ರಣಜಿ ಟ್ರೋಫಿ: ಕರ್ನಾಟಕಕ್ಕೆ ಸೌರಾಷ್ಟ್ರ ಶಾಕ್

By Web DeskFirst Published Dec 9, 2018, 1:27 PM IST
Highlights

ಪಂದ್ಯದ ಮೂರನೇ ದಿನವಾದ ಶನಿವಾರ ಮೊದಲ ಇನ್ನಿಂಗ್ಸ್’ನಲ್ಲಿ 99 ರನ್’ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಸೌರಾಷ್ಟ್ರ, ರಾಜ್ಯದ ಬೌಲರ್’ಗಳ ಸಂಘಟಿತ ಪ್ರದರ್ಶನದ ಎದುರು 79 ರನ್’ಗಳಿಗೆ ನೆಲಕಚ್ಚಿತು. ಇದರೊಂದಿಗೆ ಸೌರಾಷ್ಟ್ರ ಕರ್ನಾಟಕಕ್ಕೆ 179 ರನ್’ಗಳ ಗೆಲುವಿನ ಗುರಿ ನಿಗಧಿ ಪಡಿಸಿತು.

ರಾಜ್’ಕೋಟ್[ಡಿ.09]: 2018-19ನೇ ಸಾಲಿನ ರಣಜಿ ಋತುವಿನಲ್ಲಿ ಕರ್ನಾಟಕ ಮೊದಲ ಸೋಲು ಅನುಭವಿಸಿದೆ. ಶನಿವಾರ ಇಲ್ಲಿ ಮುಕ್ತಾಯವಾದ ರಣಜಿ ’ಎ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ, ಸೌರಾಷ್ಟ್ರ ಎದುರು 87 ರನ್’ಗಳ ಸೋಲು ಕಂಡಿತು.

ಪಂದ್ಯದ ಮೂರನೇ ದಿನವಾದ ಶನಿವಾರ ಮೊದಲ ಇನ್ನಿಂಗ್ಸ್’ನಲ್ಲಿ 99 ರನ್’ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಸೌರಾಷ್ಟ್ರ, ರಾಜ್ಯದ ಬೌಲರ್’ಗಳ ಸಂಘಟಿತ ಪ್ರದರ್ಶನದ ಎದುರು 79 ರನ್’ಗಳಿಗೆ ನೆಲಕಚ್ಚಿತು. ಇದರೊಂದಿಗೆ ಸೌರಾಷ್ಟ್ರ ಕರ್ನಾಟಕಕ್ಕೆ 179 ರನ್’ಗಳ ಗೆಲುವಿನ ಗುರಿ ನಿಗಧಿ ಪಡಿಸಿತು.

ಕಠಿಣ ಸವಾಲು ಬೆನ್ನತ್ತಿದ ಕರ್ನಾಟಕ ಮೊದಲ ಎಸೆತದಲ್ಲೇ ಸಮರ್ಥ್ ವಿಕೆಟ್ ಕಳೆದುಕೊಂಡಿತು. ತಂಡದ ಮೊತ್ತ 5 ರನ್’ಗಳಾಗುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ರಾಜ್ಯ ತಂಡ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ನಾಲ್ಕನೇ ವಿಕೆಟ್’ಗೆ ಜತೆಯಾದ ಶ್ರೇಯಸ್ ಗೋಪಾಲ್[27] ಹಾಗೂ ಕರುಣ್ ನಾಯರ್[30] ಜೋಡಿ 60 ರನ್ ಕಲೆಹಾಕುವ ಮೂಲಕ ತಂಡಕ್ಕೆ ಆಸರೆಯಾಯಿತು. ಈ ಇಬ್ಬರ ವಿಕೆಟ್ ಪತನವಾಗುತ್ತಿದ್ದಂತೆ ನಾಟಕೀಯ ಕುಸಿತ ಕಂಡ ಕರ್ನಾಟಕ ಕೇವಲ 7 ರನ್’ಗಳಿಸುವಷ್ಟರಲ್ಲಿ ಕೊನೆಯ 5 ವಿಕೆಟ್ ಕಳೆದುಕೊಂಡಿತು. 

ಒಂದೇ ದಿನವೇ 40 ವಿಕೆಟ್’ಗಳು ಉರುಳಿದವು. ಇದರಲ್ಲಿ 38 ವಿಕೆಟ್’ಗಳನ್ನು ಸ್ಪಿನ್ನರ್’ಗಳೇ ಪಡೆದದ್ದು ವಿಶೇಷ. ಈ ಗೆಲುವಿನೊಂದಿಗೆ ಸೌರಾಷ್ಟ್ರ ’ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದರೆ, ಕರ್ನಾಟಕ 5ನೇ ಸ್ಥಾನಕ್ಕೆ ಕುಸಿದಿದೆ.

ಸಂಕ್ಷಿಪ್ತ ಸ್ಕೋರ್:
ಸೌರಾಷ್ಟ್ರ: 316 & 79
ಕರ್ನಾಟಕ: 217 &91
 
click me!