ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಗೆ ಸಂಕಷ್ಟ ಎದುರಾಗಿದೆ. 2ನೇ ಅವದಿಗೆ ಕೋಚ್ ಆಗಿರುವ ರವಿ ಶಾಸ್ತ್ರಿ ಮೊದಲ ಸರಣಿ ಇನ್ನೂ ಮುಕ್ತಾಯವಾಗಿಲ್ಲ. ಅಷ್ಟರಲ್ಲೇ ಕೋಚ್ ಹುದ್ದೆ ಅಲುಗಾಡತೊಡಗಿದೆ. ಇದೀಗ ಬಿಸಿಸಿಐ ಹೊಸದಾಗಿ ಕೋಚ್ ಆಯ್ಕೆ ನಡೆಸುವ ಸಾಧ್ಯತೆ ಇದೆ.
ಮುಂಬೈ(ಸೆ.29): ಟೀಂ ಇಂಡಿಯಾ ಕೋಚ್ ಆಗಿ ರವಿ ಶಾಸ್ತ್ರಿ ಮರು ಆಯ್ಕೆಯಾದ ಬಳಿಕ ನಡೆಯುತ್ತಿರವ ಮೊದಲ ಟೂರ್ನಿಯಲ್ಲಿ ಟೀಂ ಇಂಡಿಯಾ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಸೌತ್ ಆಫ್ರಿಕಾ ವಿರುದ್ದದ ಸರಣಿ ರವಿ ಶಾಸ್ತ್ರಿಯ 2ನೇ ಅವಧಿಯ ಮೊದಲ ಅಗ್ನಿಪರೀಕ್ಷೆ. ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 1-1 ಅಂತರದಿಂದ ಸಮಬಲ ಮಾಡಿಕೊಂಡಿದೆ. ಇದೀಗ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಇದರ ಬೆನ್ನಲ್ಲೇ ರವಿ ಶಾಸ್ತ್ರಿ ಕೋಚ್ ಹುದ್ದೆಯೇ ಅಲುಗಾಡುತ್ತಿದೆ.
ಇದನ್ನೂ ಓದಿ: ರವಿ ಶಾಸ್ತ್ರಿ ಪುನರ್ ಆಯ್ಕೆ; ರೋಸಿ ಹೋದ ಅಭಿಮಾನಿಗಳಿಂದ ಟ್ವೀಟ್!
ಟೀಂ ಇಂಡಿಯಾ ಕೋಚ್ ಆಯ್ಕೆ ಮತ್ತೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಕಾರಣ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಗೆ ನೀಡಿರುವ ಸ್ವಹಿತಾಸಕ್ತಿ ನೊಟೀಸ್. ಬಿಸಿಸಿಐ ಸಲಹಾ ಸಮಿತಿ ಸದಸ್ಯರಾಗಿರುವ ಕಪಿಲ್ ದೇವ್, ಶಾಂತಾ ರಂಗಸ್ವಾಮಿ ಹಾಗೂ ಅಂಶುಮಾನ್ ಗಾಯಕ್ವಾಡ್‌ಗೆ ಬಿಸಿಸಿಐ ಸ್ವಹಿತಾಸಕ್ತಿ ಅಡಿಯಲ್ಲಿ ನೊಟೀಸ್ ನೀಡಿದೆ. ಸ್ವಹಿತಾಸಕ್ತಿ ಸಂಘರ್ಷ ಸಾಬೀತಾದರೆ ಕ್ರಿಕೆಟ್ ಸಲಹಾ ಸಮಿತಿಗೆ ಹೊಸ ಮುಖ್ಯಸ್ಥ ಹಾಗೂ ಸದಸ್ಯರನ್ನು ಬಿಸಿಸಿಐ ಆಯ್ಕೆ ಮಾಡಲಾಗಿದೆ. ಹೀಗಾದಲ್ಲಿ ಕಪಿಲ್ ನೇತೃತ್ವದ ಸಲಹಾ ಸಮಿತಿ ಆಯ್ಕೆ ಮಾಡಿದ ಟೀಂ ಇಂಡಿಯಾ ಕೋಚ್ ಆಯ್ಕೆ ಅಸಿಂಧುವಾಗಲಿದೆ.
ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ಶಾಸ್ತ್ರಿ ಸ್ಯಾಲರಿ ; ಬೆಚ್ಚಿ ಬೀಳಬೇಡಿ ಸ್ಲಿಪ್ ನೋಡಿ!
ಹೊಸ ಸಲಹಾ ಸಮಿತಿಯಿಂದ ಟೀಂ ಇಂಡಿಯಾ ಕೋಚ್ ಆಯ್ಕೆ ನಡೆಯಲಿದೆ. ಟೀಂ ಇಂಡಿಯಾ ಕೋಚ್ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಮತ್ತೆ ನಡೆಯಬೇಕಿದೆ. ಆದರೆ ಈಗಾಗಲೇ ರವಿ ಶಾಸ್ತ್ರಿ ಜೊತೆ ಬಿಸಿಸಿಐ ಒಪ್ಪಂದ ಮಾಡಿಕೊಂಡಿರುವ ಕಾರಣ ಹೊಸ ಸಲಹಾ ಸಮಿತಿ ರವಿ ಶಾಸ್ತ್ರಿಯನ್ನೇ ಟೀಂ ಇಂಡಿಯಾ ಕೋಚ್ ಆಗಿ ಮರು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.