ಕೆಪಿಎಲ್: ವೆಂಕಟೇಶ್ ಪ್ರಸಾದ್ ಬೆನ್ನಿಗೆ ಅಂಟಿದ ಸ್ವಹಿತಾಸಕ್ತಿ ವಿವಾದ

By Suvarna Web DeskFirst Published Sep 1, 2017, 1:52 PM IST
Highlights

ಬಿಸಿಸಿಐ ಅನುಮತಿ ಇಲ್ಲದೆಯೇ ಪ್ರಸಾದ್, ವೀಕ್ಷಕ ವಿವರಣೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಬೆಂಗಳೂರು(ಸೆ.01): ಇಂದಿನಿಂದ ಆರಂಭಗೊಳ್ಳುತ್ತಿರುವ ಕೆಪಿಎಲ್ 6ನೇ ಆವೃತ್ತಿಯ ಟಿ20 ಲೀಗ್‌'ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಲು ಒಪ್ಪಿಗೆ ಸೂಚಿಸುವ ಮೂಲಕ, ಭಾರತ ಕಿರಿಯರ ತಂಡದ ಆಯ್ಕೆಗಾರ, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ವಿವಾದಕ್ಕೆ ಸಿಲುಕಿದ್ದಾರೆ. ಅವರ ವಿರುದ್ಧ ಸ್ವಹಿತಾಸಕ್ತಿ ಆರೋಪ ಕೇಳಿಬರುತ್ತಿದೆ. ಬಿಸಿಸಿಐ ಅನುಮತಿ ಇಲ್ಲದೆಯೇ ಪ್ರಸಾದ್, ವೀಕ್ಷಕ ವಿವರಣೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಸೆ.1ರಿಂದ 23ರ ವರೆಗೂ ನಡೆಯಲಿರುವ ಪಂದ್ಯಾವಳಿಗೆ ಕೆಎಸ್‌'ಸಿಎ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯೊಂದಿಗೆ ಪ್ರಸಾರ ಹಕ್ಕು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ, ವಾಹಿನಿ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಪ್ರಕಟಗೊಳಿಸಿತ್ತು. ಅದರಲ್ಲಿ ಮಾಜಿ ಕ್ರಿಕೆಟಿಗರಾದ ಬ್ರೆಟ್ ಲೀ, ಮೈಕಲ್ ಹಸ್ಸಿ, ಸುನಿಲ್ ಜೋಶಿ, ಫಜಲ್ ಖಲೀಲ್, ವಿ.ಬಿ.ಚಂದ್ರಶೇಖರ್ ಅವರ ಹೆಸರುಗಳ ಜತೆಯಲ್ಲಿ ಪ್ರಸಾದ್ ಅವರ ಹೆಸರೂ ಸಹ ಇತ್ತು.

ಪಟ್ಟಿಯಲ್ಲಿ ಪ್ರಸಾದ್ ಹೆಸರನ್ನು ಕಂಡು ಸ್ವತಃ ಬಿಸಿಸಿಐಗೆ ಆಶ್ಚರ್ಯವಾಗಿದೆ. ‘ಅವರು ಕೆಪಿಎಲ್'ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳುವಂತಿಲ್ಲ. ಒಂದೊಮ್ಮೆ ಅವರು ವೀಕ್ಷಕ ವಿವರಣೆಗಾರರಾಗಿ ಮುಂದುವರಿಯಬೇಕಿದ್ದರೆ, ಕಿರಿಯರ ತಂಡದ ಆಯ್ಕೆಗಾರ ಹುದ್ದೆಗೆ ರಾಜೀನಾಮೆ ನೀಡಬೇಕು. ಸ್ವಹಿತಾಸಕ್ತಿಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಯಲ್ಲಿದ್ದು, ಬಿಸಿಸಿಐನೊಂದಿಗೆ ಒಪ್ಪಂದದಲ್ಲಿರುವವರು ಬೇರೆ ಯಾವುದೇ ಹುದ್ದೆಯಲ್ಲಿ ಕಾಣಿಸಿಕೊಳ್ಳುವಂತಿಲ್ಲ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

click me!