
ಕಾನ್ಪುರ(ಮೇ.13): ನಾಯಕ ಡೇವಿಡ್ ವಾರ್ನರ್(69*), ಆಲ್ರೌಂಡರ್ ವಿಜಯ್ ಶಂಕರ್(63*) ಅದ್ಭುತ ಜತೆಯಾಟ ಹಾಗೂ ಮೊಹಮ್ಮದ್ ಸಿರಾಜ್(32/4) ಆಕ್ರಮಣಕಾರಿ ಆಟದ ನೆರವಿನಿಂದ ಹಾಲಿ ಚಾಂಪಿಯನ್ ಸನ್'ರೈಸರ್ಸ್ ಹೈದರಾಬಾದ್ ತಂಡ ತನ್ನ ಕಡೆಯ ಲೀಗ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ಎದುರು 8 ವಿಕೆಟ್'ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದ ಮೂಲಕ ಮತ್ತೊಮ್ಮೆ ವಾರ್ನರ್ ಪಡೆ ಪ್ಲೇ-ಆಫ್ ಹಂತಕ್ಕೇರಿದೆ.
ಇಲ್ಲಿನ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಸನ್'ರೈಸರ್ಸ್ ಪಾಲಿನ ಮಹತ್ವದ ಪಂದ್ಯದಲ್ಲಿ ಗುಜರಾತ್ ಪಡೆ ನೀಡಿದ 155 ರನ್'ಗಳ ಸಾಧಾರಣ ಗುರಿ ಬೆನ್ನಟ್ಟಿದ ವಾರ್ನರ್ ಪಡೆ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಸನ್'ರೈಸರ್ಸ್ ಪಾಲಿನ ಮಹತ್ವದ ಪಂದ್ಯದಲ್ಲಿ ಸಾದಾರಣ ಗುರಿ ಬೆನ್ನತ್ತಿದ ವಾರ್ನರ್ ಪಡೆ ಕೇವಲ 25 ರನ್'ಗಳಿಸುವಷ್ಟರಲ್ಲೇ ಆರಂಭಿಕ ಆಟಗಾರ ಶಿಖರ್ ಧವನ್ ಹಾಗೂ ಮೋಸೆಸ್ ಹೆನ್ರಿಕ್ಸ್ ವಿಕೆಟ್ ಸಂಕಷ್ಟ ಎದುರಿಸುವ ಪರಿಸ್ಥಿತಿ ಉಂಟಾಯಿತು. ಆದರೆ ಆನಂತರ ಎಚ್ಚರಿಕೆಯ ಆಟವಾಡಿದ ನಾಯಕ ವಾರ್ನರ್ ಹಾಗೂ ತಮಿಳುನಾಡು ಆಲ್ರೌಂಡರ್ ವಿಜಯ್ ಶಂಕರ್ ಆಸರೆಯಾದರು. ಈ ಜೋಡಿ 3ನೇ ವಿಕೆಟ್'ಗೆ ಮುರಿಯದ 133 ರನ್ ಜತೆಯಾಟವಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇಬ್ಬರೂ ಸಹ ಅಜೇಯ ಅರ್ಧಶತಕ ಸಿಡಿಸಿದರು. ವಿಜಯ್'ಗಿದು ಐಪಿಎಲ್'ನಲ್ಲಿ ಚೊಚ್ಚಲ ಅರ್ಧಶತಕವಾದರೆ, ವಾರ್ನರ್‌ಗೆ ೩೬ನೇ ಅರ್ಧಶತಕ.
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ಲಯನ್ಸ್ ಅದ್ಭುತ ಆರಂಭವನ್ನೇ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಡ್ವೇನ್ ಸ್ಮಿತ್(54) ಮತ್ತು ಇಶಾನ್ ಕಿಶನ್(61) ಮೊದಲ ವಿಕೆಟ್'ಗೆ ಕೇವಲ 10.5 ಓವರ್'ಗಳಲ್ಲಿ 111ರನ್ ಕಲೆಹಾಕಿ ತಂಡಕ್ಕೆ ಭದ್ರ ಬುನಾದಿ ಹಾಕಿತು. ಆದರೆ ನಂತರ ಪಂದ್ಯದಲ್ಲಿ ಭರ್ಜರಿ ಕಮ್'ಬ್ಯಾಕ್ ಮಾಡಿದ ಸನ್'ರೈಸರ್ಸ್ ತಂಡದ ಬೌಲರ್'ಗಳು ಗುಜರಾತ್ ಬ್ಯಾಟ್ಸ್'ಮನ್'ಗಳನ್ನು 154ರನ್'ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಸನ್'ರೈಸರ್ಸ್ ಹೈದರಾಬಾದ್ ಪರ ಮೊಹಮ್ಮದ್ ಸಿರಾಜ್ 4 ವಿಕೆಟ್ ಪಡೆದರೆ, ರಶೀದ್ ಖಾನ್ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ಇನ್ನು ಭುವನೇಶ್ವರ್ ಕುಮಾರ್ ಎರಡು ವಿಕೆಟ್'ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.
ಸಂಕ್ಷಿಪ್ತ ಸ್ಕೋರ್
ಗುಜರಾತ್ ಲಯನ್ಸ್: 154/10
ಇಶಾನ್ ಕಿಶನ್ : 61
ಡ್ವೇನ್ ಸ್ಮಿತ್ : 54
ಮೊಹಮ್ಮದ್ ಸಿರಾಜ್ :32/4
ಸನ್'ರೈಸರ್ಸ್ ಹೈದರಾಬಾದ್: 158/2
ಡೇವಿಡ್ ವಾರ್ನರ್ : 69*
ವಿಜಯ್ ಶಂಕರ್ : 63*
ಪ್ರವೀಣ್ ಕುಮಾರ್ : 22/2
ಪಂದ್ಯಪುರುಷೋತ್ತಮ : ಮೊಹಮ್ಮದ್ ಸಿರಾಜ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.