ರಣಜಿ ಟ್ರೋಫಿ: ರೈಲ್ವೇಸ್‌ ವಿರುದ್ಧ ರಾಜ್ಯಕ್ಕೆ ಇನ್ನಿಂಗ್ಸ್‌ ಮುನ್ನಡೆ

By Web DeskFirst Published Dec 24, 2018, 9:04 AM IST
Highlights

ಮೊದಲ ದಿನದಂತ್ಯಕ್ಕೆ 9 ವಿಕೆಟ್‌ ನಷ್ಟಕ್ಕೆ 208 ರನ್‌ ಗಳಿಸಿದ್ದ ಕರ್ನಾಟಕ, ಆ ಮೊತ್ತಕ್ಕೆ ಕೇವಲ 6 ರನ್‌ ಸೇರಿಸಲಷ್ಟೇ ಶಕ್ತವಾಯಿತು. 26 ಎಸೆತಗಳಲ್ಲಿ 2 ರನ್‌ ಗಳಿಸಿದ ಪ್ರಸಿದ್ಧ್ ಕೃಷ್ಣ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ರಾಜ್ಯದ ಮೊದಲ ಇನ್ನಿಂಗ್ಸ್‌ ಮುಕ್ತಾಯಗೊಂಡಿತು. 

ಶಿವಮೊಗ್ಗ[ಡಿ.24]: 2018-19ರ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲು ಗೆಲ್ಲಲೇಬೇಕಿರುವ ಪಂದ್ಯದಲ್ಲಿ ಕರ್ನಾಟಕ ತಂಡ ರೈಲ್ವೇಸ್‌ ವಿರುದ್ಧ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 214 ರನ್‌ ಕಲೆಹಾಕಿದ ರಾಜ್ಯ ತಂಡ, ವೇಗಿಗಳ ಅಮೋಘ ಪ್ರದರ್ಶನದ ನೆರವಿನಿಂದ ರೈಲ್ವೇಸ್‌ ತಂಡವನ್ನು 143 ರನ್‌ಗಳಿಗೆ ಕಟ್ಟಿಹಾಕಿ ಮೊದಲ ಇನ್ನಿಂಗ್ಸ್‌ನಲ್ಲಿ 71 ರನ್‌ ಮುನ್ನಡೆ ಪಡೆದುಕೊಂಡಿತು. ದ್ವಿತೀಯ ಇನ್ನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿರುವ ಕರ್ನಾಟಕ 2ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 41 ರನ್‌ ಗಳಿಸಿದ್ದು, ಒಟ್ಟಾರೆ 112 ರನ್‌ ಮುನ್ನಡೆ ಹೊಂದಿದೆ.

ಮೊದಲ ದಿನದಂತ್ಯಕ್ಕೆ 9 ವಿಕೆಟ್‌ ನಷ್ಟಕ್ಕೆ 208 ರನ್‌ ಗಳಿಸಿದ್ದ ಕರ್ನಾಟಕ, ಆ ಮೊತ್ತಕ್ಕೆ ಕೇವಲ 6 ರನ್‌ ಸೇರಿಸಲಷ್ಟೇ ಶಕ್ತವಾಯಿತು. 26 ಎಸೆತಗಳಲ್ಲಿ 2 ರನ್‌ ಗಳಿಸಿದ ಪ್ರಸಿದ್ಧ್ ಕೃಷ್ಣ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ರಾಜ್ಯದ ಮೊದಲ ಇನ್ನಿಂಗ್ಸ್‌ ಮುಕ್ತಾಯಗೊಂಡಿತು. ವಿಕೆಟ್‌ ಕೀಪರ್‌ ಶರತ್‌ ಶ್ರೀನಿವಾಸ್‌ 31 ರನ್‌ ಗಳಿಸಿ ಅಜೇಯರಾಗಿ ಉಳಿದರು.

92ಕ್ಕೆ 8 ವಿಕೆಟ್‌: ಕರ್ನಾಟಕವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿ, ಆತ್ಮವಿಶ್ವಾಸದೊಂದಿಗೆ ಬ್ಯಾಟಿಂಗ್‌ಗಿಳಿದ ರೈಲ್ವೇಸ್‌, ರಾಜ್ಯದ ವೇಗಿಗಳ ದಾಳಿಗೆ ಬೆಚ್ಚಿತು. 17 ರನ್‌ಗೆ ಮೊದಲ ವಿಕೆಟ್‌ ಕಳೆದುಕೊಂಡ ರೈಲ್ವೇಸ್‌, 55 ರನ್‌ ಪೇರಿಸುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ಅರಿಂದಾಮ್‌ ಘೋಷ್‌ (00), ನಿತಿನ್‌ ಭಿಲ್ಲೆ (01), ಸೌರಭ್‌ ವಕಾಸ್ಕರ್‌ (04), ಪಿ.ಎಸ್‌.ಸಿಂಗ್‌ (02), ಸಮೀಮ್‌ ಹಸನ್‌ (02)ರಂತಹ ಅನುಭವಿ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು. ತಂಡ 92 ರನ್‌ಗೆ 8 ವಿಕೆಟ್‌ ಕಳೆದುಕೊಂಡು 100 ರನ್‌ಗಳೊಳಗೆ ಆಲೌಟ್‌ ಆಗುವ ಭೀತಿಗೆ ಗುರಿಯಾಯಿತು.

ಆರಂಭಿಕ ಪ್ರಶಾಂತ್‌ ಗುಪ್ತಾ (35) ಬಳಿಕ ತಂಡಕ್ಕೆ ಆಸರೆಯಾಗಿದ್ದು 7ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಮನೀಶ್‌ ರಾವ್‌. 132 ಎಸೆತಗಳನ್ನು ಎದುರಿಸಿದ ಮನೀಶ್‌ ಅಜೇಯ 52 ರನ್‌ ಗಳಿಸಿ, ರೈಲ್ವೇಸ್‌ 143 ರನ್‌ ತಲುಪಲು ಕಾರಣರಾದರು. ಕರ್ನಾಟಕದ ಪರ ರೋನಿತ್‌ ಮೋರೆ 5, ಅಭಿಮನ್ಯು ಮಿಥುನ್‌ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 2 ವಿಕೆಟ್‌ ಕಿತ್ತರು.

ಉತ್ತಮ ಆರಂಭ: 71 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್‌ಗಿಳಿದ ಕರ್ನಾಟಕ, ಆರಂಭಿಕ ಜೋಡಿಯನ್ನು ಬದಲಿಸಿತು. ಡಿ.ನಿಶ್ಚಲ್‌ ಜತೆ ಆರ್‌.ಸಮರ್ಥ್ ಬದಲಿಗೆ ದೇವದತ್‌ ಪಡಿಕ್ಕಲ್‌ ಕ್ರೀಸ್‌ಗಿಳಿದರು. ನಿಶ್ಚಲ್‌ (25) ಹಾಗೂ ದೇವದತ್‌ (11) ವಿಕೆಟ್‌ ಉಳಿಸಿಕೊಂಡು 41 ರನ್‌ ಜೊತೆಯಾಟವಾಡಿದ್ದಾರೆ. ಕರ್ನಾಟಕ, ರೈಲ್ವೇಸ್‌ಗೆ ದೊಡ್ಡ ಗುರಿ ನಿಗದಿ ಪಡಿಸಿ ಗೆಲುವು ಖಚಿತಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಪಂದ್ಯ ಮೂರೇ ದಿನಕ್ಕೆ ಮುಕ್ತಾಯಗೊಂಡರೆ ಅಚ್ಚರಿಯಿಲ್ಲ.

ಸ್ಕೋರ್‌:

ಕರ್ನಾಟಕ 214 ಹಾಗೂ 41/10,

ರೈಲ್ವೇಸ್‌ 143
 

click me!