ತಿಕ್‌, ಆ್ಯಂಡ್ರೆ ರಸೆಲ್‌, ಶುಭ್‌ಮನ್‌ ಗಿಲ್‌, ಕುಲ್ದೀಪ್‌ ಯಾದವ್‌, ಪೀಯೂಷ್‌ ಚಾವ್ಲಾ, ಲಾಕಿ ಫಗ್ರ್ಯೂಸನ್‌, ಪ್ರಸಿದ್ಧ್ ಕೃಷ್ಣ.

ಪಂದ್ಯ ಆರಂಭ: ಸಂಜೆ 4ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

ಪಿಚ್‌ ರಿಪೋರ್ಟ್‌

ಈಡನ್‌ ಗಾರ್ಡನ್ಸ್‌ ಅನ್ನು ಸದಾ ಬ್ಯಾಟಿಂಗ್‌ ಸ್ನೇಹಿ ಪಿಚ್‌ ಎಂದೇ ಪರಿಗಣಿಸಲಾಗುತ್ತದೆ. ಸ್ಪಿನ್ನರ್‌ಗಳಿಗೂ ಪಿಚ್‌ ಸಹಕಾರಿಯಾಗಿರಲಿದೆ. ಇಲ್ಲಿ 70 ಐಪಿಎಲ್‌ ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟ್‌ ಮಾಡಿದ ತಂಡ 27ರಲ್ಲಿ ಗೆದ್ದರೆ, 43 ಬಾರಿ 2ನೇ ಬ್ಯಾಟಿಂಗ್‌ ಮಾಡಿದ ತಂಡ ಜಯಿಸಿದೆ.
 

click me!