ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಮಗ ಗೆದ್ದ ಪದಕವನ್ನು ಹರಿದ ಸೀರೆಯಲ್ಲಿ ಕಟ್ಟಿಟ್ಟ ತಾಯಿ!

By Santosh Naik  |  First Published Aug 10, 2022, 10:03 PM IST

ಸೋಮವಾರ ಬೆಳಿಗ್ಗೆ ವೇಟ್‌ಲಿಫ್ಟರ್ ಅಚಿಂತಾ ಬರ್ಮಿಂಗ್‌ಹ್ಯಾಮ್‌ನಿಂದ ಮನೆಗೆ ಹಿಂದಿರುಗಿದಾಗ ಅವರ ತಾಯಿ ಅದನ್ನು ಮನೆಯಲ್ಲಿದ್ದ ಸಣ್ಣ ಸ್ಟೂಲ್‌ನ ಮೇಲೆ ಜೋಡಿಸಿಟ್ಟಿದ್ದರು. ಫೋಟೋಗ್ರಾಫರ್‌ಗಳು ಈ ಚಿತ್ರಗಳನ್ನು ತೆಗೆದ ಬಳಿಕ, ಪದಕವನ್ನು ಹರಿದ ಸೀರೆಯಲ್ಲಿ ಕಟ್ಟಿಟ್ಟರು.


ನವದೆಹಲಿ (ಆ.10): ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಂನಲ್ಲಿ ಮುಕ್ತಾಯಗೊಂಡ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ವೇಟ್‌ಲಿಫ್ಟರ್‌ಗಳ ಸಾಧನೆ ಭರ್ಜರಿಯಾಗಿತ್ತು. ಗೇಮ್ಸ್‌ನ ಆರಂಭದಲ್ಲಿ ಭಾರತದ ಪದಕ ಬೇಟೆಗೆ ಚಾಲನೆ ಸಿಕ್ಕಿದ್ದು ವೇಟ್‌ ಲಿಫ್ಟರ್‌ಗಳಿಂದ. ಹೊಸ ವೇಟ್‌ಲಿಫ್ಟರ್‌ಗಳ ಪೈಕಿ ಗಮನಸೆಳೆದಿದ್ದು ಚಿನ್ನ ಗೆದ್ದ ಅಚಿಂತಾ ಶೆಯುಲಿ. ಪುರುಷರ 73 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಸಾಧನೆ ಮಾಡಿದ 20 ವರ್ಷದ ಹುಡುಗ, ಸೋಮವಾರ ಕೋಲ್ಕತ್ತಾದಿಂದ ಸುಮಾರಿ 20 ಕಿಲೋಮೀಟರ್‌ ದೂರದಲ್ಲಿರುವ ಹೌರಾ ಜಿಲ್ಲೆಯ ದೇಲ್‌ಪುರದಲ್ಲಿರುವ ತಮ್ಮ ಎರಡು ಕೋಟೆಯ ಮನೆಗೆ ಆಗಮಿಸಿದರು. ಮಗ ಮನೆಗೆ ಬಂದ ಬೆನ್ನಲ್ಲಿಯೇ ಆತನ ಕೊರಳಲ್ಲಿದ್ದ ಚಿನ್ನದ ಪದಕವನ್ನು ನೋಡಿ ಕಣ್ಣೀರಿಟ್ಟ ತಾಯಿ ಪೂರ್ಣಿಮಾ ಶೆಯುಲಿ, ಆತನ ಪದಕವನ್ನು ತನ್ನ ಹರಿದ ಸೀರೆಯಲ್ಲಿ ಸುತ್ತಿ ಮನೆಯಲ್ಲಿದ್ದ ಒಂದೇ ಬೆಡ್‌ನ ಕೆಳಗೆ ಇಟ್ಟಿದ್ದಾರೆ. 9 ವರ್ಷದ ಹಿಂದೆ ತಂದೆ ಸಾವು ಕಂಡಾಗ, ಅಚಿಂತಾ ಶೆಯುಲಿ ಶಾಲೆಯನ್ನು ತೊರೆದು ಅಮ್ಮನ ಜೊತೆ ಎಂಬ್ರಾಯಡರಿ ಕೆಲಸಕ್ಕೆ ಇಳಿದಿದ್ದರು. ಅಚಿಂತಾ ಅವರ ಅಣ್ಣ ಅಲೋಕ್‌, ವೃತ್ತಿಪರ ವೇಟ್‌ಲಿಫ್ಟರ್‌ ಆಗಿದ್ದರೂ ಮನೆಯ ಪರಿಸ್ಥಿತಿ ನೋಡಿ ವೇಟ್‌ಲಿಫ್ಟರ್‌ ಆಗುವ ಆಸೆ ಕೈಬಿಟ್ಟು ಕೈಗೆ ಸಿಕ್ಕ ಕೆಲಸವನ್ನು ಮಾಡಲು ಆರಂಭಿಸಿದರು. ಅದರೆ, ತನ್ನಿಂದ ಆಗದ ಕೆಲಸವನ್ನು ತಮ್ಮ ಅಚಿಂತಾರಿಂದ ಅಲೋಕ್‌ ಮಾಡಿಸಿದರು. ಇದರಿಂದಾಗಿಯೇ ಅಚಿಂತಾ ಕಾಮನ್ವೆಲ್ತ್‌ ಗೇಮ್ಸ್ ಪದಕ ಗೆದ್ದ ಬೆನ್ನಲ್ಲಿಯೇ ಅದನ್ನು ಅಣ್ಣ ಅಲೋಕ್‌ ಹಾಗೂ ಕೋಚ್‌ ಆಸ್ತಮ್‌ ದಾಸ್‌ಗೆ ಅರ್ಪಿಸಿದ್ದರು.

ಸೋಮವಾರ ಬೆಳಿಗ್ಗೆ ವೇಟ್‌ಲಿಫ್ಟರ್ ಅಚಿಂತಾ ಬರ್ಮಿಂಗ್‌ಹ್ಯಾಮ್‌ನಿಂದ ಮನೆಗೆ ಹಿಂದಿರುಗಿದಾಗ ಆತ ಗೆದ್ದಿದ್ದ ಪದಕವನ್ನು ಸಣ್ಣ ಸ್ಟೂಲ್‌ನಲ್ಲಿಟ್ಟು ಜೋಡಿಸಿದರು. ಮಗನ ಸಾಧನೆಯಿಂದಾಗಿ ಖುಷಿಯಲ್ಲಿದ್ದ ಪೂರ್ಣಿಮಾ ಶೆಯುಲಿ, ಅಚಿಂತಾ ಈವರೆಗೂ ಗೆದ್ದ ಪದಕಗಳನ್ನು ಮನೆಗೆ ಬಂದವರಿಗೆ ತೋರಿಸಬೇಕು ಎನ್ನವ ಕಾರಣಕ್ಕೆ ಹಿರಿಯ ಮಗನ ಬಳಿ ಅವುಗಳನ್ನ ಚೊಕ್ಕದಾಗಿ ಜೋಡಿಸಿಡಲು ಒಂದು ಕಬೋರ್ಡ್‌ ಖರೀದಿ ಮಾಡುವಂತೆ ಕೇಳಿದ್ದಾರೆ.

Tap to resize

Latest Videos

ಸನ್‌ಸ್ಟ್ರೋಕ್‌ಗೆ ಬಲಿಯಾಗಿದ್ದ ಪತಿ: 'ಅಚಿಂತಾ ಹಿಂತಿರುಗಿ ಬಂದಾಗ ವರದಿಗಾರರು, ಛಾಯಾಗ್ರಾಹಕರು ನಮ್ಮ ಮನೆಗೆ ಬರುತ್ತಾರೆ ಎಂದು ಗೊತ್ತಿತ್ತು. ಹಾಗಾಗಿ ಅಚಿಂತಾ ಎಷ್ಟು ಪ್ರತಿಭಾವಂತ ಎಂದು ಅವರಿಗೆ ಅರ್ಥವಾಗಲೆಂದು ಪದಕ, ಟ್ರೋಫಿಗಳನ್ನು ಸ್ಟೂಲ್ ಮೇಲೆ ಇಟ್ಟುಕೊಂಡಿದ್ದೆ. ದೇಶಕ್ಕಾಗಿ ಚಿನ್ನ ಗೆಲ್ಲುತ್ತಾನೆ ಎಂದು ನಾನು ಕನಸು ಕೂಡ ಕಂಡಿರಲಿಲ್ಲ' ಎಂದು ಪೂರ್ಣಿಮಾ ಶೆಯುಲಿ ತಿಳಿಸಿದ್ದಾರೆ. 2013ರಲ್ಲಿ ಪರಿ ಜಗತ್‌ ಶೆಯುಲಿ ಸನ್‌ಸ್ಟ್ರೋಕ್‌ಗೆ ಬಲಿಯಾದ ಬಳಿಕ ಇಬ್ಬರು ಗಂಡುಮಕ್ಕಳಾದ ಅಲೋಕ್‌ ಹಾಗೂ ಅಚಿಂತಾರನ್ನು ಬೆಳೆಸಲು ತಾವು ಪಟ್ಟ ಕಷ್ಟಗಳನ್ನೂ ಕೂಡ ನೆನಪಿಸಿಕೊಂಡರು.

ನಮ್ಮ ಪಾಲಿಗೂ ದೇವರಿದ್ದಾನೆ: ದೇವರು ಈಗ ನಮ್ಮ ಮೇಲೆ ಹರಸಿದ್ದಾನೆ ಎಂದು ನನಗೆ ನಂಬಿಕೆ ಬರುತ್ತಿದೆ. ನಮ್ಮ ಮನೆಯ ಮುಂದೆ ಪ್ರತಿದಿನ ಬರುತ್ತಿರುವ ಜನರನ್ನು ನೋಡಿ ಸಮಯ ಹೇಗೆ ಬದಲಾಯಿತಲ್ಲ ಎಂದು ಒಮ್ಮೊಮ್ಮೆ ಅಂದುಕೊಳ್ಳುತ್ತೇನೆ. ನನ್ನ ಎರಡು ಮಕ್ಕಳನ್ನು ಸಾಕಲು ನಾನೆಷ್ಟು ಕಷ್ಟಪಟ್ಟಿದ್ದೇನೆ ಅನ್ನೋದನ್ನ ಈಗ ನೆನಪಿಸಿಕೊಳ್ಳಲು ಕೂಡ ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ಇಬ್ಬರು ಮಕ್ಕಳಿಗೆ ಪ್ರತಿದಿನ ಊಟ ಹಾಕುವಷ್ಟು ಶಕ್ತಿ ನನ್ನಲ್ಲಿರಲಿಲ್ಲ. ಖಾಲಿ ಹೊಟ್ಟೆಯಲ್ಲಿ ಅವರಿಬ್ಬರು ಮಲಗಿದ ದಿನಗಳಿಗೆ ಲೆಕ್ಕವಿಲ್ಲ. ಇಂದಿನ ಈಗಿನ ಖುಷಿಗೆ ನನಗೆ ಏನು ಹೇಳಬೇಕು ಅನ್ನೋದೇ ಅರ್ಥವಾಗುತ್ತಿಲ್ಲ ಎಂದಿದ್ದಾರೆ.

Commonwealth Games 2022: ಚಿನ್ನ ಗೆದ್ದ ಅಚಿಂತಾ ಶೆಯುಲಿಗೆ ಜೈ ಹೋ ಎಂದು ಭಾರತೀಯ ಸೇನೆ..!

ಲಾರಿಗಳಿಗೆ ಗೂಡ್ಸ್‌ ತುಂಬುತ್ತಿದ್ದ ಅಚಿಂತಾ: ಅಚಿಂತಾ ಹಾಗೂ ಅಲೋಕ್‌ ಇಬ್ಬರೂ ವೇಟ್‌ಲಿಫ್ಟರ್‌ಗಳು. ಲಾರಿಯಲ್ಲಿ ಗೂಡ್ಸ್‌ಗಳನ್ನು ಲೋಡ್‌ ಹಾಗೂ ಅನ್‌ಲೋಡ್‌ ಮಾಡುವ ಕೆಲಸ ಮಾಡುತ್ತಿದ್ದ ಇವರಿಬ್ಬರೂ, ಅಮ್ಮನ ಜೊತೆ ಸ್ಥಳೀಯ ಸೀರೆ ಉತ್ಪಾದನಾ ಘಟಕದಲ್ಲಿ ಎಂಬ್ರಾಯ್ಡರಿ ಕೆಲಸವನ್ನೂ ಮಾಡುತ್ತಿದ್ದರು. 'ನನ್ನ ಮಕ್ಕಳನ್ನು ಕೆಲಸಕ್ಕೆ ಕಳಿಸದೇ ನನಗೆ ಬೇರೆ ದಾರಿ ಇರಲಿಲ್ಲ. ಕಳಿಸದೇ ಇದ್ದಿದ್ದರೆ, ನಾವು ಬದುಕೋದೇ ಕಷ್ಟವಾಗುತ್ತಿತ್ತು ಎಂದು ಪೂರ್ಣಿಮಾ ಹೇಳುತ್ತಾರೆ. ಇಷ್ಟೆಲ್ಲದರ ನಡುವೆಯೂ ಅಣ್ಣ-ತಮ್ಮ ಇಬ್ಬರೂ ವೇಟ್‌ಲಿಫ್ಟಿಂಗ್‌ ಅಭ್ಯಾಸ ಮಾಡುತ್ತಿದ್ದರು.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ದಾಖಲೆ ಬರೆದ ಅಚಿಂತಾ ಶೆಯುಲಿ!

ನನ್ನ ತಾಯಿ ಹಾಗೂ ಕೋಚ್‌ ಕಾರಣ:  ಚಿನ್ನ ಗೆದ್ದು ತವರಿಗೆ ಬಂದಿದ್ದಕ್ಕೆ ಬಹಳ ಸಂತಸವಾಗಿದೆ. ಇಂದು ನಾನು ಏನು ಸಾಧನೆ ಮಾಡಿದ್ದೇನೋ ಅದಕ್ಕೆ ನನ್ನ ತಾಯಿ ಹಾಗೂ ಕೋಚ್‌ ಅಸ್ತಮ್‌ ದಾಸ್‌ ಅವರ ತ್ಯಾಗವೇ ಕಾರಣ. ನನ್ನ ಜೀವನದಲ್ಲಿ ಇವರಿಬ್ಬರ ಪಾತ್ರವನ್ನು ಮರೆಯೋದೇ ಇಲ್ಲ. ಇಂದು ನಾನು ಇಲ್ಲಿರೋದಕ್ಕೆ ಕಾರಣ ಅವರಿಬ್ಬರು ಎಂದು ಅಚಿಂತಾ ಶೆಯುಲಿ ಪ್ರತಿಕ್ರಿಯಿಸಿದ್ದಾರೆ. 'ನನಗೆ ಹಾಗೂ ನನ್ನ ಕುಟುಂಬಕ್ಕೆ  ಜೀವನ ಸುಲಭವಾಗಿರಲಿಲ್ಲ. ತಂದೆಯ ಸಾವಿನ ಬಳಿಕ ಪ್ರತಿದಿನ ಹಸಿದ ಹೊಟ್ಟೆಯನ್ನು ತುಂಬಿಸಿಕೊಳ್ಳುವುದೇ ನಮಗೆ ಸವಾಲಾಗಿತ್ತು. ಆದರೆ, ಈಗ ನಾನು ಹಾಗೂ ಅಣ್ಣ ಇಬ್ಬರೂ ದುಡಿಯುತ್ತಿದ್ದೇವೆ. ಆದರೆ, ಇದು ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಣೆ ನೆರವಾಗುತ್ತಿಲ್ಲ. ನಮ್ಮ ಸಮಸ್ಯೆಯನ್ನು ಸರ್ಕಾರ ಆಲಿಸಿದರೆ ಒಳ್ಳೆಯದು ಎಂದು ಹೇಳಿದ್ದಾರೆ.

click me!