ಆಸೀಸ್’ಗೆ ಮತ್ತೆ ಮುಖಭಂಗ: ಸರಣಿ ಗೆದ್ದ ಹರಿಣಗಳು

By Web DeskFirst Published Nov 11, 2018, 4:46 PM IST
Highlights

ಈ ಸೋಲಿನೊಂದಿಗೆ 2018ರ ಸಾಲಿನ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದ್ದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾದ ಕನಸು ನುಚ್ಚುನೂರಾಗಿದೆ. 2018ರಲ್ಲಿ ಆಡಿದ 11 ಪಂದ್ಯದಲ್ಲಿ ಕೇವಲ 2ರಲ್ಲಿ ಮಾತ್ರ ಗೆಲುವಿನ ಸಿಹಿ ಉಂಡಿದೆ.

ಹೊಬಾರ್ಟ್[ನ.11]: ಶಾನ್ ಮಾರ್ಶ್ ಏಕಾಂಗಿ ಶತಕದಾಟದ ಹೊರತಾಗಿಯೂ ದಕ್ಷಿಣ ಆಫ್ರಿಕಾ ತಂಡ ನಿರ್ಣಾಯಕ ಪಂದ್ಯವನ್ನು ಜಯಿಸುವ ಮೂಲಕ 2-1 ಅಂತರದಲ್ಲಿ ಸರಣಿ ಜಯಿಸಿದೆ. ಈ ಸೋಲಿನೊಂದಿಗೆ 2018ರ ಸಾಲಿನ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದ್ದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾದ ಕನಸು ನುಚ್ಚುನೂರಾಗಿದೆ. 2018ರಲ್ಲಿ ಆಡಿದ 11 ಪಂದ್ಯದಲ್ಲಿ ಕೇವಲ 2ರಲ್ಲಿ ಮಾತ್ರ ಗೆಲುವಿನ ಸಿಹಿ ಉಂಡಿದೆ. 

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ಫಾಫ್ ಡುಪ್ಲೆಸಿಸ್ ಹಾಗೂ ಡೇವಿಡ್ ಮಿಲ್ಲರ್ ದಾಖಲೆಯ ಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 320 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ಕೇವಲ 280 ರನ್ ಬಾರಿಸಿ 40 ರನ್’ಗಳ ಅಂತರದ ಸೋಲಿನ ಕಹಿಯುಂಡಿತು.

ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಗೆ ಡೇಲ್ ಸ್ಟೇನ್ ಮೊದಲ ಓವರ್’ನ ಮೊದಲ ಎಸೆತದಲ್ಲೇ ಕ್ರಿಸ್ ಲಿನ್ ಬಲಿ ಪಡೆದು ಕಾಂಗರೂಗಳಿಗೆ ಶಾಕ್ ನೀಡಿದರು. ತಂಡದ ಮೊತ್ತ 40 ರನ್’ಗಳಾಗುವಷ್ಟರಲ್ಲಿ ಫಿಂಚ್-ಹೆಡ್ ಕೂಡಾ ಪೆವಿಲಿಯನ್ ಸೇರಿದರು. ಈ ಬಳಿಕ ಮಾರ್ಕ್ ಸ್ಟೋನಿಸ್-ಶಾನ್ ಮಾರ್ಶ್ ಜೋಡಿ 107 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಈ ಜೋಡಿಯನ್ನು ಪ್ರಿಟೋರಿಯರ್ಸ್ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಸ್ಟೋನಿಸ್ 63 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಮಾರ್ಶ್ 106 ರನ್ ಸಿಡಿಸಿ ಪ್ರಿಟೋರಿಯರ್ಸ್’ಗೆ ಎರಡನೇ ಬಲಿಯಾದರು. ಇದಾದ ಬಳಿಕ ಅಲೆಕ್ಸ್ ಕ್ಯಾರಿ 42 ಹಾಗೂ ಮ್ಯಾಕ್ಸ್’ವೆಲ್ 35 ರನ್ ಸಿಡಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲವಾದರು.

ಡೇಲ್ ಸ್ಟೇನ್-ಕಗಿಸೋ ರಬಾಡ ತಲಾ 3 ವಿಕೆಟ್ ಪಡೆದರೆ, ಪ್ರಿಟೋರಿಯರ್ಸ್ 2 ಮತ್ತು ಎನ್ಜಿಡಿ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಆರಂಭ ಕೂಡಾ ಉತ್ತಮವಾಗಿರಲಿಲ್ಲ. ಮೂರನೇ ಓವರ್’ನ ಮೊದಲ ಎಸೆತದಲ್ಲೇ ಕ್ವಿಂಟನ್ ಡಿಕಾಕ್ ವಿಕೆಟ್ ಒಪ್ಪಿಸಿದರು. ತಂಡದ ಮೊತ್ತ 55 ರನ್’ಗಳಾದಾಗ ಮೂವರು ಬ್ಯಾಟ್ಸ್’ಮನ್’ಗಳು ಪೆವಿಲಿಯನ್ ಸೇರಿದರು. ಈ ವೇಳೆ ಜತೆಯಾದ ಮಿಲ್ಲರ್-ಡುಪ್ಲೆಸಿಸ್ ಜೋಡಿ 4ನೇ ವಿಕೆಟ್’ಗೆ ದಾಖಲೆಯ 252 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. 

ಆಸೀಸ್ ಪರ ಮಿಚೆಲ್ ಸ್ಟಾರ್ಕ್, ಮಾರ್ಕ್ ಸ್ಟೋನಿಸ್ ತಲಾ 2 ವಿಕೆಟ್ ಪಡೆದರೇ ಜೋಸ್ ಹ್ಯಾಜಲ್’ವುಡ್ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ಆಫ್ರಿಕಾ: 320/5
ಮಿಲ್ಲರ್: 139
ಡುಪ್ಲೆಸಿಸ್: 125
ಸ್ಟಾರ್ಕ್: 57/2

ಆಸ್ಟ್ರೇಲಿಯಾ: 280/9
ಮಿಚೆಲ್ ಸ್ಟಾರ್ಕ್: 106
ಸ್ಟೋನಿಸ್: 63
ರಬಾಡ:40/3
 
 

click me!