
ಗ್ಲಾಸ್ಗೋ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ವೇಟ್‌ಲಿಫ್ಟಿಂಗ್ ಹಾಗೂ ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ 2 ಬೆಳ್ಳಿ ಪದಕಗಳು ಲಭಿಸಿದೆ. ಇದರೊಂದಿಗೆ ಪದಕ ಗಳಿಕೆ 12ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಬಾಕ್ಸಿಂಗ್‌ನಲ್ಲಿ ಭಾರತೀಯರು ಪ್ರಾಬಲ್ಯ ಮುಂದುವರಿಸಿದ್ದು, ಒಂದೇ ದಿನ 9 ಸೇರಿದಂತೆ ಒಟ್ಟು 10 ಪದಕ ಖಚಿತಪಡಿಸಿಕೊಂಡಿದ್ದಾರೆ.
ಗೇಮ್ಸ್‌ನಲ್ಲಿ ಭಾರತದ ಬಾಕ್ಸರ್‌ಗಳು ಅಬ್ಬರಿಸುತ್ತಿದ್ದಾರೆ. ಬುಧವಾರ ಒಂದೇ ದಿನ 9 ಸೇರಿ ಒಟ್ಟು 10 ಮಂದಿ ಸೆಮಿಫೈನಲ್‌ಗೇರಿದ್ದು, ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಂಡಿದ್ದಾರೆ.
ಬಾಕ್ಸಿಂಗ್‌ನಲ್ಲಿ ಸೆಮಿಫೈನಲ್ ತಲುಪಿದವರಿಗೆ ಪದಕ ಖಚಿತವಾಗುತ್ತದೆ. ಲವ್ಲೀನಾ ಬೊರ್ಗೊಹೈನ್ ಕೂಟದ ಉದ್ಘಾಟನೆಗೂ ಮುನ್ನ ನೇರವಾಗಿ ಸೆಮಿಫೈನಲ್‌ಗೇರಿ ಖಚಿತಪಡಿಸಿಕೊಂಡಿದ್ದರು. ಮಂಗಳವಾರ ಮಧ್ಯರಾತ್ರಿ ಪ್ರಿಯಾ ಘಂಘಾಸ್(60 ಕೆ.ಜಿ. ವಿಭಾಗ), ಪ್ರೀತಿ ಪವಾರ್(54 ಕೆ.ಜಿ.) ಹಾಗೂ ಜಾಡುಮನಿ ಸಿಂಗ್(55 ಕೆ.ಜಿ.) ಸೆಮೀಸ್ ತಲುಪಿದ್ದರು. ಬುಧವಾರ ಸಂಜೆ ಇನ್ನೂ ಐವರು ಕ್ವಾರ್ಟರ್ ಫೈನಲ್‌ನಲ್ಲಿ ಗೆಲುವು ಸಾಧಿಸಿದರು. ಮಹಿಳಾ ವಿಭಾಗದಲ್ಲಿ ಸಾಕ್ಷಿ ಚೌಧರಿ(51 ಕೆ.ಜಿ.), ಅರುಂಧತಿ ಚೌಧರಿ(70 ಕೆ.ಜಿ.), ಪುರುಷರ ವಿಭಾಗದಲ್ಲಿ ಸಚಿನ್ ಸಿವಾಚ್(60 ಕೆ.ಜಿ.), ಅಂಕುಶ್ ಪಂಘಲ್(80 ಕೆ.ಜಿ.) ಹಾಗೂ ನರೇಂದರ್ ಬರ್ವಾಲ್(90+ ಕೆ.ಜಿ.) ಸೆಮಿಫೈನಲ್ ಪ್ರವೇಶಿಸಿದರು. ಇವರು ಸೆಮೀಸ್‌ನಲ್ಲಿ ಸೋತರೂ ಕಂಚು ಲಭಿಸಲಿದೆ.
2022ರಲ್ಲಿ ಬರ್ಮಿಂಗ್‌ಹ್ಯಾಮ್ ಗೇಮ್ಸ್‌ನಲ್ಲಿ ಭಾರತ 3 ಚಿನ್ನ, 1 ಬೆಳ್ಳಿ, 3 ಕಂಚು ಸೇರಿ ಒಟ್ಟು 7 ಗೆದ್ದಿತ್ತು. ಅದು ಗೇಮ್ಸ್‌ನ ಇತಿಹಾಸದಲ್ಲೇ ಅವೃತ್ತಿಯೊಂದರಲ್ಲಿ ಬಾಕ್ಸಿಂಗ್‌ನಲ್ಲಿ ಲಭಿಸಿದ ಗರಿಷ್ಠ ಪದಕ. ಆ ದಾಖಲೆ ಈ ಬಾರಿ ಮುರಿಯಲಿದೆ.
ಪುರುಷರ 10000 ಮೀ. ಓಟದ ಸ್ಪರ್ಧೆಯಲ್ಲಿ ಗುಲ್ವೀರ್ ಸಿಂಗ್ ಐತಿಹಾಸಿಕ ಬೆಳ್ಳಿ ಪದಕ ಗೆದ್ದರು. ಮಳೆಯ ನಡುವೆಯೇ ನಡೆದ ರೇಸ್‌ನಲ್ಲಿ ಅವರು 27 ನಿಮಿಷ 49.78 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಈ ಮೂಲಕ ಗೇಮ್ಸ್‌ನ ಇತಿಹಾಸದಲ್ಲೇ 10,000 ಮೀಟರ್ ಓಟದಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡರು. ಆಸ್ಟ್ರೇಲಿಯಾದ ರಾಬಿನ್ಸನ್(27 ನಿಮಿಷ, 48.93 ಸೆಕೆಂಡ್) ಚಿನ್ನ ತಮ್ಮದಾಗಿಸಿಕೊಂಡರು. ಐಲ್ ಆಫ್ ಮ್ಯಾನ್ ದೇಶದ ಡೇವಿಡ್ ಮುಲಾರ್ಕಿ(27 ನಿಮಿಷ, 50.28 ಸೆಕೆಂಡ್) ಕಂಚು ಗೆದ್ದರು.
ಕೂಟದಲ್ಲಿ ಭಾರತದ ವೇಟ್‌ಲಿಫ್ಟರ್‌ಗಳ ಉತ್ತಮ ಪ್ರದರ್ಶನ ಮುಂದುವರಿಯಿತು. 2022ರ ಕಾಮನ್‌ವೆಲ್ತ್ ಗೇಮ್ಸ್‌ನ 71+ ಕೆ.ಜಿ. ವಿಭಾಗದಲ್ಲಿ ಕಂಚು ಗೆದ್ದಿದ್ದ ಹರ್ಜಿಂದರ್ ಕೌರ್ ಈ ಬಾರಿ ಮಹಿಳೆಯರ 69 ಕೆ.ಜಿ. ವಿಭಾಗದಲ್ಲಿ ಸ್ನ್ಯಾಚ್‌ನಲ್ಲಿ 101 ಕೆ.ಜಿ. ಹಾಗೂ ಕ್ಲೀನ್ ಆ್ಯಂಡ್ ಜರ್ಕ್ ವಿಭಾಗದಲ್ಲಿ 126 ಕೆ.ಜಿ. ಸೇರಿದಂತೆ ಒಟ್ಟು 227 ಕೆ.ಜಿ. ಭಾರ ಎತ್ತಿ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡು. ಅವರು ಸ್ನ್ಯಾಚ್, ಕ್ಲೀನ್ ಆ್ಯಂಡ್ ಜರ್ಕ್, ಒಟ್ಟು ಕೆ.ಜಿ. ಈ ಎಲ್ಲದರಲ್ಲೂ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ದಾಖಲಿಸಿದರು. ಇದು ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಸಿಕ್ಕ 7ನೇ ಪದಕ. ಈ ವಿಭಾಗದಲ್ಲಿ 1 ಚಿನ್ನ, 5 ಬೆಳ್ಳಿ, 1 ಕಂಚು ಲಭಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.