ಕಾಮನ್‌ವೆಲ್ತ್‌ ಗೇಮ್ಸ್‌ 2026: ಸತತ 7ನೇ ಬಾರಿಯೂ ಭಾರತ ಟಾಪ್‌-5! ಪದಕ ಕಡಿಮೆಯಾದ್ರೂ ಭಾರತದಿಂದ ಶ್ರೇಷ್ಠ ಸಾಧನೆ

Kannadaprabha News   | Kannada Prabha
Published : Aug 03, 2026, 09:28 AM IST
Commonwealth Games Glasgow

ಸಾರಾಂಶ

2026ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ 13 ಚಿನ್ನ ಸೇರಿ ಒಟ್ಟು 39 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. ಕಳೆದ ಆವೃತ್ತಿಗಿಂತ ಕಡಿಮೆ ಪದಕಗಳನ್ನು ಗೆದ್ದರೂ, ಬಾಕ್ಸಿಂಗ್ ಮತ್ತು ಜುಡೋದಲ್ಲಿನ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನದಿಂದಾಗಿ ಇದನ್ನು ಭಾರತದ ಅತ್ಯುತ್ತಮ ಸಾಧನೆ ಎಂದು ಪರಿಗಣಿಸಲಾಗಿದೆ.

ಗ್ಲಾಸ್ಗೋ: 2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಅದ್ಧೂರಿ ತೆರೆ ಬಿದ್ದಿದೆ. 10 ದಿನಗಳ ಕಾಲ ಕ್ರೀಡಾಪ್ರೇಮಿಗಳಿಗೆ ಮನರಂಜನೆ ಒದಗಿಸಿಕೊಟ್ಟ, ಮಿನಿ ಒಲಿಂಪಿಕ್ಸ್‌ ಖ್ಯಾತಿಯ ಜಾಗತಿಕ ಮಟ್ಟದ ಕ್ರೀಡಾಕೂಟವು ಭಾನುವಾರ ರಾತ್ರಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು.

ಈ ಬಾರಿ ಸೀಮಿತ ಕ್ರೀಡೆಗಳಿದ್ದರೂ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದೆ. ಜುಲೈ 23ರಂದು ಆರಂಭಗೊಂಡಿದ್ದ ಗೇಮ್ಸ್‌ನಲ್ಲಿ ಭಾರತ 13 ಚಿನ್ನ, 17 ಬೆಳ್ಳಿ, 9 ಕಂಚು ಸೇರಿದಂತೆ ಒಟ್ಟು 39 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿತು.

ಕ್ರೀಡಾಕೂಟದಲ್ಲಿ ಪಾಲ್ಗೊಂಡ ಹಲವು ಭಾರತೀಯರು ಈಗಾಗಲೇ ತವರಿಗೆ ಮರಳಿದ್ದರು. ಹೀಗಾಗಿ ಭಾನುವಾರ ರಾತ್ರಿ ನಡೆದ ಸಮಾರೋಪದಲ್ಲಿ ಕೆಲವೇ ಕ್ರೀಡಾಪಟುಗಳು ಭಾಗಿಯಾದರು. ವಿಶ್ವ ಚಾಂಪಿಯನ್‌, ಚಿನ್ನ ವಿಜೇತ ಬಾಕ್ಸರ್‌ ಜಾಸ್ಮೀನ್‌ ಲಂಬೋರಿಯಾ ಅವರು ಸಮಾರೋಪದಲ್ಲಿ ಧ್ವಜಧಾರಿಯಾಗಿ ಭಾರತೀಯ ಕ್ರೀಡಾಪಟುಗಳ ನೇತೃತ್ವ ವಹಿಸಿದರು.

ಕಳೆದ ಬಾರಿಗಿಂತ 22 ಪದಕ ಕಡಿಮೆಯಾದರೂ ಭಾರತ ಶ್ರೇಷ್ಠ ಸಾಧನೆ

2022ರ ಗೇಮ್ಸ್‌ನಲ್ಲಿ ಭಾರತ 22 ಚಿನ್ನ ಸೇರಿದಂತೆ 61 ಪದಕ ಗೆದ್ದಿತ್ತು. ಈ ಬಾರಿ 13 ಚಿನ್ನ ಸೇರಿ 39 ಪದಕ ಗೆದ್ದಿದೆ. ಕಳೆದ ಬಾರಿಗಿಂತ ಈ ಬಾರಿ 22 ಪದಕಗಳು ಕಡಿಮೆಯಾದರೂ, ಒಟ್ಟಾರೆ ಪ್ರದರ್ಶನಕ್ಕೆ ಹೋಲಿಸಿದರೆ ಭಾರತ ಶ್ರೇಷ್ಠ ಸಾಧನೆ ಮಾಡಿದೆ. ಕಳೆದ ಬಾರಿ ಬ್ಯಾಡ್ಮಿಂಟನ್‌, ಟೇಬಲ್‌ ಟೆನಿಸ್‌, ಹಾಕಿ, ಕ್ರಿಕೆಟ್‌, ಸ್ಕ್ವಾಶ್‌ ಸೇರಿ ಭಾರತ 30 ಪದಕ ಗೆದ್ದಿದ್ದ ಕ್ರೀಡೆಗಳು ಈ ಬಾರಿ ಇರಲಿಲ್ಲ. ಈ ಸಲ ಭಾರತ 10 ಕ್ರೀಡೆಗಳಲ್ಲಿ 39 ಪದಕ ಗೆದ್ದಿದೆ. ಇದೇ 10 ಕ್ರೀಡೆಗಳಲ್ಲಿ ಭಾರತ 2022ರಲ್ಲಿ 31 ಪದಕ ಬಾಚಿತ್ತು. ಹೀಗಾಗಿಯೇ 2026ರ ಪ್ರದರ್ಶನ ಭಾರತದ ಪಾಲಿಗೆ ಅತ್ಯುತ್ತಮ.

10 ಕ್ರೀಡೆಗಳಲ್ಲಿ ಸ್ಪರ್ಧೆ: ಪದಕ ಬಂದಿದ್ದು 5ರಲ್ಲಿ

ಭಾರತದ 124 ಕ್ರೀಡಾಪಟುಗಳು ಈ ಬಾರಿ ಒಟ್ಟು 10 ಕ್ರೀಡೆಗಳಲ್ಲಿ ಸ್ಪರ್ಧಿಸಿದ್ದರು. ಈ ಪೈಕಿ ಬಾಕ್ಸಿಂಗ್‌, ವೇಟ್‌ಲಿಫ್ಟಿಂಗ್‌, ಅಥ್ಲೆಟಿಕ್ಸ್‌, ಪ್ಯಾರಾ ಪವರ್‌ಲಿಫ್ಟಿಂಗ್‌ ಹಾಗೂ ಜುಡೋದಲ್ಲಿ ಮಾತ್ರ ಭಾರತಕ್ಕೆ ಪದಕ ಲಭಿಸಿವೆ. ಉಳಿದಂತೆ ಈಜಿನಲ್ಲಿ ಭಾರತೀಯರು ನೀರಸ ಪ್ರದರ್ಶನ ನೀಡಿದ್ದು, ಒಂದೂ ಪದಕ ಗೆದ್ದಿಲ್ಲ. 3*3 ಬಾಸ್ಕೆಟ್‌ಬಾಲ್‌, ಸೈಕ್ಲಿಂಗ್‌, ಲಾನ್‌ ಬೌಲ್ಸ್‌, ಜಿಮ್ನಾಸ್ಟಿಕ್‌ನಲ್ಲೂ ಭಾರತಕ್ಕೆ ಪದಕ ಬಂದಿಲ್ಲ.

ಭಾರದತ ಪದಕ ಗಳಿಕೆ 

ಸ್ಪರ್ಧೆ ಚಿನ್ನ ಬೆಳ್ಳಿ ಕಂಚು ಒಟ್ಟು

ಬಾಕ್ಸಿಂಗ್‌ 7 3 0 10

ಅಥ್ಲೆಟಿಕ್ಸ್‌ 3 7 6 16

ಜುಡೊ 2 1 1 4

ವೇಟ್‌ಲಿಫ್ಟಿಂಗ್ 1 6 1 8

ಪ್ಯಾರಾ ಲಿಫ್ಟಿಂಗ್‌ 0 0 1 1

ಭಾರತ ಪುರುಷರಿಗಿಂತ ವನಿತೆಯರಿಗೆ ಹೆಚ್ಚು ಚಿನ್ನ

ಭಾರತೀಯರಲ್ಲಿ ಪದಕ ಗಳಿಕೆಯಲ್ಲಿ ಪುರುಷರು ಮೇಲುಗೈ ಸಾಧಿಸಿದರು. ಆದರೆ ಚಿನ್ನದ ಸಾಧನೆಯಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಮಹಿಳೆಯರು 8 ಚಿನ್ನ, 4 ಬೆಳ್ಳಿ, 4 ಕಂಚು ಸೇರಿ 16 ಪದಕ ಗೆದ್ದರು. ಪುರುಷರ 5 ಚಿನ್ನ, 13 ಬೆಳ್ಳಿ, 5 ಕಂಚು ಸೇರಿ 22 ಪದಕ ತಮ್ಮದಾಗಿಸಿಕೊಂಡರು.

ಬಾಕ್ಸಿಂಗ್‌, ಜುಡೋ, ಪ್ಯಾರಾದಲ್ಲಿ ಜಗತ್ತಿಗೇ ಸವಾಲೊಡ್ಡಿದ ಭಾರತ!

ಈ ಬಾರಿ ಕ್ರೀಡಾಕೂಟದಲ್ಲಿ ಭಾರತ ಬಹುತೇಕ ವಿಭಾಗಗಳಲ್ಲಿ ಪದಕ ಸಾಧನೆ ಮಾಡಿದ್ದರೂ, ಬಾಕ್ಸಿಂಗ್‌, ಜುಡೋ ಹಾಗೂ ಪ್ಯಾರಾ ಗೇಮ್ಸ್‌ಗಳಲ್ಲಿ ವಿಶ್ವಕ್ಕೇ ಸವಾಲೊಡ್ಡುವ ರೀತಿ ಪ್ರದರ್ಶನ ನೀಡಿತು. ಬಾಕ್ಸಿಂಗ್‌ನ 14 ವಿಭಾಗಗಳ ಪೈಕಿ ಭಾರತ 10ರಲ್ಲಿ ಪದಕ ಗೆದ್ದಿತು. 7 ಚಿನ್ನ, 3 ಬೆಳ್ಳಿ ಭಾರತೀಯರ ಕೊರಳಿಗೇರಿದವು. ಇದು ಬಾಕ್ಸಿಂಗ್‌ನಲ್ಲಿ ಭಾರತದ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ. ಕಳೆದ ಬಾರಿ ಗೇಮ್ಸ್‌ನಲ್ಲಿ ದೇಶಕ್ಕೆ 7 ಪದಕ ಲಭಿಸಿದ್ದವು. ಇನ್ನು, ಜುಡೋ ಸ್ಪರ್ಧೆಯಲ್ಲಿ 2 ಐತಿಹಾಸಿಕ ಚಿನ್ನ ಸೇರಿ ಒಟ್ಟು 4 ಪದಕಗಳು ಬಂದವು. ಇದು ಗೇಮ್ಸ್‌ನ ಇತಿಹಾಸದಲ್ಲೇ ಜುಡೋದಲ್ಲಿ ಭಾರತದ ಸಾರ್ವಕಾಲಿಕ ಗರಿಷ್ಠ ಪದಕ ಸಾಧನೆ. ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಜುಡೋ ಪಟು ಎಂಬ ಖ್ಯಾತಿಯನ್ನು ಅಸ್ಮಿತಾ ಡೇ ತಮ್ಮದಾಗಿಸಿಕೊಂಡರು.

ಇನ್ನು, ಅಥ್ಲೆಟಿಕ್ಸ್‌ ಹಾಗೂ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಒಟ್ಟಾಗಿ 16 ಪದಕಗಳು ಭಾರತಕ್ಕೆ ಲಭಿಸಿದವು. ಇದು 2022ಕ್ಕೆ ಹೋಲಿಸಿದರೆ ಡಬಲ್‌ ಸಾಧನೆ. ಪ್ಯಾರಾ ಅಥ್ಲೆಟಿಕ್ಸ್‌ನಲ್ಲೇ ಈ ಬಾರಿ 3 ಚಿನ್ನ ಸೇರಿ 7 ಪದಕ ಬಂದವು. ಇದು ಗೇಮ್ಸ್‌ನ ಆವೃತ್ತಿಯೊಂದರಲ್ಲಿ ಗರಿಷ್ಠ ಸಾಧನೆ.

2002ರಿಂದ ಭಾರತಕ್ಕೆ ಅಗ್ರ-5ರೊಳಗೆ ಸ್ಥಾನ

ಭಾರತ ಕಾಮನ್‌ವೆಲ್ತ್‌ ಗೇಮ್ಸ್‌ನ ಪದಕ ಪಟ್ಟಿಯಲ್ಲಿ 2002ರಿಂದಲೂ ಅಗ್ರ-5ರೊಳಗೆ ಸ್ಥಾನ ಪಡೆದುಕೊಳ್ಳುತ್ತಿವೆ. ಈ ಬಾರಿ ಆರಂಭಿಕ 9 ದಿನಗಳಲ್ಲಿ 9,10ನೇ ಸ್ಥಾನಗಳಲ್ಲಿದ್ದ ಭಾರತ, ಶನಿವಾರ ಭರ್ಜರಿ ಪದಕ ಬೇಟೆಯೊಂದಿಗೆ 4ನೇ ಸ್ಥಾನಕ್ಕೇರಿತು. 2002, 2006ರಲ್ಲಿ ಭಾರತ 4ನೇ ಸ್ಥಾನಿಯಾಗಿದ್ದರೆ, 2010ರ ನವದೆಹಲಿ ಗೇಮ್ಸ್‌ನಲ್ಲಿ 2ನೇ ಸ್ಥಾನಕ್ಕೆ ಜಿಗಿದಿತ್ತು. 2014ರಲ್ಲಿ 5ನೇ ಸ್ಥಾನಕ್ಕೆ ಕುಸಿದಿದ್ದರೆ, 2018ರಲ್ಲಿ 3ನೇ ಸ್ಥಾನಕ್ಕೇರಿತ್ತು. 2022ರಲ್ಲಿ 4ನೇ ಸ್ಥಾನಿಯಾಗಿದ್ದ ಭಾರತ ಈ ಬಾರಿಯೂ ಅದೇ ಸ್ಥಾನ ಪಡೆದುಕೊಂಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

25 ಸಿಕ್ಸ್, 15 ಫೋರ್, 233 ರನ್, ಟೀಕೆಗಳಿಗೆ ತಮ್ಮ ಬ್ಯಾಟ್ ನಿಂದಲೇ ಉತ್ತರ ಕೊಟ್ಟ ಅಭಿಷೇಕ್ ಶರ್ಮಾ!
ಏಷ್ಯಾಕಪ್ 2026 ಮಹಿಳಾ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ, ಕನ್ನಡಿಗರಿಗೆ ಇದೆಯಾ ಸ್ಥಾನ?