
ಬೆಂಗಳೂರು[ಅ.13]: ಇಂಗ್ಲೆಂಡ್ ತಂಡದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಜಾನಿ ಬೇರ್’ಸ್ಟೋ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 2 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಅತಿವೇಗವಾಗಿ 2 ಸಾವಿರ ರನ್ ಪೂರೈಸಿದ ಜಗತ್ತಿನ 9ನೇ ಕ್ರಿಕೆಟಿಗ ಎನ್ನುವ ಕೀರ್ತಿಗೆ ಬೇರ್’ಸ್ಟೋ ಪಾತ್ರರಾಗಿದ್ದಾರೆ.
2017ರಿಂದೀಚೆಗೆ ಏಕದಿನ ಕ್ರಿಕೆಟ್’ನಲ್ಲಿ ಇಂಗ್ಲೆಂಡ್ ಪರ ಆರಂಭಿಕನಾಗಿ ಬಡ್ತಿ ಪಡೆದ ಬೇರ್’ಸ್ಟೋ, 27 ಏಕದಿನ ಪಂದ್ಯಗಳಲ್ಲಿ 56.92ರ ಸರಾಸರಿಯಲ್ಲಿ 1366 ರನ್ ಸಿಡಿಸಿದ್ದಾರೆ. ಇದರಲ್ಲಿ 6 ಶತಕಗಳು ಸೇರಿವೆ. ಶ್ರೀಲಂಕಾ ವಿರುದ್ಧ ವೈಯುಕ್ತಿಕ 5 ರನ್ ಸಿಡಿಸುತ್ತಿದ್ದಂತೆ ಪ್ರಸಕ್ತ ವರ್ಷದಲ್ಲೇ ಒಂದು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ ಬೇರ್’ಸ್ಟೋ ಈ ಮೂಲಕ ಕ್ಯಾಲೆಂಡರ್ ಇಯರ್’ನಲ್ಲಿ ಸಾವಿರ ರನ್ ಪೂರೈಸಿದ 5ನೇ ಇಂಗ್ಲೆಂಡ್ ಕ್ರಿಕೆಟಿಗ ಎನ್ನುವ ಕೀರ್ತಿಗೂ ಭಾಜನರಾಗಿದ್ದಾರೆ. ಈ ಮೊದಲು ಇಂಗ್ಲೆಂಡ್ ಪರ ಕ್ರಿಸ್ ಬ್ರಾಡ್, ಡೇವಿಡ್ ಗೋವರ್, ಪೌಲ್ ಕಾಲಿಂಗ್’ವುಡ್, ಇಯಾನ್ ಬೆಲ್, ಜೊನಾಥನ್ ಟ್ರಾಟ್ ಕ್ಯಾಲಂಡರ್ ವರ್ಷದಲ್ಲಿ ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದರು. ಇದಷ್ಟೇ ಅಲ್ಲದೇ ಕ್ರಿಸ್ ಬ್ರಾಡ್ ಬಳಿಕ ಕ್ಯಾಲಂಡರ್ ಇಯರ್’ನಲ್ಲಿ ಸಾವಿರ ರನ್ ಪೂರೈಸಿದ ಎರಡನೇ ಆರಂಭಿಕ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೂ ಬೇರ್’ಸ್ಟೋ ಪಾತ್ರರಾಗಿದ್ದಾರೆ.
ಇನ್ನು ಲಂಕಾ ವಿರುದ್ಧ 13 ರನ್ ಬಾರಿಸುತ್ತಿದ್ದಂತೆ ಏಕದಿನ ಕ್ರಿಕೆಟ್’ನಲ್ಲಿ ಎರಡು ಸಾವಿರ ರನ್ ಪೂರೈಸಿದ ಸಾಧನೆಯನ್ನು ಬೇರ್’ಸ್ಟೋ ಮಾಡಿದರು. ಕೇವಲ 49 ಇನ್ನಿಂಗ್ಸ್’ಗಳಲ್ಲಿ ಎರಡು ಸಾವಿರ ರನ್ ಪೂರೈಸುವ ಮೂಲಕ ಅತಿವೇಗವಾಗಿ 2 ಸಾವಿರ ರನ್ ಪೂರೈಸಿದ ಜಗತ್ತಿನ 9ನೇ ಬ್ಯಾಟ್ಸ್’ಮನ್ ಎನ್ನುವ ಶ್ರೇಯಕ್ಕೆ ಪಾತ್ರರಾದರು.
ಅತಿವೇಗವಾಗಿ 2 ಸಾವಿರ ರನ್ ಪೂರೈಸಿದ ಬ್ಯಾಟ್ಸ್’ಮನ್’ಗಳ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಹಾಶೀಂ ಆಮ್ಲಾ[40 ಇನ್ನಿಂಗ್ಸ್] ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಜಹೀರ್ ಅಬ್ಬಾಸ್[45], ಕೆವಿನ್ ಪೀಟರ್’ಸನ್[45], ಬಾಬರ್ ಅಜಂ[45], ಜೊನಾಥನ್ ಟ್ರಾಟ್[47], ವೀವ್ ರಿಚರ್ಡ್’ಸನ್[48], ಶಿಖರ್ ಧವನ್[48], ಗ್ರೀಜಿಡ್ಜ್[49], ಬೇರ್’ಸ್ಟೋ[49], ಗ್ಯಾರಿ ಕರ್ಸ್ಟನ್[50] ಟಾಪ್ 10ಯಲ್ಲಿ ಸ್ಥಾನ ಪಡೆದಿದ್ದಾರೆ.
ಅಚ್ಚರಿಯೆಂದರೆ ರನ್ ಮಶೀನ್ ವಿರಾಟ್ ಕೊಹ್ಲಿ ಅತಿವೇಗವಾಗಿ ಎರಡು ಸಾವಿರ ರನ್ ಪೂರೈಸಿದವರ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ. ಕೊಹ್ಲಿ 53 ಇನ್ನಿಂಗ್ಸ್’ಗಳಲ್ಲಿ 2 ಸಾವಿರ ರನ್ ಪೂರೈಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.