
ಬೆಂಗಳೂರು(ಏ.13): ಕ್ರಿಕೆಟ್'ನಲ್ಲಿ ಬ್ಯಾಟ್ಸ್'ಮನ್ ಬ್ಯಾಟಿಂಗ್ ಅಬ್ಬರವನ್ನು ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ. ಅದರಲ್ಲೂ ಟಿ20 ಕ್ರಿಕೆಟ್ ಪರಿಚಿತವಾದ ಮೇಲಂತೂ ಬ್ಯಾಟ್ಸಮನ್'ಗಳ ಹೊಡಿಬಡಿ ಆಟಕ್ಕೆ ಇನ್ನಷ್ಟು ಕಿಕ್ ಸಿಕ್ಕಂತಾಗಿದೆ. ಭುಜಬಲದ ಜೊತೆಗೆ ಕೌಶಲ್ಯಯುಕ್ತವಾಗಿ ಬೌಂಡರಿ ಗೆರೆದಾಟಿಸುವ ಬ್ಯಾಟ್ಸ್'ಮನ್'ಗಳ ಚಾಕಚಕ್ಯತೆಗೆ ನಿಜಕ್ಕೂ ಸಲಾಂ ಎನ್ನಲೇಬೇಕು.
ಟಿ20 ಕ್ರಿಕೆಟ್ ಆರಂಭಕ್ಕೂ ಮುನ್ನ ಏಕದಿನ ಕ್ರಿಕೆಟ್'ನಲ್ಲಿ ಬ್ಯಾಟ್ಸ್'ಮನ್'ಗಳು ಸಿಕ್ಸರ್ ಬಾರಿಸುವ ಅಪರೂಪದ ಕ್ಷಣಗಳನ್ನು ಕಂಡು ಅಭಿಮಾನಿಗಳು ರೋಮಾಂಚಿತರಾಗುತ್ತಿದ್ದರು. ಹಾಗೆಯೇ ಏಕದಿನ ಕ್ರಿಕೆಟ್'ನಲ್ಲಿ ಗರಿಷ್ಟ ರನ್ ಬಾರಿಸಿದ ಟಾಪ್ 5 ತಂಡಗಳ ಪಟ್ಟಿ ನಿಮ್ಮ ಮುಂದೆ...
1. ಇಂಡಿಯಾ - 2252 ಸಿಕ್ಸರ್'ಗಳು
ಕ್ರಿಕೆಟ್ ಜಗತ್ತಿಗೆ ಅತ್ಯದ್ಭುತ ಬ್ಯಾಟ್ಸಮನ್'ಗಳನ್ನು ನೀಡಿದ ಟೀಂ ಇಂಡಿಯಾ ಕಳೆದೆರಡು ದಶಕಗಳಿಂದಲೂ ಏಕದಿನ ಕ್ರಿಕೆಟ್'ನಲ್ಲಿ ಬಲಿಷ್ಟ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿದೆ. ನವಜೋತ್ ಸಿಂಗ್ ಸಿಧು, ಕೆ. ಶ್ರೀಕಾಂತ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಎಂ ಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತ ಬ್ಯಾಟ್ಸಮನ್'ಗಳು ಕಲಾತ್ಮಕವಾಗಿಯೂ ಸಿಕ್ಸರ್ ಸಿಡಿಸುವುದರಲ್ಲಿ ಎತ್ತಿದ ಕೈ ಎಂದು ವಿವರಿಸಿ ಹೇಳಬೇಕಿಲ್ಲ. ಇಂತಹ ಬಲಿಷ್ಟ ಬ್ಯಾಟ್ಸ್'ಮನ್'ಗಳಂತಹ ಆಟಗಾರರ ಸಹಾಯದಿಂದ ಟೀಂ ಇಂಡಿಯಾ ತಾನಾಡಿದ 897 ಪಂದ್ಯಗಳಲ್ಲಿ 2252 ಸಿಕ್ಸರ್'ಗಳನ್ನು ಸಿಡಿಸಿ ಏಕದಿನ ಕ್ರಿಕೆಟ್'ನಲ್ಲಿ ಗರಿಷ್ಟ ಸಿಕ್ಸರ್ ಸಿಡಿಸಿದ ಅಗ್ರ ತಂಡ ಎನ್ನುವ ಖ್ಯಾತಿಗೆ ಭಾಜನವಾಗಿದೆ.
2. ವೆಸ್ಟ್ ಇಂಡೀಸ್: 2160 ಸಿಕ್ಸರ್
ಈ ಅಂಕಿಸಂಖ್ಯೆಯಲ್ಲೇನಾದರೂ ಆಶ್ಚರ್ಯವಿದೆಯಾ..? ಖಂಡಿತಾ ಈ ಕುರಿತು ಯಾರಿಗೂ ಯಾವುದೇ ಆಶ್ಚರ್ಯವಿರಲಾರದು. ಚೊಚ್ಚಲ ಏಕದಿನ ವಿಶ್ವಕಪ್ ಎತ್ತಿಹಿಡಿದು 2016ರ ಟಿ20 ವಿಶ್ವಕಪ್ ಗೆಲ್ಲುವವೆರಗೂ ಕೆರಿಬಿಯನ್ ಪಡೆ ವಿಶ್ವಾಸವಿಟ್ಟಿದ್ದು ಬಲಿಷ್ಟ ಬ್ಯಾಟ್ಸಮನ್'ಗಳ ಭುಜಭಲದ ಮೇಲೆ ಎಂದರೆ ಅತಿಶಯೋಕ್ತಿಯಲ್ಲ. ಸರ್ ವೀವ್ ರಿಚರ್ಡ್'ಸನ್'ರಿಂದ ಹಿಡಿದು ಕ್ರಿಸ್ ಗೇಲ್, ಡ್ವೇನ್ ಸ್ಮಿತ್, ಕಿರಾನ್ ಪೋಲ್ಲಾರ್ಡ್, ಕಾರ್ಲೋಸ್ ಬ್ರಾಥ್'ವೈಟ್'ರಂಥಹ ಬ್ಯಾಟ್ಸಮನ್'ಗಳು ಭರ್ಜರಿ ಸಿಕ್ಸರ್'ಗಳನ್ನು ಸಿಡಿಸುವ ಮೂಲಕ ಎದುರಾಳಿ ಬೌಲರ್'ಗಳ ಎದೆಯಲ್ಲಿ ಅಕ್ಷರಶಃ ನಡುಕ ಹುಟ್ಟಿಸಿಬಿಟ್ಟಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ಇಲ್ಲಿಯವರೆಗೆ ವೆಸ್ಟ್'ಇಂಡೀಸ್ ತಂಡ 736 ಪಂದ್ಯಗಳಲ್ಲಿ 2160 ಸಿಕ್ಸರ್'ಗಳನ್ನು ಬಾರಿಸಿದೆ.
3. ಪಾಕಿಸ್ತಾನ : 2136 ಸಿಕ್ಸರ್
ಕಳೆದೊಂದು ದಶಕದಲ್ಲಿ ಸಾಕಷ್ಟು ಸ್ಫೋಟಕ ಬ್ಯಾಟ್ಸ್'ಮನ್'ಗಳನ್ನು ಕ್ರಿಕೆಟ್ ಜಗತ್ತಿಗೆ ನೀಡಿದ ಕೀರ್ತಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸಲ್ಲುತ್ತದೆ. ಏಕದಿನ ಕ್ರಿಕೆಟ್'ನಲ್ಲಿ ಗರಿಷ್ಟ ಸಿಕ್ಸರ್ ಸಿಡಿಸಿ ದಾಖಲೆ ಬರೆದ ಶಾಹಿದ್ ಅಫ್ರಿದಿ ಕೂಡಾ ಪಾಕಿಸ್ತಾನ ತಂಡದವರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಯೀದ್ ಅನ್ವರ್, ಇಂಜಮಾಮ್ ಉಲ್ ಹಕ್, ಯೂನಿಸ್ ಖಾನ್, ಮಿಸ್ಬಾ ಉಲ್ ಹಕ್ ಅವರಂತಹ ಬ್ಯಾಟ್ಸ್'ಮನ್'ಗಳು ಸಾವಿರಾರು ರನ್'ಗಳನ್ನು ಸಿಕ್ಸರ್'ಗಳಿಂದಲೇ ಕಲೆಹಾಕುವುದ ಅವರ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಇಲ್ಲಿಯವರೆಗೆ ಪಾಕಿಸ್ತಾನ ತಂಡ 857 ಪಂದ್ಯಗಳನ್ನಾಡಿದ್ದು 2136 ಸಿಕ್ಸರ್'ಗಳನ್ನು ಬಾರಿಸಿದೆ.
4. ಆಸ್ಟ್ರೇಲಿಯಾ : 1944 ಸಿಕ್ಸರ್'ಗಳು
ಒಂದರ್ಥದಲ್ಲಿ ಏಕದಿನ ಕ್ರಿಕೆಟ್'ನಲ್ಲಿ ಸಾಮ್ರಾಟನಾಗಿ ಮೆರದ ತಂಡವೆಂದರೆ ಅದು ಆಸ್ಟ್ರೇಲಿಯಾ ಎಂದು ಯಾವುದೇ ಮುಲಾಜಿಲ್ಲದೇ ಹೇಳಬಹುದೇನೊ. ಏಕೆಂದರೆ ಐದು ಬಾರಿ ಏಕದಿನ ವಿಶ್ವಕಪ್ ಚಾಂಪಿಯನ್ ಹಾಗೂ ಎರಡು ಬಾರಿ ರನ್ನರ್'ಅಪ್ ಸಾಧನೆ ಮಾಡಿರುವ ಆಸ್ಟ್ರೇಲಿಯಾ ಸಿಕ್ಸರ್ ಸಿಡಿಸುವಲ್ಲಿ ಮಾತ್ರ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಹ ಸಾಧನೆ ಮಾಡಿದೆ. ಸ್ಟೀವ್ ವಾ, ರಿಕಿ ಪಾಂಟಿಂಗ್, ಮೈಕಲ್ ಬೇವನ್, ಆ್ಯಡಂ ಗಿಲ್'ಕ್ರಿಸ್ಟ್, ಮ್ಯಾಥ್ಯೂ ಹೇಡನ್, ಆ್ಯಡ್ರ್ಯೂ ಸೈಮಂಡ್ಸ್, ಮೈಕಲ್ ಕ್ಲಾರ್ಕ್, ಸ್ಟೀವ್ ಸ್ಮಿತ್ ಹೀಗೆ ಸಿಕ್ಸರ್ ಬಾರಿಸುವ ಪ್ರಮುಖ ಬ್ಯಾಟ್ಸ್'ಮನ್'ಗಳನ್ನು ಪಟ್ಟಿ ಮಾಡುತ್ತಾ ಹೊರಟರೆ ಹೆಸರು ಹನುಮನ ಬಾಲದಂತೆ ಬೆಳೆಯುತ್ತಲೇ ಸಾಗುತ್ತದೆ.
ಸಾರ್ವಕಾಲಿಕ ಏಕದಿನ ಕ್ರಿಕೆಟ್ ತಂಡ ಎಂದೇ ಕರೆಸಿಕೊಳ್ಳುವ ಆಸೀಸ್ ಇಲ್ಲಿಯವರೆಗೆ 873 ಏಕದಿನ ಪಂದ್ಯಗಳನ್ನಾಡಿದ್ದು 1944 ಸಿಕ್ಸರ್'ಗಳನ್ನು ಸಿಡಿಸಿದೆ.
5. ನ್ಯೂಜಿಲ್ಯಾಂಡ್ : 1918 ಸಿಕ್ಸರ್
ಸಾಕಷ್ಟು ಪ್ರತಿಭೆಯಿದ್ದರೂ ನತದೃಷ್ಟ ತಂಡವೆಂದೇ ಕರೆಸಿಕೊಳ್ಳುವ ನ್ಯೂಜಿಲ್ಯಾಂಡ್ ತಂಡ ಗರಿಷ್ಟ ಸಿಕ್ಸರ್ ಸಿಡಿಸಿದ ತಂಡಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಟಿ20 ಕ್ರಿಕೆಟ್ ಜನ್ಮತಳೆದ ನಂತರ ಸಾಕಷ್ಟು ಬಲಿಷ್ಟ ಹೊಡೆತ ಬ್ಯಾಟ್ಸ್'ಮನ್'ಗಳು ಕಿವೀಸ್ ತಂಡದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ನ್ಯೂಜಿಲ್ಯಾಂಡ್ ಸವ್ಯಸಾಚಿ ಕ್ರಿಸ್ ಕ್ರೇನ್ಸ್'ನಿಂದ ಹಿಡಿದು ರಾಸ್ ಟೇಲರ್, ಬ್ರೆಂಡನ್ ಮೆಕ್ಲಮ್, ಮಾರ್ಟಿನ್ ಗುಪ್ಟಿಲ್, ಕೇನ್ ವಿಲಿಯಮ್ಸ್, ಕೋರಿ ಆ್ಯಂಡರ್'ಸನ್ ಅವರಂತಹ ಆಟಗಾರರು ಬಾರಿಸುವ ಸಿಕ್ಸರ್ ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ.
ನ್ಯೂಜಿಲ್ಯಾಂಡ್ ತಂಡ ಇಲ್ಲಿಯವರೆಗೆ 703 ಪಂದ್ಯಗಳನ್ನಾಡಿದ್ದು, 1918 ಸಿಕ್ಸರ್'ಗಳನ್ನು ಬಾರಿಸಿದೆ.
ಉಳಿದಂತೆ 1991ರಲ್ಲಿ ಏಕದಿನ ಕ್ರಿಕೆಟ್'ಗೆ ಪಾದಾರ್ಪಣೆ ಮಾಡಿದ ಕಲಾತ್ಮಕ ಹಾಗೂ ಸ್ಫೋಟಕ ಬ್ಯಾಟಿಂಗ್ ಕ್ರಮಾಂಕಹೊಂದಿರುವ ದಕ್ಷಿಣ ಆಫ್ರಿಕಾ ಆರನೇ ಸ್ಥಾನ(555 ಪಂದ್ಯದಲ್ಲಿ 1479 ಸಿಕ್ಸರ್) ಪಡೆದರೆ, ಶ್ರೀಲಂಕಾ 765 ಪಂದ್ಯಗಳಲ್ಲಿ 1366 ಸಿಕ್ಸರ್ ಸಿಡಿಸುವ ಮೂಲಕ ಏಳನೇ ಸ್ಥಾನದಲ್ಲಿದೆ.
ಇನ್ನು ಇಡೀ ಜಗತ್ತಿಗೆ ಕ್ರಿಕೆಟ್ ಪರಿಚಯಿಸಿದ ಇಂಗ್ಲೆಂಡ್ ಎಂಟನೇ ಸ್ಥಾನಕ್ಕೆ(664 ಪಂದ್ಯಗಳಲ್ಲಿ 1315 ಸಿಕ್ಸರ್) ತೃಪ್ತಿಪಟ್ಟುಕೊಂಡರೆ, ಜಿಂಬಾಬ್ವೆ(472 ಪಂದ್ಯಗಳಲ್ಲಿ 984 ಸಿಕ್ಸರ್) ಹಾಗೂ ಬಾಂಗ್ಲಾದೇಶ ತಂಡ 312 ಪಂದ್ಯಗಳಲ್ಲಿ 586 ಸಿಕ್ಸರ್ ಸಿಡಿಸಿ ಕೊನೆಯ ಎರಡು ಸ್ಥಾನಗಳಲ್ಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.