ಬ್ರಿಜ್‌ಭೂಷಣ್ ಸಿಂಗ್ ಮೇಲಿನ ಪೋಕ್ಸೋ ಕೇಸ್ ರದ್ದಿಗೆ ಡೆಲ್ಲಿ ಪೊಲೀಸರ ಶಿಫಾರಸು
ಬ್ರಿಜ್ ಬಂಧಿಸಿದ್ದರೆ ಅಪ್ರಾಪ್ತೆ ಹೇಳಿಕೆ ಬದಲಿಸುತ್ತಿರಲಿಲ್ಲ: ಸಾಕ್ಷಿ
ಹೋರಾಟದ ಬಗ್ಗೆ ಕಾದು ನೋಡುವ ತಂತ್ರ
ನವದೆಹಲಿ(ಜೂ.17): ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್ಐ)ದ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದರೂ, ಅಪ್ರಾಪ್ತೆಯ ಮೇಲೆ ಕಿರುಕುಳವಾದ ಬಗ್ಗೆ ಸಮರ್ಥನೀಯ ಸಾಕ್ಷಿಗಳು ಲಭ್ಯವಾಗಿಲ್ಲ ಎನ್ನುವ ಕಾರಣ ನೀಡಿ ಪೋಕ್ಸೋ ಕೇಸ್ ರದ್ದುಗೊಳಿಸಲು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಶಿಫಾರಸು ಮಾಡಿರುವುದಕ್ಕೆ ಕುಸ್ತಿಪಟು ಸಾಕ್ಷಿ ಮಲಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಸ್ತಿಪಟುಗಳು ಈಗಾಗಲೇ ಬ್ರಿಜ್ ವಿರುದ್ಧ ಎಫ್ಐಆರ್ ದಾಖಲಿಸಲು ವಿಳಂಬ, ಪೊಲೀಸರ ತನಿಖಾ ಪ್ರಕ್ರಿಯೆ ಹಾಗೂ ಅದರಲ್ಲಿ ಬ್ರಿಜ್‌ಭೂಷಣ್ ಸಿಂಗ್ ಪ್ರಭಾವ ಬೀರುತ್ತಿರುವ ಬಗ್ಗೆ ಹಲವು ಬಾರಿ ಬೇಸರ ಹೊರಹಾಕಿದ್ದರು. ಚಾರ್ಜ್‌ಶೀಟ್ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಸಾಕ್ಷಿ, ‘ಬ್ರಿಜ್‌ಭೂಷಣ್ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಪೂರಕ ಸಾಕ್ಷ್ಯಾಧಾರ ಇಲ್ಲ ಎಂದು ಪೋಕ್ಸೋ ಕೇಸ್ ಬಿಡಲು ಶಿಫಾರಸು ಮಾಡಿದ್ದಾರೆ. ಅಪ್ರಾಪ್ತೆಯ ತಂದೆಗೆ ಒತ್ತಡ ಇದ್ದಿದ್ದರಿಂದಲೇ ಅವರು ತಮ್ಮ ಹೇಳಿಕೆ ಬದಲಿಸಿದ್ದಾರೆ. ಅವರ ಕುಟುಂಬಕ್ಕೆ ತುಂಬಾ ಒತ್ತಡವಿತ್ತು. ಬ್ರಿಜ್‌ಭೂಷಣ್‌ರನ್ನು ಮೊದಲೇ ಬಂಧಿಸಿದ್ದರೆ ಅಪ್ರಾಪ್ತ ಕುಸ್ತಿಪಟು ಹೇಳಿಕೆ ಬದಲಿಸುತ್ತಿರಲಿಲ್ಲ. ಜೊತೆಗೆ ಬ್ರಿಜ್ರಿಂದ ಕಿರುಕುಳಕ್ಕೆ ಒಳಗಾಗಿರುವ ಇನ್ನಷ್ಟು ಕುಸ್ತಿಪಟುಗಳು ದೂರು ನೀಡಲು ಮುಂದೆ ಬರುತ್ತಿದ್ದರು’ ಎಂದಿದ್ದಾರೆ.
undefined
ಅಪ್ರಾಪ್ತೆ ಸೇರಿದಂತೆ 7 ಮಂದಿ ಕುಸ್ತಿಪಟುಗಳು ನೀಡಿದ್ದ ದೂರಿನ ಆಧಾರದ ಮೇಲೆ ಬ್ರಿಜ್ ವಿರುದ್ಧ ಏಪ್ರಿಲ್ ಕೊನೆಯಲ್ಲಿ ದೆಹಲಿ ಪೊಲೀಸರು 2 ಎಫ್ಐಆರ್ ದಾಖಲಿಸಿದ್ದರು. ಸುಮಾರು ಒಂದೂವರೆ ತಿಂಗಳ ತನಿಖೆ ಬಳಿಕ ಗುರುವಾರ ನ್ಯಾಯಾಲಯಕ್ಕೆ 1000 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಚಾರ್ಜ್‌ಶೀಟ್ ಪರಿಗಣಿಸುವ ಬಗ್ಗೆ ಜೂ.22ರಂದು ಮ್ಯಾಜಿಸ್ಪ್ರೇಟ್ ಕೋರ್ಚ್‌ನಲ್ಲಿ ವಿಚಾರಣೆ ನಡೆಯಲಿದೆ.
ಚಾರ್ಜ್‌ಶೀಟ್ ನೋಡಿ ಮುಂದಿನ ಕ್ರಮ: ಸಾಕ್ಷಿ
ಇನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ತಮ್ಮ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿರುವ ಸಾಕ್ಷಿ, ಚಾರ್ಜ್‌ಶೀಟ್‌ನಲ್ಲಿರುವ ಅಂಶಗಳನ್ನು ಅಧ್ಯಯನ ನಡೆಸಿದ ಬಳಿಕ ತಮ್ಮ ಕಾನೂನು ತಂಡದ ಸಲಹೆಯಂತೆ ಮುಂದಿನ ನಡೆ ಏನು ಎಂಬುದನ್ನು ನಿರ್ಧರಿಸುವುದಾಗಿ ತಿಳಿಸಿದ್ದಾರೆ.
ಬ್ರಿಜ್ ವಿರುದ್ಧ ಜಾರ್ಜ್ಶೀಟ್: 6 ಮಂದಿ ಮೇಲೆ ಲೈಂಗಿಕ ಕಿರುಕುಳ ತನಿಖೆಯಿಂದ ಸಾಬೀತು..!
‘ಚಾರ್ಜ್‌ಶೀಟ್‌ನಲ್ಲಿ ಬ್ರಿಜ್ ತಪ್ಪಿತಸ್ಥ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸದ್ಯ ನಮ್ಮ ವಕೀಲರು ಚಾರ್ಜ್‌ಶೀಟ್ ಪ್ರತಿಗೆ ಅರ್ಜಿ ಹಾಕಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಏನಿದೆ, ನಾವು ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಗೆಲ್ಲುವ ಸಾಧ್ಯತೆ ಇದೆಯೇ ಎಂಬುದನ್ನು ಅಧ್ಯಯನ ನಡೆಸುತ್ತೇವೆ. ನಮ್ಮ ಬೇಡಿಕೆ ಈಡೇರಿಸಿರುವ ಬಗ್ಗೆಯೂ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದಿದ್ದಾರೆ.
ಏಷ್ಯಾಡ್: ಗಡುವು ವಿಸ್ತರಣೆಗೆ ಮನವಿ
ಏಷ್ಯನ್ ಗೇಮ್ಸ್‌ನ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಸಿದ್ಧತೆಗಾಗಿ ಒಂದೂವರೆ ತಿಂಗಳು ಸಮಯಾವಕಾಶ ಬೇಕು ಎಂದು ಕುಸ್ತಿಪಟುಗಳು ಕೋರಿದ್ದರಿಂದ ಕೂಟಕ್ಕೆ ಹೆಸರು ಸಲ್ಲಿಸುವ ಅಂತಿಮ ದಿನಾಂಕವನ್ನು ವಿಸ್ತರಿಸಲು ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ), ಏಷ್ಯಾ ಒಲಿಂಪಿಕ್ ಕೌನ್ಸಿಲ್(ಒಸಿಎ)ಗೆ ಮನವಿ ಮಾಡಿದೆ. ನಿಯಮದ ಪ್ರಕಾರ ಆಯ್ಕೆ ಟ್ರಯಲ್ಸ್ ಈ ತಿಂಗಳಲ್ಲೇ ನಡೆದು, ಜು.15ರೊಳಗೆ ಸ್ಪರ್ಧಿಗಳ ಹೆಸರನ್ನು ಒಸಿಎಗೆ ಸಲ್ಲಿಸಬೇಕಿದೆ.