ಕುಸ್ತಿಪಟುಗಳ ಪರ ಬ್ಯಾಟ್ ಬೀಸಿದ ಬಿಜೆಪಿ ಸಂಸದೆ
ಸರ್ಕಾರ ಈ ಬಗ್ಗೆ ಸೂಕ್ತ ಗಮನ ಹರಿಸಬೇಕು ಎಂದ ಮಹಾರಾಷ್ಟ್ರ ಮೂಲದ ಸಂಸದೆ
ಕಳೆದೊಂದು ತಿಂಗಳಿನಿಂದ ಬ್ರಿಜ್‌ಭೂಷಣ್ ವಿರುದ್ದ ಕುಸ್ತಿಪಟುಗಳ ಪ್ರತಿಭಟನೆ
ಮುಂಬೈ(ಜೂ.02): ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಮೇಲೆ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಎದುರಿಸಿದ ಬಗ್ಗೆ ಹೋರಾಟ ನಡೆಸುತ್ತಿದ್ದು, ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕುಸ್ತಿಪಟುಗಳು ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಇದೀಗ ಮಹಾರಾಷ್ಟ್ರ ಮೂಲದ ಬಿಜೆಪಿ ಸಂಸದೆ ಪ್ರತಿಮಾ ಮುಂಡೆ ತುಟಿಬಿಚ್ಚಿದ್ದು, ಯಾವುದೇ ಮಹಿಳೆಯು ನೀಡುವ ದೂರನ್ನು ನಿರ್ಲಕ್ಷ್ಯ ಮಾಡಬಾರದು ಎನ್ನುವ ಮೂಲಕ ಪರೋಕ್ಷವಾಗಿ ಕುಸ್ತಿಪಟುಗಳ ಪರ ಬ್ಯಾಟ್ ಬೀಸಿದ್ದಾರೆ.
ನಾನು, ಓರ್ವ ಪಾರ್ಲಿಮೆಂಟ್ ಸದಸ್ಯೆಯಾಗಿ ಹೇಳುತ್ತಿಲ್ಲ, ಆದರೆ ಓರ್ವ ಮಹಿಳೆಯಾಗಿ ಹೇಳುತ್ತಿದ್ದೇನೆ. ಈ ರೀತಿಯ ದೂರನ್ನು ಯಾವುದೇ ಮಹಿಳೆಯು ನೀಡಿದರೂ ಸಹ ಅದನ್ನು ಯಾವುದೇ ನಿರ್ಲಕ್ಷ್ಯ ಮಾಡದೇ ಸ್ವೀಕರಿಸಬೇಕು.ಇದಾದ ಬಳಿಕ ಅದರಲ್ಲಿ ಸತ್ಯಾಸತ್ಯತೆ ಎಷ್ಟಿದೆ ಎನ್ನುವುದನ್ನು ತನಿಖೆ ಮಾಡಬೇಕು ಎಂದು ಪ್ರತಿಮಾ ಮುಂಡೆ ಪ್ರತಿಕ್ರಿಯೆ ನೀಡಿರುವುದಾಗಿ ಪಿಟಿಐ ವರದಿ ಮಾಡಿದೆ.
ದೂರು ಸ್ವೀಕರಿಸಿದ ಬಳಿಕ ಬಳಿಕ ಸಂಬಂಧಪಟ್ಟ ಅಧಿಕಾರಿಗಳು, ದೂರು ಸಮಂಜಸವಾಗಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಪರಿಶೀಲಿಸಬೇಕು. ಅದನ್ನು ಬಿಟ್ಟು, ಮಹಿಳೆ ನೀಡುವ ದೂರನ್ನು ಸ್ವೀಕರಿಸದೇ ಹೋದರೆ, ಅದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾಗತಾರ್ಹವಲ್ಲ ಎಂದು ಪ್ರತಿಮಾ ಮುಂಡೆ ಅಭಿಪ್ರಾಯಪಟ್ಟಿದ್ದಾರೆ.
ನಾನು ಈ ಸರ್ಕಾರದ ಒಂದು ಭಾಗವಾಗಿದ್ದರೂ ಸಹಾ, ಕುಸ್ತಿಪಟುಗಳೊಂದಿಗೆ ಸರ್ಕಾರವು ಸಂವಹನ ನಡೆಸಬೇಕಾದ ರೀತಿಯಲ್ಲಿ ನಡೆದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕು ಎಂದು ಮುಂಡೆ ಹೇಳಿದ್ದಾರೆ. "ಬಿಜೆಪಿ ಪಾಲಿಗೆ ದೇಶ ಮೊದಲು, ಆಮೇಲೆ ಪಕ್ಷ ಹಾಗೂ ಕೊನೆಯದ್ದು ವೈಯುಕ್ತಿಕ ಹಿತಾಸಕ್ತಿ. ಪ್ರತಿಯೊಬ್ಬರ ಚಿಂತನೆಗಳು ಮುಖ್ಯವಾದವರು ಎನ್ನುವುದರ ಮೇಲೆ ನಾವು ನಂಬಿಕೆಯಿಟ್ಟಿದ್ದೇವೆ. ಈ ಮಟ್ಟದಲ್ಲಿ ದೊಡ್ಡ ಹೋರಾಟವೇ ನಡೆಯುತ್ತಿರುವಾಗ ಅದು ಯಾವುದೇ ರಾಜ್ಯದ ಯಾವುದೇ ಸರ್ಕಾರವಿದ್ದರೂ ಆ ಬಗ್ಗೆ ಗಮನ ಕೊಡಬೇಕು ಎಂದು ಪ್ರತಿಮಾ ಮುಂಡೆ ಹೇಳಿದ್ದಾರೆ.
ಡಬ್ಯುಎಫ್‌ಐಗೆ ವಿಶ್ವ ಕುಸ್ತಿ ಸಂಸ್ಥೆ ನಿಷೇಧ ಎಚ್ಚರಿಕೆ!
ನವದೆಹಲಿ: ಭಾರತೀಯ ಕುಸ್ತಿಗಳ ಮೇಲೆ ನಡೆದಿರುವ ದೌರ್ಜನ್ಯವನ್ನು ಖಂಡಿಸಿರುವ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್(ವಿಶ್ವ ಕುಸ್ತಿ ಫೆಡರೇಶನ್), ಈಗಾಗಲೇ ನಿಗದಿಯಾಗಿರುವ 45 ದಿನಗಳ ಒಳಗೆ ಹೊಸದಾಗಿ ಚುನಾವಣೆ ನಡೆಸದಿದ್ದರೆ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ)ಯನ್ನು ನಿಷೇಧಗೊಳಿಸುವುದಾಗಿ ಎಚ್ಚರಿಸಿದೆ.
‘ಭಾರತದಲ್ಲಿ ನಡೆಯುತ್ತಿರುವ ಘಟನೆಗಳನ್ನು ನಾವು ಗಮನಿಸುತ್ತಿದ್ದೇವೆ. ಕುಸ್ತಿಪಟುಗಳ ಆರೋಪದ ಬಳಿಕ ಅಧ್ಯಕ್ಷ ಹುದ್ದೆಯಿಂದ ಬ್ರಿಜ್‌ಭೂಷಣ್‌ರನ್ನು ದೂರವಿರಿಸಲಾಗಿದೆಯಾದರೂ, ಚುನಾವಣಾ ಪ್ರಕ್ರಿಯೆ ಆರಂಭಗೊಂಡಿಲ್ಲ. ಚುನಾವಣೆ ನಡೆಸದಿದ್ದರೆ ಡಬ್ಯುಎಫ್‌ಐ ಅನ್ನು ನಿಷೇಧಗೊಳಿಸಲಿದ್ದೇವೆ’ ಎಂದು ವಿಶ್ವ ಕುಸ್ತಿ ಫೆಡರೇಶನ್ ಎಚ್ಚರಿಸಿದೆ.