
ಬಾಕು(ಅಜರ್‌ಬೈಜಾನ್): ಭಾರತದ ಯುವ ಚೆಸ್ ಪಟು ಆರ್. ಪ್ರಜ್ಞಾನಂದ 2023ರ ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಟೈಬ್ರೇಕರ್‌ನಲ್ಲಿ 5 ಬಾರಿಯ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಎದುರು ವಿರೋಚಿತ ಸೋಲು ಅನುಭವಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಆಗಸ್ಟ್ 24ರ ಗುರುವಾರ ನಡೆದ ಟೈಬ್ರೇಕರ್ ಪಂದ್ಯದಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ 18ರ ಪ್ರಜ್ಞಾನಂದ 0.5-1.5 ಅಂಕಗಳ ಅಂತರದಲ್ಲಿ ಸೋಲನುಭವಿಸಿದರು. ಇದರೊಂದಿಗೆ ಈಗಾಗಲೇ 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಕಾರ್ಲ್‌ಸನ್ ಚೊಚ್ಚಲ ಬಾರಿ ವಿಶ್ವಕಪ್ ಕಿರೀಟಕ್ಕೆ ಮುತ್ತಿಟ್ಟರು.
ನಾರ್ವೆಯ ಅನುಭವಿ ಆಟಗಾರನ ವಿರುದ್ಧದ ಮಂಗಳವಾರ ಹಾಗೂ ಬುಧವಾರ ನಡೆದಿದ್ದ 2 ಸುತ್ತಿನ ಹಣಾಹಣಿ ಡ್ರಾಗೊಂಡಿತ್ತು. ಹೀಗಾಗಿ ಚೆಸ್ ವಿಶ್ವಕಪ್ ಯಾರ ಪಾಲಾಗಲಿದೆ ಎಂಬುದನ್ನು ನಿರ್ಧರಿಸಲು ಗುರುವಾರ ಟೈ ಬ್ರೇಕರ್ ನಡೆಸಲಾಯಿತು. ಟೈ ಬ್ರೇಕರ್‌ನ ಮೊದಲ ಸುತ್ತಿನಲ್ಲಿ ಬಿಳಿ ಕಾಯಿಗಳೊಂದಿಗೆ ಆಡಿದ ತಮಿಳುನಾಡಿನ ಪ್ರಜ್ಞಾನಂದ, 47 ನಡೆಗಳ ಬಳಿಕ ಕಾರ್ಲ್‌ಸನ್‌ಗೆ ಶರಣಾದರು.
2ನೇ ಸುತ್ತಿನಲ್ಲಿ ಪ್ರಜ್ಞಾನಂದಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾದರೆ, ಕಾರ್ಲ್‌ಸನ್‌ಗೆ ಡ್ರಾ ಸಾಧಿಸಿದರೂ ಸಾಕಿತ್ತು. 2ನೇ ಸುತ್ತಿನಲ್ಲಿ ಪ್ರಜ್ಞಾನಂದ ಕೊಂಚ ಪ್ರತಿರೋಧ ತೋರಿದ ಹೊರತಾಗಿಯೂ ಕೇವಲ 22 ನಡೆಗಳ ಬಳಿಕ ಡ್ರಾಗೊಂಡಿತು.
ಫೈನಲ್‌ನಲ್ಲಿ ಮುಗ್ಗರಿಸಿದ ಪ್ರಜ್ಞಾನಂದನಿಗೆ ಸಿಕ್ಕ ನಗದು ಬಹುಮಾನವೆಷ್ಟು?
ಚೆಸ್ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಆಟಗಾರನಿಗೆ ಸುಮಾರು ₹ 90, 93,551 ಲಕ್ಷ ರುಪಾಯಿ ಬಹುಮಾನ ನಿಗದಿ ಪಡಿಸಲಾಗಿತ್ತು. ಅದರಂತೆ ನಾರ್ವೆಯ ನಂ.1 ಚೆಸ್ ಪಟು ₹ 90, 93,551 ಲಕ್ಷ ರುಪಾಯಿ ಬಹುಮಾನವನ್ನು ಜೇಬಿಗಿಳಿಸಿಕೊಂಡರು. ಇನ್ನು ರನ್ನರ್ ಅಪ್ ಸ್ಥಾನ ಪಡೆದ ಭಾರತದ ಚೆಸ್ ಆಟಗಾರ ಪ್ರಜ್ಞಾನಂದ 66,13,444 ರುಪಾಯಿಗಳ ನಗದು ಬಹುಮಾನವನ್ನು ತನ್ನದಾಗಿಸಿಕೊಂಡರು.
Chess World Cup 2023: ಪ್ರಜ್ಞಾನಂದ ಕೈ ತಪ್ಪಿದ ಚೆಸ್ ವಿಶ್ವಕಪ್ ಕಿರೀಟ..!
ದೇಶದ ಚೆಸ್‌ನ ಹೊಸ ಭರವಸೆ ಪ್ರಜ್ಞಾನಂದ!
ಪ್ರಜ್ಞಾನಂದ ವಿಶ್ವಕಪ್ ಗೆಲ್ಲದಿದ್ದರೂ, ಇಡೀ ದೇಶದ ಹೃದಯ ಗೆದ್ದಿದ್ದಾರೆ. ಅವರ ಹೆಸರೀಗ ಎಲ್ಲರ ಮನೆ ಮಾತಾಗಿದೆ. 2005ರ ಆ.10ರಂದು ರಮೇಶ್‌ಬಾಬು-ನಾಗಲಕ್ಷ್ಮೀ ದಂಪತಿಯ ಪುತ್ರನಾಗಿ ಚೆನ್ನೈನಲ್ಲಿ ಜನಿಸಿದ ಪ್ರಜ್ಞಾನಂದ ಅವರನ್ನು, ಹೆಚ್ಚಾಗಿ ಟೀವಿ ನೋಡುವುದನ್ನು ತಪ್ಪಿಸಬೇಕು ಎಂಬ ಕಾರಣಕ್ಕೆ ಅವರ ಪೋಷಕರು ಚೆಸ್ ತರಬೇತಿಗೆ ಕಳುಹಿಸಲು ಶುರು ಮಾಡಿದರಂತೆ. ಹೀಗಾಗಿ, ನಾಲ್ಕೂವರೆ ವರ್ಷಕ್ಕೇ ಚೆಸ್ ಆಡಲು ಶುರುವಿಟ್ಟ ಪ್ರಜ್ಞಾನಂದ, 12ನೇ ವರ್ಷದಲ್ಲೇ ಗ್ರ್ಯಾಂಡ್‌ಮಾಸ್ಟರ್ ಪಟ್ಟ ಅಲಂಕರಿಸಿದರು.
ಚೆಸ್ ಆಟದ ಕೌಶಲ್ಯಗಳನ್ನು ಬಾಲ್ಯದಲ್ಲೇ ಕರಗತ ಮಾಡಿಕೊಂಡ ಪ್ರಜ್ಞಾನಂದ, 2013ರಲ್ಲಿ ಅಂಡರ್-8 ವಿಭಾಗದಲ್ಲಿ ವಿಶ್ವ ಯುವ ಚಾಂಪಿಯನ್‌ಶಿಪ್ ಗೆದ್ದರು. ಅಲ್ಲದೇ 10ನೇ ವರ್ಷದಲ್ಲೇ ಇಂಟರ್‌ನ್ಯಾಷನಲ್ ಮಾಸ್ಟರ್ ಆಗಿ, ಈ ಸಾಧನೆ ಮಾಡಿದ ಅತಿ ಕಿರಿಯ ಎನಿಸಿಕೊಂಡರು. 2017ರಲ್ಲಿ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದ ಅವರು ಈ ಸಾಧನೆ ಮಾಡಿದ 5ನೇ ಅತಿ ಕಿರಿಯ ಎಂಬ ಖ್ಯಾತಿ ಸಂಪಾದಿಸಿದರು. 2022ರಲ್ಲಿ ವಿಶ್ವ ನಂ.1 ಕಾರ್ಲ್‌ಸನ್‌ರನ್ನೇ ಸೋಲಿಸಿ ಎಲ್ಲರ ಹುಬ್ಬೇರಿಸಿದ್ದರು. ಈ ಮೂಲಕ ವಿಶ್ವನಾಥನ್ ಹಾಗೂ ಪಿ.ಹರಿಕೃಷ್ಣ ಬಳಿಕ ಕಾರ್ಲ್‌ಸನ್‌ರನ್ನು ಸೋಲಿಸಿದ 3ನೇ ಭಾರತೀಯ ಎನಿಸಿಕೊಂಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.