ಐ-ಲೀಗ್: ಏಳು ಪಂದ್ಯಗಳ ಬಳಿಕ ಗೆಲುವಿನ ಹಾದಿಗೆ ಮರಳಿದ ಬೆಂಗಳೂರು ಎಫ್'ಸಿ

By Suvarna Web DeskFirst Published Mar 5, 2017, 2:01 PM IST
Highlights

11 ಪಂದ್ಯಗಳಿಂದ 16 ಅಂಕ ಹೊಂದಿರುವ ಬೆಂಗಳೂರಿಗೆ ಇನ್ನು 5 ಪಂದ್ಯಗಳಷ್ಟೇ ಬಾಕಿವೆ. ಈ ಎಲ್ಲಾ ಪಂದ್ಯಗಳನ್ನು ಗೆದ್ದರೂ ಬೆಂಗಳೂರು ಅಗ್ರಸ್ಥಾನ ಗಳಿಸುವುದು ಕಷ್ಟಸಾಧ್ಯ.

ಲೂಧಿಯಾನ(ಮಾ. 05): ಸತತ ಏಳು ಪಂದ್ಯಗಳಿಂದ ಗೆಲುವಿಗಾಗಿ ಬರಗೆಟ್ಟಿದ್ದ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡ ಪ್ರಸಕ್ತ ಐ-ಲೀಗ್'ನಲ್ಲಿ ಕೊನೆಗೂ ಗೆಲುವಿನ ಹಾದಿಗೆ ಮರಳಿದೆ. ಇಲ್ಲಿಯ ಗುರು ನಾನಕ್ ಸ್ಟೇಡಿಯಂನಲ್ಲಿ ನಡೆದ ತನ್ನ 11ನೇ ಸುತ್ತಿನ ಪಂದ್ಯದಲ್ಲಿ ಬೆಂಗಳೂರು ಎಫ್'ಸಿ ತಂಡವು ಆತಿಥೇಯ ಮಿನರ್ವಾ ಪಂಜಾಬ್ ವಿರುದ್ಧ 1-0 ಗೋಲಿನಿಂದ ಪ್ರಯಾಸಕರ ಜಯ ಪಡೆಯಿತು. ಲೆನ್ನಿ ರಾಡ್ರಿಗ್ಸ್ 17ನೇ ನಿಮಿಷದಲ್ಲಿ ಗೋಲು ಗಳಿಸಿದ್ದು ಬಿಎಫ್'ಸಿಗೆ ಗೆಲುವಿನ ಗೋಲಾಯಿತು. ಆದರೆ, ಬಿಎಫ್'ಸಿ ಗೋಲು ಗಳಿಸುವ ಇನ್ನಷ್ಟು ಅವಕಾಶಗಳನ್ನು ಬಳಸಿಕೊಂಡಿದ್ದರೆ ಗೆಲುವಿನ ಅಂತರ ಹೆಚ್ಚಾಗುತ್ತಿತ್ತು.

ಹಾಲಿ ಐ-ಲೀಗ್ ಚಾಂಪಿಯನ್ಸ್ ಆಗಿರುವ ಬೆಂಗಳೂರು ಎಫ್'ಸಿ ಈ ಋತುವನ್ನು ಹ್ಯಾಟ್ರಿಕ್ ಗೆಲುವಿನೊಂದಿಗೆ ಆರಂಭಿಸಿತ್ತು. ಆನಂತರದ ಏಳು ಪಂದ್ಯಗಳಲ್ಲಿ ಬೆಂಗಳೂರಿಗರಿಗೆ ಒಂದೂ ಪಂದ್ಯ ಗೆಲ್ಲಲು ಸಾಧ್ಯವಾಗಿರಲಿಲ್ಲ. ನಾಲ್ಕು ಡ್ರಾ ಹಾಗೂ ಮೂರು ಸೋಲುಗಳು ಬಿಎಫ್'ಸಿಯನ್ನು ಕಂಗೆಡಿಸಿತ್ತು. ಇದೀಗ ಗೆಲುವಿನ ಟ್ರ್ಯಾಕ್'ಗೆ ಮರಳಿದರೂ ಬಿಎಫ್'ಸಿಯ ಚಾಂಪಿಯನ್ ಕನಸು ನೆರವೇರಲು ಸಾಧ್ಯವಿಲ್ಲದಂಥ ಸ್ಥಿತಿ ಇದೆ.

ಮಿನರ್ವ ಪಂಜಾಬ್ ವಿರುದ್ಧ ಗೆದ್ದ ನಂತರ ಬೆಂಗಳೂರಿಗರು ಅಂಕಟಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. 11 ಪಂದ್ಯಗಳಿಂದ 16 ಅಂಕ ಹೊಂದಿರುವ ಬೆಂಗಳೂರಿಗೆ ಇನ್ನು 5 ಪಂದ್ಯಗಳಷ್ಟೇ ಬಾಕಿವೆ. ಈ ಎಲ್ಲಾ ಪಂದ್ಯಗಳನ್ನು ಗೆದ್ದರೂ ಬೆಂಗಳೂರು ಅಗ್ರಸ್ಥಾನ ಗಳಿಸುವುದು ಕಷ್ಟಸಾಧ್ಯ. ಸದ್ಯ, ಮೋಹನ್ ಬಗಾನ್, ಈಸ್ಟ್ ಬೆಂಗಾಳ್ ಮತ್ತು ಐಜ್ವಾಲ್ ತಂಡಗಳು ಚಾಂಪಿಯನ್ ರೇಸ್'ನಲ್ಲಿವೆ.

click me!