
ಬೆಂಗಳೂರು(ಮಾ. 05): ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ಸುಲಭವಾಗಿ ಜಯಿಸಿದ್ದ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಪ್ರಾಬಲ್ಯ ಮುಂದುವರಿಸಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್'ನ ಎರಡನೇ ದಿನದಂದು ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸಲ್ಲಿ 6 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿದೆ. ಈ ಮೂಲಕ ಇನ್ನೂ 4 ವಿಕೆಟ್ ಕೈಲಿರುವಂತೆಯೇ 48 ರನ್'ಗಳ ಅತ್ಯಮೂಲ್ಯ ಮುನ್ನಡೆ ಪಡೆದುಕೊಂಡಿದೆ.
ನಿನ್ನೆಯ ದಿನಾಂತ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದ್ದ ಆಸ್ಟ್ರೇಲಿಯಾ ಇಂದು ನಿಜಕ್ಕೂ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ನೀಡಿತು. ಬ್ಯಾಟಿಂಗ್ ಮಾಡಲು ಕಷ್ಟಕರವಾದ ಪಿಚ್'ನಲ್ಲಿ ಕಾಂಗರೂ ಬ್ಯಾಟುಗಾರರು ತಾಳ್ಮೆಯ ಪ್ರದರ್ಶನ ತೋರಿದರು. ಮ್ಯಾಟ್ ರೇನ್ಶಾ, ಶಾನ್ ಮಾರ್ಷ್, ಮ್ಯಾಥ್ಯೂ ವೇಡ್ ಸೇರಿದಂತೆ ಬಹುತೇಕ ಎಲ್ಲಾ ಆಟಗಾರರ ಬ್ಯಾಟಿಂಗ್'ನಲ್ಲಿ ಪ್ರಬುದ್ಧತೆ ಮತ್ತು ಜವಾಬ್ದಾರಿತನ ಇತ್ತು.
ಭಾರತದ ಬೌಲರ್'ಗಳ ದುರದೃಷ್ಟಕ್ಕೆ, ಇಂದು ಅವರ ಬೌಲಿಂಗ್ ಕರಾರುವಾಕ್ಕಾಗಾಗಿದ್ದರೂ ಕಾಂಗರೂ ಬ್ಯಾಟುಗಾರರ ವೀರೋಚಿತ ಪ್ರದರ್ಶನದಿಂದ ಹೆಚ್ಚಿನ ಸಾಫಲ್ಯ ಸಿಗಲಿಲ್ಲ. ವೇಗದ ಬೌಲರ್'ಗಳಾದ ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ಸರಿಯಾದ ಲೈನ್ ಅಂಡ್ ಲೆಂತ್'ನಲ್ಲಿ ಬೌಲಿಂಗ್ ಮಾಡಿ ಎದುರಾಳಿಗಳನ್ನು ಕಂಗೆಡಿಸುವಲ್ಲಿ ಯಶಸ್ವಿಯಾದರು. ಆದರೆ, ಅದಕ್ಕೆ ತಕ್ಕಂತೆ ವಿಕೆಟ್ ಸಿಗಲಿಲ್ಲ. ಇನ್ನು, ಸ್ಪಿನ್ನರ್'ಗಳ ಪೈಕಿ ರವೀಂದ್ರ ಜಡೇಜಾ ಅತ್ಯಂತ ಯಶಸ್ವಿ ಬೌಲರ್ ಎನಿಸಿದರು. ಮೂರು ಪ್ರಮುಖ ವಿಕೆಟ್'ಗಳನ್ನುರುಳಿಸಿದ ಜಡೇಜಾಗೆ ಕೊಹ್ಲಿ ಹೆಚ್ಚಿನ ಓವರ್'ಗಳನ್ನು ನೀಡದೇ ಹೋಗಿದ್ದು ಅಚ್ಚರಿ ಮೂಡಿಸಿತು.
80ನೇ ಓವರ್'ನಲ್ಲಿ ಮಿಶೆಲ್ ಮಾರ್ಷ್ 5ನೇಯವರಾಗಿ ಔಟಾದಾಗ ಆಸೀಸ್ ಇನ್ನಿಂಗ್ಸ್ ಬೇಗನೇ ಮುಕ್ತಾಯವಾಬಹುದೆಂಬ ನಿರೀಕ್ಷೆ ಗರಿಗೆದರಿತ್ತು. ಆದರೆ, ಶಾನ್ ಮಾರ್ಷ್ ಮತ್ತು ಮ್ಯಾಥ್ಯೂ ವೇಡ್ ಭಾರತೀಯರ ಆಸೆಗೆ ತಣ್ಣೀರೆರಚಿದರು.
ಭಾರತ ಮೊದಲ ಇನ್ನಿಂಗ್ಸ್ 71.2 ಓವರ್ 189 ರನ್ ಆಲೌಟ್
(ಕೆಎಲ್ ರಾಹುಲ್ 90, ಕರುಣ್ ನಾಯರ್ 26, ಅಜಿಂಕ್ಯ ರಹಾನೆ 17, ಚೇತೇಶ್ವರ್ ಪೂಜಾರ 17 ರನ್ - ನೇಥನ್ ಲಯಾನ್ 50/8)
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 106 ಓವರ್ 237/6
(ಶಾನ್ ಮಾರ್ಷ್ 66, ಮ್ಯಾಟ್ ರೆನ್ಷಾ 60, ಡೇವಿಡ್ ವಾರ್ನರ್ 33, ಮ್ಯಾಥ್ಯೂ ವೇಡ್ ಅಜೇಯ 25, ಪೀಟರ್ ಹ್ಯಾಂಡ್ಸ್'ಕೂಂಬ್ 16, ಮಿಶೆಲ್ ಸ್ಟಾರ್ಕ್ ಅಜೇಯ 14 ರನ್ - ರವೀಂದ್ರ ಜಡೇಜಾ 49/3)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.