ವಿಂಬಲ್ಡನ್ ಗ್ರ್ಯಾನ್‌ಸ್ಲಾಂಗೆ ಮುತ್ತಿಕ್ಕಿದ 20 ವರ್ಷದ ಕಾರ್ಲೊಸ್ ಆಲ್ಕರಜ್
ಪುರುಷರ ಸಿಂಗಲ್ಸ್ ನಂ. 1 ಸ್ಥಾನ ಭದ್ರಪಡಿಸಿಕೊಂಡ ಸ್ಪೇನ್‌ನ 20 ವರ್ಷದ ಟೆನಿಸಿಗ
ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಮಹಿಳಾ ಸಿಂಗಲ್ಸ್‌ನಲ್ಲಿ ನಂ.1 ಸ್ಥಾನದಲ್ಲೇ ಮುಂದುವರಿದಿದ್ದಾರೆ.
ಲಂಡನ್(ಜು.18): ವಿಂಬಲ್ಡನ್ ಚಾಂಪಿಯನ್ ಸ್ಪೇನ್‌ನ 20ರ ಕಾರ್ಲೊಸ್ ಆಲ್ಕರ್ ಪುರುಷರ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದು, ಜೋಕೋವಿಚ್ 2ನೇ ಸ್ಥಾನದಲ್ಲೇ ಇದ್ದಾರೆ. ವಿಂಬಲ್ಡನ್ ಗೆದ್ದಿದ್ದರೆ ಜೋಕೋವಿಚ್ ನಂ.1 ಸ್ಥಾನಕ್ಕೆ ಮರಳುತ್ತಿದ್ದರು. ಇನ್ನು ವಿಂಬಲ್ಡನ್ ಕ್ವಾರ್ಟರ್ ಫೈನಲ್‌ನಲ್ಲಿ ಸೋತ ಹೊರತಾಗಿಯೂ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಮಹಿಳಾ ಸಿಂಗಲ್ಸ್‌ನಲ್ಲಿ ನಂ.1 ಸ್ಥಾನದಲ್ಲೇ ಮುಂದುವರಿದಿದ್ದಾರೆ.
ನೂತನ ಚಾಂಪಿಯನ್, ಚೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೋವಾ 32 ಸ್ಥಾನ ಮೇಲೇರಿ ಮೊದಲ ಬಾರಿ 10ನೇ ಸ್ಥಾನಕ್ಕೇರಿದ್ದು, ಸೆಮೀಸ್‌ಗೇರಿದ್ದ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ 49 ಸ್ಥಾನ ಜಿಗಿದು 27ನೇ ಸ್ಥಾನ ಪಡೆದಿದ್ದಾರೆ.
undefined
ಆಲ್ಕರಜ್‌ರ ಆಟಕ್ಕೆ ಮನಸೋತ ಜೋಕೋ!
ಪಂದ್ಯ ಮುಗಿದ ಬಳಿಕ ಸ್ವತಃ ಜೋಕೋವಿಚ್, ಆಲ್ಕರಜ್‌ರನ್ನು ಕೊಂಡಾಡಿದ್ದಲ್ಲದೇ, ಅವರೊಬ್ಬ ವಿಶೇಷ ಆಟಗಾರ ಎಂದು ಬಣ್ಣಿಸಿದರು. ‘ಕಳೆದೊಂದು ವರ್ಷದಿಂದ ಹಲವರು ಆಲ್ಕರಜ್ ಆಟವು ರೋಜರ್, ರಾಫಾ ಹಾಗೂ ನನ್ನ ಆಟಗಳ ಗುಣಗಳನ್ನು ಹೊಂದಿದೆ ಎಂದು ವಿಶ್ಲೇಷಿಸಿದ್ದಾರೆ. ಅದನ್ನು ನಾನು ಒಪ್ಪುತ್ತೇನೆ. 20ನೇ ವಯಸ್ಸಿಗೇ ಅವರ ಮಾನಸಿಕ ಸ್ಥಿತಿಸ್ಥಾಪಕತ್ವ, ಪ್ರಬುದ್ಧತೆ ಎಲ್ಲರನ್ನೂ ಮರುಳಾಗಿಸಿದೆ. ಅವರೊಬ್ಬ ಸ್ಪೇನ್‌ನ ಗೂಳಿ ಇದ್ದಂತೆ. ಸ್ಪರ್ಧಾತ್ಮಕ ಮನೋಭಾವ ಹಾಗೂ ಹೋರಾಟದ ಕಿಚ್ಚು ಅವರನ್ನು ಸಣ್ಣ ವಯಸ್ಸಿಗೇ ಈ ಹಂತಕ್ಕೆ ತಂದು ನಿಲ್ಲಿಸಿದೆ. ನಡಾಲ್‌ರಂತೆಯೇ ಅತ್ಯುತ್ಕೃಷ್ಟ ರಕ್ಷಣಾತ್ಮಕ ಆಟ ಆಲ್ಕರಜ್‌ಗೂ ಒಲಿದಂತೆ ಕಾಣುತ್ತಿದೆ. ನನ್ನ ಪ್ರಮುಖ ಶಕ್ತಿ ಎನಿಸಿರುವ ಬ್ಯಾಕ್ ಹ್ಯಾಂಡ್, ಡಬಲ್ ಹ್ಯಾಂಡೆಡ್ ಬ್ಯಾಕ್ ಹ್ಯಾಂಡ್ ಶಾಟ್‌ಗಳನ್ನು ಆಲ್ಕರಜ್ ನನ್ನಷ್ಟೇ ಚೆನ್ನಾಗಿ ಆಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪರಿಸ್ಥಿತಿಗೆ ತಕ್ಕಂತೆ ಆಟದ ಶೈಲಿಯನ್ನು ಬದಲಿಸಿಕೊಳ್ಳುವ ಸಾಮರ್ಥ್ಯ ಈ ಹುಡುಗನಿಗೆ ಈಗಾಗಲೇ ಕರಗತಗೊಂಡಿರುವುದನ್ನು ನೋಡಿ ಮೂಕವಿಸ್ಮಿತನಾಗಿದ್ದೇನೆ’ ಎಂದು ಜೋಕೋವಿಚ್ ಕೊಂಡಾಡಿದ್ದಾರೆ.
ಡಬಲ್ಸ್: ರೋಹನ್ ಬೋಪಣ್ಣ ವಿಶ್ವ ನಂ.7
ಭಾರತದ ಹಿರಿಯ ಟೆನಿಸಿಗ, ಇತ್ತೀಚೆಗಷ್ಟೇ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಸೆಮಿಫೈನಲ್‌ಗೇರಿದ್ದ ಕರ್ನಾಟಕದ ರೋಹನ್ ಬೋಪಣ್ಣ ಎಟಿಪಿ ವಿಶ್ವ ಡಬಲ್ಸ್ ರ‍್ಯಾಂಕಿಂಗ್‌ನಲ್ಲಿ 7ನೇ ಸ್ಥಾನಕ್ಕೇರಿದ್ದಾರೆ. ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ 43 ವರ್ಷದ ಬೋಪಣ್ಣ 5 ಸ್ಥಾನ ಪ್ರಗತಿ ಸಾಧಿಸಿದ್ದಾರೆ. ಇದು ಕಳೆದ 10 ವರ್ಷದಲ್ಲಿ ಅವರ ಶ್ರೇಷ್ಠ ಸಾಧನೆ ಆಗಿದೆ. ಈ ಮೊದಲು 2013ರಲ್ಲಿ ಜೀವನಶ್ರೇಷ್ಠ 3ನೇ ಸ್ಥಾನಕ್ಕೇರಿದ್ದರು. ಸದ್ಯ ರ್‍ಯಾಂಕಿಂಗ್‌ನಲ್ಲಿ ಅಗ್ರ-100ರಲ್ಲಿರುವ ಆಟಗಾರರ ಪೈಕಿ ಬೋಪಣ್ಣ ಅತಿ ಹಿರಿಯ ಎನಿಸಿಕೊಂಡಿದ್ದಾರೆ.
ಮ್ಯಾರಥಾನ್ ಕಾಳಗ ಗೆದ್ದ ನವತಾರೆ ಆಲ್ಕರಜ್! ಕಾರ್ಲೊಸ್ ಆಟ ಸ್ಪೆಷಲ್ ಎನಿಸಿದ್ದೇಕೆ?
ಇಂದಿನಿಂದ ಕೊರಿಯಾ ಓಪನ್ ಬ್ಯಾಡ್ಮಿಂಟನ್
ಸೋಲ್(ಕೊರಿಯಾ): ಈ ವರ್ಷ ಚೊಚ್ಚಲ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿರುವ ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್ ಮಂಗಳವಾರದಿಂದ ಕೊರಿಯಾ ಓಪನ್ ಸೂಪರ್ 500 ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ಸಿಂಧು ಸ್ಪೇನ್ ಮಾಸ್ಟರ್ಸ್‌ನಲ್ಲಿ ಫೈನಲ್ ತಲುಪಿದ್ದು ಈ ವರ್ಷದ ಶ್ರೇಷ್ಠ ಸಾಧನೆ. ಮಾಜಿ ವಿಶ್ವ ನಂ.1 ಶ್ರೀಕಾಂತ್ ಈ ವರ್ಷ ಯಾವ ಟೂರ್ನಿಯಲ್ಲೂ ಫೈನಲ್‌ಗೇರಲು ಸಾಧ್ಯವಾಗಿಲ್ಲ. ಹೀಗಾಗಿ ಇಬ್ಬರ ಮೇಲೂ ಒತ್ತಡವಿದೆ. ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್, ಎಚ್.ಎಸ್.ಪ್ರಣಯ್, ಪ್ರಿಯಾನ್ಶು ರಾಜಾವತ್ ಕೂಡಾ ಸ್ಪರ್ಧೆಗಿಳಿಯಲಿದ್ದಾರೆ. ಯುವ ಪ್ರತಿಭೆಗಳಾದ ತಾನ್ಯಾ ಹೇಮಂತ್, ಅಶ್ಮಿತಾ, ಆಕರ್ಷಿ ಕಶ್ಯಪ್, ತಸ್ನೀಂ ಮೀರ್ ಮಹಿಳಾ ಸಿಂಗಲ್ಸ್‌ನಲ್ಲಿ ಆಡಲಿದ್ದಾರೆ. ವಿಶ್ವ ನಂ.3 ಪುರುಷ ಡಬಲ್ಸ್ ಜೋಡಿ ಸಾತ್ವಿಕ್-ಚಿರಾಗ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಅಶ್ವಿನಿ ಪೊನ್ನಪ್ಪ ಮಹಿಳಾ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.