
ಬರ್ಮಿಂಗ್‌ಹ್ಯಾಮ್(ಆ.08): 22ನೇ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟ ಸೋಮವಾರವಾದ ಇಂದು ತೆರೆ ಬೀಳಲಿದೆ. 11 ದಿನಗಳ ಕಾಲ ನಡೆದ ಈ ಕ್ರೀಡಾಕೂಟ ಇದೀಗ ಅಂತಿಮಘಟ್ಟ ತಲುಪಿದ್ದು, ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳಾಗಿ ಬಾಕ್ಸರ್ ನಿಖಾತ್ ಜರೀನ್ ಹಾಗೂ ಟೇಬಲ್ ಟೆನಿಸ್ ಆಟಗಾರ ಅಂತ್ ಶರತ್ ಕಮಲ್ ಆಯ್ಕೆಯಾಗಿದ್ದಾರೆ.
ಆಗಸ್ಟ್ 08ರಂದು ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ರಾತ್ರಿ 11:30 ಕ್ಕೆ ಸಮಾರೋಪ ಸಮಾರಂಭ ಆರಂಭವಾಗಲಿದೆ. ಇದೀಗ ಭಾರತೀಯ ಒಲಿಂಪಿಕ್ಸ್ ಸಮಿತಿಯು ನಿಖಾತ್ ಜರೀನ್ ಹಾಗೂ ಶರತ್ ಕಮಲ್ ಅವರನ್ನು ಸಮಾರೋಪ ಸಮಾರಂಭದ ಭಾರತದ ಧ್ವಜಧಾರಿಗಳಾಗಿ ಆಯ್ಕೆ ಮಾಡಿದೆ. ಇನ್ನು ಕಳೆದ ಜುಲೈ 28ರಂದು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತದ ಧ್ವಜಧಾರಿಗಳಾಗಿ ತಾರಾ ಶಟ್ಲರ್ ಪಿವಿ ಸಿಂಧು ಹಾಗೂ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಕಾಣಿಸಿಕೊಂಡಿದ್ದರು.
ಸಾಕಷ್ಟು ವರ್ಷಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೇಬಲ್ ಟೆನಿಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಾ ಬಂದಿರುವ ಶರತ್ ಕಮಲ್‌ಗೆ ಸಿಕ್ಕ ದೊಡ್ಡ ಗೌರವ ಇದೆನಿಸಿದೆ. ಶರತ್ ಕಮಲ್, ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಟೇಬಲ್ ಟೆನಿಸ್ ತಂಡವನ್ನು ಮುನ್ನಡೆಸಿದ್ದೂ ಅಲ್ಲದೇ ಪುರುಷರ ಡಬಲ್ಸ್‌ನಲ್ಲಿ ಜಿ. ಸತ್ಯನ್ ಜತೆಗೂಡಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 40 ವರ್ಷದ ಶರತ್ ಕಮಲ್ ಪುರುಷರ ವಿಭಾಗದಲ್ಲಿ ಈಗಾಗಲೇ ಫೈನಲ್ ಪ್ರವೇಶಿಸಿದ್ದು, ಇಂದು ಚಿನ್ನ ಗೆಲ್ಲುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.
ಇಂದು ಬರ್ಮಿಂಗ್‌ಹ್ಯಾಮ್ ಗೇಮ್ಸ್‌ಗೆ ವೈಭವದ ತೆರೆ; ಮತ್ತಷ್ಟು ಪದಕಗಳ ಬೇಟೆಗೆ ಭಾರತ ರೆಡಿ
ಇನ್ನು ಮತ್ತೊಂದೆಡೆ ಮಹಿಳೆಯರ 48 ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ನಿಖಾತ್ ಜರೀನ್, ಇದೀಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚಿಗಿನ ವರ್ಷಗಳಲ್ಲಿ ನಿಖಾತ್ ಜರೀನ್ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕಳೆದ ಮೇನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ನಿಖಾತ್, ಇದೀಗ ಮತ್ತೊಮ್ಮೆ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಭಾರತ 20 ಚಿನ್ನ 15 ಬೆಳ್ಳಿ ಹಾಗೂ 22 ಕಂಚಿನ ಪದಕಗಳೊಂದಿಗೆ ಒಟ್ಟು 57 ಪದಕಗಳ ಸಹಿತ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.