ಭಾರತ ಕ್ರಿಕೆಟ್ ಇತಿಹಾಸದಲ್ಲಿ ಕೊಹ್ಲಿಯ ಅಪರೂಪದ ಸಾಧನೆಯಿದು..!

By Suvarna Web DeskFirst Published Feb 21, 2018, 6:04 PM IST
Highlights

ತಮ್ಮ ವೃತ್ತಿಬದುಕಿನಲ್ಲಿ ಮೊದಲ ಬಾರಿಗೆ 900 ರೇಟಿಂಗ್ ಅಂಕ ದಾಟುವ ಮೂಲಕ, ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದುಬೈ(ಫೆ.21): ರನ್ ಮಷಿನ್ ವಿರಾಟ್ ಕೊಹ್ಲಿ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ತಮ್ಮ ವೃತ್ತಿಬದುಕಿನಲ್ಲಿ ಮೊದಲ ಬಾರಿಗೆ 900 ರೇಟಿಂಗ್ ಅಂಕ ದಾಟುವ ಮೂಲಕ, ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಐಸಿಸಿ ನೂತನ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ದ.ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ದಾಖಲೆಯ 558 ರನ್ ಸಿಡಿಸಿದ ವಿರಾಟ್ ಸದ್ಯ 909 ಅಂಕ ಪಡೆದಿದ್ದಾರೆ. ಜತೆಗೆ 27 ವರ್ಷದ ಆಟಗಾರನಿಂದ ದಾಖಲಾದ ಅತಿಹೆಚ್ಚು ರೇಟಿಂಗ್ ಅಂಕ ಇದಾಗಿದೆ. ಸರಣಿ ಆರಂಭಕ್ಕೂ ಮುನ್ನ ವಿರಾಟ್ 876 ಅಂಕಗಳನ್ನು ಹೊಂದಿದ್ದರು. ಕೊಹ್ಲಿಯ 909 ಅಂಕ, ಸಾರ್ವಕಾಲಿಕ ಗರಿಷ್ಠ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ. ಸದ್ಯ ಅವರು ಸರ್.ವಿವಿಯನ್ ರಿಚರ್ಡ್ಸ್ 935(1985), ಜಹೀರ್ ಅಬ್ಬಾಸ್ (1983), ಗ್ರೆಗ್ ಚಾಪೆಲ್ 921(1981), ಡೇವಿಡ್ ಗೋವರ್ 919(1983), ಡೀನ್ ಜೋನ್ಸ್ 918(1991), ಜಾವೆದ್ ಮಿಯಾಂದಾದ್ 910(1987) ನಂತರದ ಸ್ಥಾನ ಪಡೆದುಕೊಂಡಿದ್ದಾರೆ.

ಬುಮ್ರಾ, ರಶೀದ್ ನಂ.1: ಐಸಿಸಿ ಏಕದಿನ ಬೌಲರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ 2 ಸ್ಥಾನಗಳ ಏರಿಕೆ ಕಂಡ ಜಸ್‌'ಪ್ರೀತ್ ಬುಮ್ರಾ ಹಾಗೂ 8 ಸ್ಥಾನಗಳ ಏರಿಕೆ ಕಂಡ ಆಫ್ಘಾನಿಸ್ತಾನದ ರಶೀದ್ ಖಾನ್ ಜಂಟಿ ನಂ.1 ಸ್ಥಾನ ಪಡೆದಿದ್ದಾರೆ. ಇಬ್ಬರೂ 787 ರೇಟಿಂಗ್ ಅಂಕಗಳನ್ನು ಪಡೆದುಕೊಂಡಿದ್ದಾರೆ. 21 ಸ್ಥಾನಗಳ ಏರಿಕೆ ಕಂಡಿರುವ ಯಜುವೇಂದ್ರ ಚಹಲ್, 8ನೇ ಸ್ಥಾನ ಪಡೆದರೆ, ಕುಲ್ದೀಪ್ 15 ಹಾಗೂ ಅಕ್ಷರ್ 16ನೇ ಸ್ಥಾನದಲ್ಲಿದ್ದಾರೆ. ಭುವನೇಶ್ವರ್ 23ನೇ ಸ್ಥಾನಕ್ಕೆ ಕುಸಿದಿದ್ದಾರೆ.

ರಶೀದ್ ಅತಿ ಕಿರಿಯ ನಂ.1!: ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಅತಿಕಿರಿಯ ಆಟಗಾರ ಎನ್ನುವ ದಾಖಲೆಯನ್ನು ಆಫ್ಘನ್‌'ನ ರಶೀದ್ ಖಾನ್ ಬರೆದಿದ್ದಾರೆ. 19 ವರ್ಷದ ರಶೀದ್, ಜಿಂಬಾಬ್ವೆ ವಿರುದ್ಧ ಸರಣಿಯಲ್ಲಿ 16 ವಿಕೆಟ್ ಕಬಳಿಸಿದರು. ಈ ಮೊದಲು ಅತಿಕಿರಿಯ ಆಟಗಾರ ಎನ್ನುವ ದಾಖಲೆ ಸಕ್ಲೇನ್ ಮುಷ್ತಾಕ್(21 ವರ್ಷ) ಹೆಸರಿನಲ್ಲಿತ್ತು.

click me!