ಚೆಸ್ ವಿಶ್ವಕಪ್ ಫೈನಲ್‌ನ ಮೊದಲ ಸುತ್ತು ರೋಚಕ ಡ್ರಾನಲ್ಲಿ ಮುಕ್ತಾಯ
18 ವರ್ಷದ ಆರ್.ಪ್ರಜ್ಞಾನಂದ ಅವರು ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಮೊದಲ ಸುತ್ತಿನಲ್ಲಿ ಡ್ರಾ
5 ಬಾರಿ ವಿಶ್ವ ಚಾಂಪಿಯನ್ ನಾರ್ವೆಯ ಆಟಗಾರನಿಗೆ ಪ್ರಬಲ ಪೈಪೋಟಿ
ಬಾಕು(ಅಜರ್‌ಬೈಜಾನ್): ಇಲ್ಲಿ ನಡೆಯುತ್ತಿರುವ ಚೆಸ್ ವಿಶ್ವಕಪ್‌ನ ಫೈನಲ್ ಹಣಾಹಣಿಯಲ್ಲಿ ಭಾರತದ ಯುವ ಚೆಸ್ ಚತುರ, 18 ವರ್ಷದ ಆರ್.ಪ್ರಜ್ಞಾನಂದ ಅವರು ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಮೊದಲ ಸುತ್ತಿನಲ್ಲಿ ಡ್ರಾ ಸಾಧಿಸಿದ್ದಾರೆ. 2 ದಶಕಗಳ ಬಳಿಕ ವಿಶ್ವಕಪ್‌ನ ಫೈನಲ್‌ಗೇರಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ತಮಿಳುನಾಡಿನ ಪ್ರಜ್ಞಾನಂದ, 5 ಬಾರಿ ವಿಶ್ವ ಚಾಂಪಿಯನ್ ನಾರ್ವೆಯ ಆಟಗಾರನಿಗೆ ಪ್ರಬಲ ಪೈಪೋಟಿ ನೀಡಿ ಆರಂಭಿಕ ಸುತ್ತು ಡ್ರಾಗೊಳಿಸುವಲ್ಲಿ ಯಶಸ್ವಿಯಾದರು.
ಬಿಳಿ ಕಾಯಿಗಳೊಂದಿಗೆ ಆಡಿದ ಪ್ರಜ್ಞಾನಂದ ಒಂದು ಹಂತದಲ್ಲಿ ಕಾರ್ಲ್‌ಸನ್ ಮೇಲೆ ಒತ್ತಡ ಹೇರಿದರು. ಹೀಗಾಗಿ ಕಾರ್ಲ್‌ಸನ್ ಸಮಯಾವಕಾಶದ ಕೊರತಯಿಂದ ಆಡಿದರೂ, ಯುವ ಭಾರತೀಯ ಆಟಗಾರನ ಮುಂದೆ ಒತ್ತಡ ನಿಭಾಯಿಸಿ ಹಿನ್ನಡೆ ತಪ್ಪಿಸಿದರು. ಕೊನೆ ಹಂತದಲ್ಲಿ ಪ್ರಜ್ಞಾನಂದ ಅಲ್ಪ ಹಿನ್ನಡೆ ಅನುಭವಿಸಿದಂತೆ ಕಂಡುಬಂದರೂ ಎಚ್ಚರಿಕೆಯ ನಡೆ ಮೂಲಕ ಸುತ್ತಿನಲ್ಲಿ ಹಿಡಿತ ಸಾಧಿಸಿದರು. ಭಾರೀ ಪೈಪೋಟಿ ಕಂಡು ಬಂದ ಪಂದ್ಯದಲ್ಲಿ 35 ನಡೆಗಳ ಬಳಿಕ ಇಬ್ಬರು ಆಟಗಾರರೂ ಡ್ರಾಗೊಳಿಸಲು ನಿರ್ಧರಿಸಿದರು. ಬುಧವಾರ 2ನೇ ಸುತ್ತು ನಡೆಯಲಿದೆ.
'ನಮಸ್ಕಾರ ಮೋದಿಜಿ': ಹರಿಣಗಳ ನಾಡಿಗೆ ಆತ್ಮೀಯವಾಗಿ ಸ್ವಾಗತಿಸಿದ, ಗ್ಯಾರಿ ಕರ್ಸ್ಟನ್, ಜಾಂಟಿ ರೋಡ್ಸ್..!
ಇಂದೂ ಡ್ರಾ ಆದರೆ ನಾಳೆ ಟೈ ಬ್ರೇಕರ್!
ಪ್ರಜ್ಞಾನಂದ ಹಾಗೂ ಕಾರ್ಲ್‌ಸನ್ ನಡುವಿನ ರೋಚಕ 2ನೇ ಸುತ್ತು ಇಂದು ನಡೆಯಲಿದ್ದು, ಗೆದ್ದವರು ಚೆಸ್ ವಿಶ್ವಕಪ್ ಪ್ರಶಸ್ತಿಗೆ ಮುತ್ತಿಡಲಿದ್ದಾರೆ. ಒಂದು ವೇಳೆ ಇಂದು ಕೂಡಾ ಡ್ರಾಗೊಂಡರೆ ಫಲಿತಾಂಶ ನಿರ್ಧಾರಕ್ಕಾಗಿ ನಾಳೆ ಟೈ ಬ್ರೇಕರ್ ಪಂದ್ಯ ನಡೆಯಲಿದೆ.
ಮೊದಲ ಸುತ್ತಿನಲ್ಲಿ ಗೆದ್ದ ಅಬಸೋವ್
3ನೇ ಸ್ಥಾನಕ್ಕಾಗಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ಸುತ್ತಿನಲ್ಲಿ ವಿಶ್ವ ನಂ.3, ಅಮೆರಿಕದ ಫ್ಯಾಬಿಯಾನೋ ಕರುವಾನಾ ವಿರುದ್ಧ ಅಜರ್‌ಬೈಜಾನ್‌ನ ನಿಜಾತ್ ಅಬಸೋವ್ ಗೆಲುವು ಸಾಧಿಸಿದರು. ಇಂದು 2ನೇ ಸುತ್ತು ನಡೆಯಲಿದ್ದು, ಕನಿಷ್ಠ ಡ್ರಾ ಸಾಧಿಸಿದರೂ ನಿಜಾತ್ ಚೆಸ್ ವಿಶ್ವಕಪ್‌ನಲ್ಲಿ 3ನೇ ಸ್ಥಾನಿ ಎನಿಸಿಕೊಳ್ಳಲಿದ್ದಾರೆ.
ವಿಶ್ವನಾಥನ್ ಸಾಲಿಗೆ ಸೇರಿದ ಪ್ರಜ್ಞಾನಂದ!
2000 ಹಾಗೂ 2002ರಲ್ಲಿ ವಿಶ್ವನಾಥನ್ ಆನಂದ್ ಚೆಸ್ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿದ್ದರು. ಆ ಬಳಿಕ ಭಾರತದಿಂದ ಯಾರೂ ಫೈನಲ್‌ಗೇರಿರಲಿಲ್ಲ. ಈಗ ಪ್ರಜ್ಞಾನಂದ ಫೈನಲ್‌ಗೆ ತಲುಪಿದ್ದು, ಈ ಸಾಧನೆ ಮಾಡಿದ ಕೇವಲ 2ನೇ ಭಾರತೀಯ ಎನಿಸಿಕೊಂಡಿದ್ದಾರೆ.
ಅಗ್ರ ಆಟಗಾರರನ್ನು ಮಣಿಸಿ ಪ್ರಜ್ಞಾನಂದ ಫೈನಲ್‌ಗೆ!
ಪ್ರಜ್ಞಾನಂದ ಟೂರ್ನಿಯ ಲೀಗ್ ಹಂತದಲ್ಲಿ ವಿಶ್ವ ನಂ.3 ಅಮೆರಿಕದ ಹಿಕರು ನಕಮುರಾ ಅವರನ್ನು ಸೋಲಿಸಿ ಅಂತಿಮ 16ರ ಘಟ್ಟ ಪ್ರವೇಶಿಸಿದ್ದರು. ಸೆಮೀಸ್‌ನಲ್ಲಿ ವಿಶ್ವ ನಂ.2 ಫ್ಯಾಬಿಯಾನೋ ವಿರುದ್ಧ ಗೆದ್ದ ಪ್ರಜ್ಞಾನಂದ, ಫೈನಲ್‌ನಲ್ಲಿ ವಿಶ್ವ ನಂ.1 ಆಟಗಾರ ಕಾರ್ಲ್‌ಸನ್ ವಿರುದ್ಧ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.