ಅಡಿಲೇಡ್ ಟೆಸ್ಟ್’ನಲ್ಲಿ ಕಾಂಗರೂಗಳ ಬೇಟೆಯಾಡಿದ ಟೀಂ ಇಂಡಿಯಾ

By Web DeskFirst Published Dec 10, 2018, 10:54 AM IST
Highlights

ಅಡಿಲೇಡ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗೆಲ್ಲಲು 323 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 291 ರನ್’ಗಳಿಗೆ ಆಲೌಟ್ ಆಗುವ ಮೂಲಕ ಮುಗ್ಗರಿಸಿತು. ನಾಲ್ಕನೇ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 104 ರನ್ ಬಾರಿಸಿದ್ದ ಆಸ್ಟ್ರೇಲಿಯಾ 5ನೇ ದಿನ ಪಂದ್ಯ ಡ್ರಾ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನಿಸಿತು.

ಅಡಿಲೇಡ್[ಡಿ.10]: ದಶಕಗಳ ನಂತರ ಕಾಂಗರೂಗಳ ನೆಲದಲ್ಲಿ ಭಾರತ ಗೆಲುವಿನ ನಗೆ ಬೀರಿದೆ. ಅಡಿಲೇಡ್ ಟೆಸ್ಟ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಪಡೆ 31 ರನ್’ಗಳ ರೋಚಕ ಜಯ ದಾಖಲಿಸಿದೆ. ಈ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿ ಭಾರತ 1-0 ಮುನ್ನಡೆ ಸಾಧಿಸಿದೆ. ಸುಮಾರು 15 ವರ್ಷಗಳ ಬಳಿಕ ಅಡಿಲೇಡ್’ನಲ್ಲಿ ಭಾರತ ಗೆಲುವಿನ ಸಿಹಿಯುಂಡಿದೆ.

ಅಡಿಲೇಡ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗೆಲ್ಲಲು 323 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 291 ರನ್’ಗಳಿಗೆ ಆಲೌಟ್ ಆಗುವ ಮೂಲಕ ಮುಗ್ಗರಿಸಿತು. ನಾಲ್ಕನೇ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 104 ರನ್ ಬಾರಿಸಿದ್ದ ಆಸ್ಟ್ರೇಲಿಯಾ 5ನೇ ದಿನ ಪಂದ್ಯ ಡ್ರಾ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನಿಸಿತು. ರಕ್ಷಣಾತ್ಮಕ ಆಟದ ಮೂಲಕ ಶಾನ್ ಮಾರ್ಶ್ [60 ರನ್, 166 ಎಸೆತ], ಪ್ಯಾಟ್ ಕಮ್ಮಿನ್ಸ್[28 ರನ್, 121 ಎಸೆತ] ಪಂದ್ಯ ಉಳಿಸಿಕೊಳ್ಳಲು ಹೋರಾಟ ನಡೆಸಿದರು. ಆದರೆ ಮಿಂಚಿನ ದಾಳಿ ಸಂಘಟಿಸಿದ ಬುಮ್ರಾ ಪ್ರಮುಖ ಬ್ಯಾಟ್ಸ್’ಮನ್’ಗಳಾದ ಮಾರ್ಶ್, ಪೈನೆ ಹಾಗೂ ಕಮ್ಮಿನ್ಸ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. 

ಗೆಲುವು ತಡ ಮಾಡಿದ ಕೆಳಕ್ರಮಾಂಕ: ಕೊನೆಯ ದಿನದ ಆರಂಭದಲ್ಲೇ ಮಾರ್ಶ್ ಹಾಗೂ ಹೆಡ್ ವಿಕೆಟ್ ಕಬಳಿಸುವ ಮೂಲಕ ಭಾರತ ಸುಲಭ ಗೆಲುವಿನ ಕನಸು ಕಂಡಿತ್ತು. ಆದರೆ ಕೆಳಕ್ರಮಾಂಕದಲ್ಲಿ ಸ್ಟಾರ್ಕ್-ಕಮ್ಮಿನ್ಸ್ 41 ರನ್, ಲಯನ್-ಕಮ್ಮಿನ್ಸ್ 31 ಹಾಗೂ ಲಯನ್-ಹ್ಯಾಜಲ್’ವುಡ್ 32 ರನ್’ಗಳ ಜತೆಯಾಟವಾಡುವ ಮೂಲಕ ಭಾರತದ ಆತಂಕ ಹೆಚ್ಚಿಸಿದರು. ಆದರೆ ಕೊನೆಯಲ್ಲಿ ಅಶ್ವಿನ್, ಹ್ಯಾಜಲ್’ವುಡ್ ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದಿತ್ತರು.

ಭಾರತ ಪರ ಬುಮ್ರಾ, ಅಶ್ವಿನ್, ಶಮಿ ತಲಾ 3 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಭಾರತ: 250&307
ಆಸ್ಟ್ರೇಲಿಯಾ: 235&291
 

click me!