
ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪ್ರಬಲ ಪ್ರತಿಸ್ಪರ್ಧಿ ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲನುಭವಿಸಿದರೂ, ಪಂದ್ಯದ ಬಳಿಕ ಕ್ಯಾಪ್ಟನ್ ಕೊಹ್ಲಿಯ ಮಾತುಗಳು ಪಾಕ್ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದೆ. ಗಡಿಯಾಚೆಗಿನ ಕ್ರಿಕೆಟ್ ಪ್ರೇಮಿಗಳು ಕೊಹ್ಲಿಯ ಮಾತುಗಳನ್ನು ಕೇಳಿ ಧನ್ಯವಾದ ಹೇಳಿದ್ದು ಮಾತ್ರವಲ್ಲದೇ ಅವರನ್ನು ಓರ್ವ ಜಂಟಲ್ ಮ್ಯಾನ್ ಎಂದು ಬಣ್ಣಿಸಿದ್ದಾರೆ.
ಈ ಪ್ರಮುಖ ಪಂದ್ಯದಲ್ಲಿ ಸೋಲನುಭವಿಸಿದ ಬಳಿಕ ಮಾತನಾಡಿರುವ ಕೊಹ್ಲಿ 'ನಾನು ಪಾಕಿಸ್ತಾನಕ್ಕೆ ಅಭಿನಂದಿಸುತ್ತೇನೆ. ಪಾಕಿಸ್ತಾನದ ಪಾಲಿಗೆ ಇದು ಅದ್ಭುತ ಟೂರ್ನಮೆಂಟ್ ಆಗಿದೆ. ಅವರು ಪರಿಸ್ಥಿತಿಯನ್ನು ತಮಗೆ ಅನುಕೂಲವಾಗುವಂತೆ ಬಳಸಿಕೊಂಡ ರೀತಿ ನೋಡಿದರೆ ತಂಡದ ಆಟಗಾರರಲ್ಲಿ ಇರುವ ಪ್ರತಿಭೆ ಏನು ಎಂಬುವುದು ತಿಳಿಯುತ್ತದೆ. ಇವರು ಬಲಶಾಲಿಯಾಗಿರುವವರನ್ನೂ ಬೇಟೆಯಾಡಬಲ್ಲೆವು ಎಂಬುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನಮಗೆ ನಿರಾಸೆಯಾಗುವುದು ಸ್ವಾಭಾವಿಕ ಆದರೂ ನನ್ನ ಮುಖದಲ್ಲಿ ಮಂದಹಾಸವಿದೆ. ಫೈನಲ್'ವರೆಗಿನ ಪ್ರತಿಯೊಂದು ಪಂದ್ಯದಲ್ಲಿ ನಾವು ಅದ್ಭುತ ಪ್ರದರ್ಶನ ನೀಡಿರುವುದೇ ಇದಕ್ಕೆ ಕಾರಣ' ಎಂದಿದ್ದಾರೆ.
ಮುಂದೆ ಮಾತನಾಡಿದ ಕೊಹ್ಲಿ 'ಓರ್ವ ಆಟಗಾರ(ಫಖರ್ ಜಮಾನ್) ಯಾವುದಾದರೂ ಒಂದು ದಿನ ಉತ್ತಮ ಪ್ರದರ್ಶನ ನೀಡಿದರೆ ಅವರನ್ನು ತಡೆಹಿಡಿಯುವುದು ತುಂಬಾ ಕಷ್ಟ. ಯಾಕೆಂದರೆ ಅವರು ಶೇ. 80 ರಷ್ಟು ಶಾಟ್'ಗಳನ್ನು ಅಪಾಯದಿಂದ ಎದುರಿಸಿದ್ದಾರೆ. ಓರ್ವ ಬೌಲರ್ ಹಾಗೂ ಕ್ಯಾಪ್ಟನ್ ಆಗಿ ಹೇಳಬೇಕಾದರೆ ಇಂತಹ ಆಟಗಾರರನ್ನು ತಡೆಹಿಡಿಯುವುದು ಬಹಳ ಕಷ್ಟ. ನಾವು ನಮ್ಮ ಪರವಾಗಿ ಎದುರಾಳಿ ತಂಡದ ಆರಂಭಿಕ ಬ್ಯಾಟ್ಸ್'ಮನ್'ಗಳ ಜೋಡಿಯನ್ನು ಮುರಿಯಲು ಬಹಳ ಪ್ರಯತ್ನಿಸಿದೆವು ಆದರೆ ಪರಿಸ್ಥಿತಿ ನಮ್ಮ ಪರವಾಗಿರಲಿಲ್ಲ. ಇನ್ನು ಒಟ್ಟಾರೆಯಾಗಿ ಹೇಳುವುದಾದರೆ ನಮ್ಮ ತಂಡದ ಆಟದಿಂದ ನಾನು ಸಂತುಷ್ಟನಾಗಿದ್ದೇನೆ. ಇಲ್ಲಿಂದ ನಾವು ತಲೆ ಎತ್ತಿ ಹೋಗುತ್ತಿದ್ದೇವೆ. ಫೈನಲ್ ಪಂದ್ಯದಲ್ಲಿ ಎದುರಾಳಿ ತಂಡ ೆಲ್ಲಾ ರೀತಿಯಲ್ಲೂ ನಮಗಿಂತ ಒಂದು ಹೆಜ್ಜೆ ಮೇಲಿತ್ತು' ಎಂದಿದ್ದಾರೆ.
ವಿರಾಟ್ ಕೊಹ್ಲಿಯ ಈ ಮಾತುಗಳನ್ನು ಕೇಳಿದ ಪಾಕ್ ಅಭಿಮಾನಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮುಬಾಶೇರ್ ಮುಕ್ಬಲ್ ಈ ಕುರಿತಾಗಿ ಟ್ವೀಟ್ ಮಾಡಿದ್ದು, 'ಮ್ಯಾಚ್ ಬಳಿಕದ ನೀವು ಆಡಿದ ಮಾತುಗಳಿಗೆ ಧನ್ಯವಾದಗಳು. ನೀವು ಬಹಳಷ್ಟು ಜನರ ಹೃದಯ ಗೆದ್ದಿದ್ದೀರಿ. ನೀವೊಬ್ಬ ಮಹಾನ್ ಆಟಗಾರ ಹಾಗೂ ಜೆಂಟಲ್'ಮ್ಯಾನ್ ಎಂದಿದ್ದಾರೆ.
ಇನ್ನು ಇತರ ಅಭಿಮಾನಿಗಳು ಈ ಕುರಿತಾಗಿ ಟ್ವೀಟ್ ಮಾಡುತ್ತಾ 'ವಿರಾಟ್ ಕೊಹ್ಲಿ ನಿಮ್ಮ ಅದ್ಭುತ ಮಾತುಗಳಿಗೆ ಧನ್ಯವಾದಗಳು. ಟೀಂ ಇಂಡಿಯಾ ನಿಜಕ್ಕೂ ಅದ್ಭುತವಾಗಿತ್ತು. ಇಂತಹ ಅದ್ಭುತ ತಂಡದ ವಿರುದ್ಧ ಜಯಗಳಿಸಿ ಹೆಮ್ಮೆ ಎನಿಸುತ್ತಿದೆ' ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.