ವಿಶ್ವಕಪ್ ಹೀರೋ ಮುನಾಫ್ ಪಟೇಲ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ

By Web DeskFirst Published Nov 10, 2018, 1:29 PM IST
Highlights

2006ರಲ್ಲಿ ಭಾರತ ಪರ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಮುನಾಫ್ 13 ಟೆಸ್ಟ್, 70 ಏಕದಿನ ಹಾಗೂ 3 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ, ಕ್ರಮವಾಗಿ 35, 86 ಮತ್ತು 04 ಒಟ್ಟು 125 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. 

ಬೆಂಗಳೂರು[ನ.10]: ’ಬರೋಚ್ ಎಕ್ಸ್’ಪ್ರೆಸ್’ ಖ್ಯಾತಿಯ 2011ರ ವಿಶ್ವಕಪ್ ಹೀರೋ ಮುನಾಫ್ ಪಟೇಲ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದಾರೆ. ಈ ಮೂಲಕ 15 ವರ್ಷಗಳ ತಮ್ಮ ಸ್ಪರ್ಧಾತ್ಮಕ ಕ್ರಿಕೆಟ್’ನಿಂದ ನಿವೃತ್ತಿ ಪಡೆದಿದ್ದಾರೆ.

ತಮ್ಮ ನಿವೃತ್ತಿ ಬಗ್ಗೆ ಪ್ರತಿಕ್ರಿಯಿಸಿರುವ ಮುನಾಫ್, ನಿವೃತ್ತಿ ಬಗ್ಗೆ ಯಾವುದೇ ಬೇಸರವಿಲ್ಲ. ಧೋನಿ ಹೊರತುಪಡಿಸಿ ಬಹುತೇಕ ಕ್ರಿಕೆಟಿಗರು ತೆರೆಮರೆಗೆ ಸರಿದಿದ್ದಾರೆ. ಕ್ರಿಕೆಟ್ ಆಡುವ ಪ್ರತಿಯೊಬ್ಬರು ತಮ್ಮ ಸಮಯ ಬಂದಾಗ ನಿವೃತ್ತಿಯಾಗಲೇಬೇಕು. ನಾನು ಕ್ರಿಕೆಟ್ ತೊರೆಯುತ್ತಿದ್ದೇನೆ ಎಂದು ಹೇಳಲು ಈಗಲೂ ನನ್ನ ಮನಸ್ಸು ಒಪ್ಪುತ್ತಿಲ್ಲ. ಯಾಕೆಂದರೆ ಕ್ರಿಕೆಟ್ ಬಿಟ್ಟು ನನಗೆ ಬೇರೇನು ಗೊತ್ತಿಲ್ಲ ಎಂದು ಮನಾಫ್ ಹೇಳಿದ್ದಾರೆ.

'ನಿವೃತ್ತಿ ಘೋಷಿಸಲು ಯಾವುದೇ ವಿಶೇಷ ಕಾರಣಗಳಿಲ್ಲ. ವಯಸ್ಸಾಯ್ತು. ಫಿಟ್ನೆಸ್ ಮೊದಲಿನಂತಿಲ್ಲ. ಯುವ ಕ್ರಿಕೆಟಿಗರು ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಇದು ನಿವೃತ್ತಿ ಘೋಷಿಸಲು ಸೂಕ್ತ ಸಮಯ. 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯನಾಗಿದ್ದೇ ಎನ್ನುವುದಕ್ಕಿಂತ ಸಂತೋಷ ಮತ್ತೊಂದಿಲ್ಲ' ಎಂದು ಬರೋಚ್ ಎಕ್ಸ್’ಪ್ರೆಸ್ ಖ್ಯಾತಿಯ ಮುನಾಫ್ ಹೇಳಿದ್ದಾರೆ.

2006ರಲ್ಲಿ ಭಾರತ ಪರ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಮುನಾಫ್ 13 ಟೆಸ್ಟ್, 70 ಏಕದಿನ ಹಾಗೂ 3 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ, ಕ್ರಮವಾಗಿ 35, 86 ಮತ್ತು 04 ಒಟ್ಟು 125 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಮುನಾಫ್ ಟೀಂ ಇಂಡಿಯಾ ಗೆಲುವಿನಲ್ಲಿ ತಮ್ಮದೇ ಆದ ಪಾತ್ರ ನಿರ್ವಹಿಸಿದ್ದರು. ಜಹೀರ್ ಖಾನ್, ಯುವರಾಜ್ ಸಿಂಗ್ ಬಳಿಕ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಮೂರನೇ ಬೌಲರ್[11 ವಿಕೆಟ್] ಎನ್ನುವ ಕೀರ್ತಿಗೆ ಮುನಾಫ್ ಪಾತ್ರರಾಗಿದ್ದರು.

ಟಿ10 ಲೀಗ್‌ನಲ್ಲಿ ಈ ಬಾರಿ ಭಾರತದ 8 ಕ್ರಿಕೆಟಿಗರು..!

ಇನ್ನು ಐಪಿಎಲ್’ನಲ್ಲಿ ಮುನಾಫ್ ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್, ಗುಜರಾತ್ ಲಯನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇನ್ನು ದೇಶಿ ಕ್ರಿಕೆಟ್’ನಲ್ಲಿ ಬರೋಡ, ಗುಜರಾತ್ ಹಾಗೂ ಮಹರಾಷ್ಟ್ರ ರಾಜ್ಯವನ್ನು ಪ್ರತಿನಿಧಿಸಿದ್ದು, ಪ್ರಥಮ ದರ್ಜೆ ಕ್ರಿಕೆಟ್’ನಲ್ಲಿ 231, ಲಿಸ್ಟ್ ’ಎ’ 173, ಟಿ20 ಕ್ರಿಕೆಟ್’ನಲ್ಲಿ 101 ವಿಕೆಟ್ ಕಬಳಿಸಿದ್ದಾರೆ. ದುಬೈನಲ್ಲಿ ನಡೆಯಲಿರುವ ಟಿ10 ಕ್ರಿಕೆಟ್’ನಲ್ಲಿ ಮುನಾಫ್ ಪಾಲ್ಗೊಳ್ಳಲಿದ್ದು, ಕ್ರಿಕೆಟ್ ನಿವೃತ್ತಿಯ ನಂತರ ಕೋಚ್ ಆಗಿ ಕಾರ್ಯನಿರ್ವಹಿಸುವ ಇರಾದೆ ವ್ಯಕ್ತಪಡಿಸಿದ್ದಾರೆ. 
 

click me!