
ಚೆನ್ನೈ(ನ.15): 2018ರ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿಗೂ ಮುನ್ನ ತಂಡಗಳು ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು ಎನ್ನುವುದನ್ನು ಐಪಿಎಲ್ ಆಡಳಿತ ಸಮಿತಿ ಇನ್ನೊಂದು ವಾರದಲ್ಲಿ ತಿಳಿಸಲಿದೆ. ಪ್ರತಿ ತಂಡಕ್ಕೂ ಇಬ್ಬರು ಭಾರತೀಯರು, ಒಬ್ಬ ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಹೇಳಲಾಗುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ತಾನು ಉಳಿಸಿಕೊಳ್ಳಬೇಕಿರುವ ಆಟಗಾರರು ಯಾರ್ಯಾರು ಎನ್ನುವುದನ್ನು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
2 ವರ್ಷಗಳ ನಿಷೇಧದ ಬಳಿಕ ಐಪಿಎಲ್'ಗೆ ವಾಪಸಾಗುತ್ತಿರುವ ಸಿಎಸ್'ಕೆ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳಿಗೆ ಕಳೆದ ಆವೃತ್ತಿಯಲ್ಲಿ ಗುಜರಾತ್ ಲಯನ್ಸ್ ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದಲ್ಲಿ ಆಡಿದ್ದ ಆಟಗಾರರನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗುವುದು.
ತಮಿಳಿನ ದಿನಪತ್ರಿಕೆಯೊಂದರ ಪ್ರಕಾರ, ಸಿಎಸ್'ಕೆ ತಂಡದ ಆಡಳಿತ ಎಂ.ಎಸ್. ಧೋನಿ, ಆರ್. ಅಶ್ವಿನ್ ಹಾಗೂ ಫಾಫ್ ಡು ಪ್ಲೆಸಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ. ಈ ಹಿಂದೆ ಮೂವರು ಚೆನ್ನೈ ತಂಡದಲ್ಲಿದ್ದರು. 2008 ರಿಂದ 2015ರ ವರೆಗೂ ಧೋನಿ, ಸಿಎಸ್'ಕೆ ನಾಯಕರಾಗಿ ಯಶ ಕಂಡಿದ್ದರು.
ರೈನಾ, ಜಡೇಜಾಗಿಲ್ಲ ಆದ್ಯತೆ?:
ಕೇವಲ 3 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಐಪಿಎಲ್ ಆಡಳಿತ ಸಮಿತಿ ಅನುಮತಿ ನೀಡಲಿದೆ ಎನ್ನಲಾಗಿದ್ದು, ಸುರೇಶ್ ರೈನಾ, ರವೀಂದ್ರ ಜಡೇಜಾ ಅವರನ್ನು ಉಳಿಸಿಕೊಳ್ಳದೆ ಹರಾಜಿಗೆ ಬಿಡಲು ಸಿಎಸ್'ಕೆ ನಿರ್ಧರಿಸಿದೆ ಎನ್ನಲಾಗಿದೆ. ನ. 21ರಂದು ಆಟಗಾರರ ಉಳಿಸಿಕೊಳ್ಳುವಿಕೆ ಸಂಬಂಧ ಐಪಿಎಲ್ ಆಡಳಿತ ಸಮಿತಿ ನಿಯಮಾವಳಿಯನ್ನು ಹೊರತರಲಿದ್ದು, 11ನೇ ಆವೃತ್ತಿಗೆ ಸುಮಾರು 500ಕ್ಕೂ ಹೆಚ್ಚು ಆಟಗಾರರು ಹರಾಜಿಗೆ ಲಭ್ಯರಾಗುವ ಸಾಧ್ಯತೆ ಇದೆ. 2018ರ ಫೆಬ್ರವರಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.