
ನವದೆಹಲಿ(ಫೆ.21): ವಿಶ್ವ ಮಟ್ಟದ ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭಗಳಲ್ಲಿ ಭಾರತದ ಮಹಿಳಾ ಕ್ರೀಡಾಪಟುಗಳು ಸೀರೆಯುಟ್ಟು ಪಥಸಂಚಲನದಲ್ಲಿ ಭಾಗವಹಿಸುವುದು ಸಂಪ್ರದಾಯ. ಆದರೆ ಆ ಸಂಪ್ರದಾಯವನ್ನು ಅಥ್ಲೀಟ್'ಗಳು ಏ.4ರಿಂದ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್'ನಲ್ಲಿ ಆರಂಭಗೊಳ್ಳಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮುರಿಯಲಿದ್ದಾರೆ. ಸೀರೆ ಬದಲಿಗೆ ಪ್ಯಾಂಟ್ ಹಾಗೂ ಬ್ಲೇಜರ್ ಧರಿಸಲಿದ್ದಾರೆ.
ಭಾರತದ ಪುರುಷ ಹಾಗೂ ಮಹಿಳಾ ಅಥ್ಲೀಟ್'ಗಳು ನೌಕಾ ನೀಲಿ (ನೇವಿ ಬ್ಲೂ) ಬಣ್ಣದ ಪ್ಯಾಂಟ್ ಹಾಗೂ ಬ್ಲೇಜರ್'ಗಳನ್ನು ಧರಿಸಲಿದ್ದಾರೆ ಎಂದು ಐಒಎ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಐಒಎ ಕಾರ್ಯದರ್ಶಿ ರಾಜೀವ್ ಮೆಹ್ತಾ ‘ಅಥ್ಲೀಟ್'ಗಳಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಉದ್ಘಾಟನಾ ಸಮಾರಂಭ 4-5 ಗಂಟೆಗಳ ಕಾಲ ನಡೆಯಲಿದ್ದು, ಅಷ್ಟು ಹೊತ್ತು ಸೀರೆಯುಟ್ಟುಕೊಂಡಿರುವುದು ಕಷ್ಟ ಎಂದು ಅಥ್ಲೀಟ್'ಗಳು ತಿಳಿಸಿದ್ದರು. ಜತೆಗೆ ಸೀರೆಯುಡಲು ಹಲವರಿಗೆ ಬರುವುದಿಲ್ಲ. ಅವರಿಗೆ ಇತರರ ನೆರವು ಬೇಕಾಗಲಿದೆ. ಇದರಿಂದ ಸಮಯ ವ್ಯರ್ಥವಾಗಲಿದೆ’ ಎಂದು ಹೇಳಿದ್ದಾರೆ.
ಅಥ್ಲೀಟ್'ಗಳಿಂದ ಮಿಶ್ರ ಪ್ರತಿಕ್ರಿಯೆ: ಭಾರತೀಯ ಒಲಿಂಪಿಕ್ ಸಂಸ್ಥೆಯ ಈ ನಿರ್ಧಾರಕ್ಕೆ ಮಹಿಳಾ ಅಥ್ಲೀಟ್'ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾರಾ ಶೂಟರ್ ಹೀನಾ ಸಿಧು ‘ಸೀರೆಗಿಂತ ಪ್ಯಾಂಟ್ ಧರಿಸುವುದು ಸುಲಭ. ಇದರಿಂದ ಬಹಳಷ್ಟು ಸಮಯ ಉಳಿಯಲಿದೆ. ಖಂಡಿತವಾಗಿಯೂ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. 2010ರ ಕಾಮನ್'ವೆಲ್ತ್ ಹಾಗೂ 2010ರ ಏಷ್ಯನ್ ಗೇಮ್ಸ್'ಗೆ ಮಾತ್ರ ನಾನು ಸೀರೆಯುಟ್ಟಿದ್ದು. ಅದೂ ಮತ್ತೊಬ್ಬರ ಸಹಾಯದಿಂದ’ ಎಂದು ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ತಾವು ಸೀರೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ‘ನಿರ್ಧಾರ ಕೈಗೊಳ್ಳುವ ಮೊದಲು ಐಒಎ ಅಥ್ಲೀಟ್'ಗಳ ಅಭಿಪ್ರಾಯ ಕೇಳಬೇಕಿತ್ತು. ಸೀರೆಯುಡಲು ಇಷ್ಟವಿರುವವರಿಗೆ ಅನುಮತಿ ನೀಡಿ, ಉಳಿದವರಿಗೆ ಪ್ಯಾಂಟ್ ಧರಿಸುವಂತೆ ಸೂಚಿಸಬಹುದಾಗಿತ್ತು’ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.