* ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮುಂದುವರೆದ ಸಿಂಧು, ಶ್ರೀಕಾಂತ್ ಗೆಲುವಿನ ನಾಗಾಲೋಟ
* ಪದಕಕ್ಕೆ ಮತ್ತಷ್ಟು ಹತ್ತಿರವಾದ ಭಾರತೀಯ ಶಟ್ಲರ್‌ಗಳು
* ಲಕ್ಷ್ಯ ಸೆನ್ ಹಾಗೂ ಪಾರುಪಳ್ಳಿ ಕಶ್ಯಪ್ ಪ್ರಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
ಬರ್ಮಿಂಗ್‌ಹ್ಯಾಮ್(ಆ.06): ಕಾಮನ್‌ವೆಲ್ತ್ ಗೇಮ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು ಉಗಾಂಡದ ಹುಸಿನಾ ಕೊಬುಗಬೆ ವಿರುದ್ಧ 21-10, 21-9 ನೇರ ಗೇಮ್‌ಗಳಿಂದ ಗೆದ್ದರೆ, ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್ ಶ್ರೀಲಂಕಾದ ದುಮಿಂಡು ಅಬೇವಿಕ್ರಮ ವಿರುದ್ಧ 21-9, 21-12ರಿಂದ ಜಯಿಸಿದರು. ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಕೂಡಾ ಕ್ವಾರ್ಟರ್‌ಗೆ ತಲುಪಿದರು. ಇದೇ ವೇಳೆ ಲಕ್ಷ್ಯ ಸೆನ್ ಹಾಗೂ ಪಾರುಪಳ್ಳಿ ಕಶ್ಯಪ್ ಪ್ರಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಬಾಕ್ಸಿಂಗ್: ಭಾರತಕ್ಕೆ 7ನೇ ಪದಕ ಖಚಿತ
ಬರ್ಮಿಂಗ್‌ಹ್ಯಾಮ್ ಗೇಮ್ಸ್‌ನಲ್ಲಿ ಭಾರತ ಬಾಕ್ಸಿಂಗ್‌ನಲ್ಲಿ 7 ಪದಕಗಳನ್ನು ಖಚಿತಪಡಿಸಿಕೊಂಡಿದೆ. ಗುರುವಾರ ರೋಹಿತ್ ಟೋಕಸ್ 67 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ನ್ಯೂಯೆ ದೇಶದ ಕ್ಸೇವಿಯರ್ ಮತಾಫ-ಇಕಿನೊಫೆ ವಿರುದ್ಧ 5-0 ಅಂತರದಲ್ಲಿ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟರು. ಈಗಾಗಲೇ ಅಮಿತ್ ಪಂಘಾಲ್, ನಿಖಾತ್ ಜರೀನ್ ಸೇರಿದಂತೆ 6 ಬಾಕ್ಸರ್‌ಗಳು ಸೆಮೀಸ್‌ಗೆ ಲಗ್ಗೆ ಇಟ್ಟಿದ್ದರು. ಬಾಕ್ಸಿಂಗ್‌ನಲ್ಲಿ ಸೆಮೀಸ್‌ನಲ್ಲಿ ಸೋತವರಿಗೂ ಕಂಚಿನ ಪದಕ ಸಿಗಲಿದೆ.
4*400 ಮೀ. ರಿಲೇ: ಭಾರತ ತಂಡ ಫೈನಲ್‌ಗೆ
ಪುರುಷರ 4*400 ಮೀ. ರಿಲೇಯಲ್ಲಿ ಭಾರತ ತಂಡ ಫೈನಲ್ ಪ್ರವೇಶಿಸಿದೆ. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಅನಸ್ ಯಹಿಯಾ, ನಿರ್ಮಲ್, ಮುಹಮ್ಮದ್ ಅಜ್ಮಲ್, ಅಮೊಲ್ ಜಾಕೊಬ್ ಅವರನ್ನೊಳಗೊಂಡ ತಂಡ 3 ನಿಮಿಷ 06.97 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ಹೀಟ್ಸ್‌ನಲ್ಲಿ 2ನೇ ಹಾಗೂ ಒಟ್ಟಾರೆ 6ನೇ ಸ್ಥಾನಿಯಾಗಿ ಪದಕ ಸುತ್ತಿಗೆ ತಲುಪಿತು.
Commonwealth Games 2022: ಎದುರಾಳಿಯನ್ನು ಫಾಲ್ ಮಾಡಿ ಸೂಪರ್ ಗೆಲುವು ಕಂಡ ಸಾಕ್ಷಿಗೆ ಸ್ವರ್ಣ!
ಟಿಟಿ: ಮನಿಕಾ-ಸತ್ಯನ್, ಶರತ್-ಶ್ರೀಜಾ ಕ್ವಾರ್ಟರ್‌ಗೆ
ಟೇಬಲ್ ಟೆನಿಸ್‌ನಲ್ಲಿ ಭಾರತದ ಮನಿಕಾ ಬಾತ್ರಾ-ಜಿ.ಸತ್ಯನ್, ಶರತ್ ಕಮಾಲ್-ಅಕುಲಾ ಶ್ರೀಜಾ, ಸತ್ಯನ್-ಶರತ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಮನಿಕಾ ಹಾಗೂ ಶ್ರೀಜಾ ಸಿಂಗಲ್ಸ್‌ನಲ್ಲೂ ಅಂತಿಮ 8ರ ಘಟ್ಟ ತಲುಪಿದ್ದಾರೆ. ಶುಕ್ರವಾರ ಮಿಶ್ರ ಡಬಲ್ಸ್ ಪ್ರಿ ಕ್ವಾರ್ಟರ್‌ನಲ್ಲಿ ಮನಿಕಾ-ಸತ್ಯನ್ ಜೋಡಿ ನೈಜೀರಿಯಾದ ಜೋಡಿ ವಿರುದ್ಧ 11-7, 11-6, 11-7 ಅಂತರದಲ್ಲಿ ಜಯಗಳಿಸಿದರೆ, ಶರತ್-ಶ್ರೀಜಾ ಜೋಡಿ ಮಲೇಷ್ಯಾದ ಜೋಡಿ ವಿರುದ್ಧ 5-11, 11-2, 11-6, 11-5 ಅಂತರದಲ್ಲಿ ಗೆದ್ದು ಅಂತಿಮ 8ರ ಘಟ್ಟ ತಲುಪಿತು. ಶರತ್-ಸತ್ಯನ್ ಜೋಡಿ ಪುರುಷರ ಡಬಲ್ಸ್‌ನಲ್ಲಿ ಬಾಂಗ್ಲಾದೇಶದ ಜೋಡಿಗೆ ಸೋಲುಣಿಸಿತು. ಇನ್ನು, ಮನಿಕಾ ಮಹಿಳಾ ಸಿಂಗಲ್ಸ್‌ನಲ್ಲಿ ಆಸ್ಪ್ರೇಲಿಯಾದ ಜೀ ಮಿನ್‌ಯಂಗ್ ವಿರುದ್ಧ ಗೆದ್ದರೆ, ಶ್ರೀಜಾ ವೇಲ್ಸ್‌ನ ಶಾರ್ಲೊಟ್ ಕ್ಯಾರೆ ವಿರುದ್ಧ ಜಯಗಳಿಸಿದರು.
ಪ್ಯಾರಾ ಟೇಬಲ್ ಟೆನಿಸ್: ಭವಿನಾ ಪಟೇಲ್ ಫೈನಲ್‌ಗೆ
ಟೋಕಿಯೋ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ, ಭಾರತದ ಭವಿನಾ ಪಟೇಲ್ ಕಾಮನ್‌ವೆಲ್ತ್ ಗೇಮ್ಸ್‌ನ ಪ್ಯಾರಾ ಟೇಬಲ್ ಟೆನಿಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಭವಿನಾ ಮಹಿಳಾ ಸಿಂಗಲ್ಸ್ 3-5 ವಿಭಾಗದಲ್ಲಿ ಇಂಗ್ಲೆಂಡ್‌ನ ಸ್ಯೂ ಬೈಲಿ ವಿರುದ್ಧ 11-6, 11-6, 11-6 ಅಂತರದಲ್ಲಿ ಗೆದ್ದು ಪದಕ ಸುತ್ತಿಗೆ ಲಗ್ಗೆ ಇಟ್ಟರು. ಆದರೆ ಸೋನಲ್‌ಬೆನ್ ಪಟೇಲ್ ಹಾಗೂ ರಾಜ್ ಅಲಗಾರ್ ಸೆಮಿಫೈನಲ್‌ನಲ್ಲಿ ಸೋತಿದ್ದು, ಕಂಚಿನ ಪದಕಕ್ಕೆ ಸೆಣಸಲಿದ್ದಾರೆ.