
ಬೆಂಗಳೂರು: ಮತ್ತೊಮ್ಮೆ ತವರಿನ ಅಂಗಣದಲ್ಲಿ ಉತ್ತಮ ಪ್ರದರ್ಶನ ನೀಡಿದ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್‌ಸಿ), ಪ್ರವಾಸಿ ಮುಂಬೈ ಎಫ್‌ಸಿ ವಿರುದ್ಧ 3-0 ಗೋಲುಗಳ ಗೆಲುವಿನೊಂದಿಗೆ ಈ ಋುತುವಿನ ಐ-ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಜಯಭೇರಿ ಬಾರಿಸಿತು.
ಕೇರಳ ಮೂಲದ ಮಿಡ್‌ಫೀಲ್ಡರ್ ಸಿ.ಕೆ. ವಿನೀತ್ ದಾಖಲಿಸಿದ ಹ್ಯಾಟ್ರಿಕ್ ಗೋಲುಗಳಿಂದ ಬಿಎಫ್‌ಸಿ, ಮೊದಲ ಹಂತದ ತನ್ನ ತವರಿನ ಅಭಿಯಾನವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿತು. ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ತಂಡದ ಪರ ಮೂರು ಗೋಲುಗಳನ್ನು ದಾಖಲಿಸಿದ ವಿನೀತ್ ವಿಜೇತ ತಂಡದ ಹೀರೋ ಎನಿಸಿದರು. ಪಂದ್ಯದ 45+, 57 ಹಾಗೂ 65ನೇ ನಿಮಿಷದಲ್ಲಿ ಗೋಲು ಹೊಡೆದ ವಿನೀತ್ ಆರ್ಭಟದೆದುರು ಮುಂಬೈ ಆಟಗಾರರು ಪ್ರತಿ ಹೇಳಲಾಗದೆ ಮಂಕಾದರು.
ಕಿಕ್ಕಿರಿದು ಜಮಾಯಿಸಿದ್ದ ಕ್ರೀಡಾಂಗಣದಲ್ಲಿ ಬಿಎಫ್‌ಸಿ, ಬಿಎಫ್‌ಸಿ ಎಂಬ ಉದ್ಗಾರದಿಂದ ಸ್ಫೂರ್ತಿ ಪಡೆದ ಸುನೀಲ್ ಛೆಟ್ರಿ ಪಡೆ, ಅತ್ಯದ್ಭುತ ಪ್ರದರ್ಶನ ನೀಡಿತು. ಆದಾಗ್ಯೂ ಪಂದ್ಯದ ಪ್ರಥಮಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ, ಒಂದು ನಿಮಿಷದ ಹೆಚ್ಚುವರಿ ಸಮಯದಲ್ಲಿ ವಾಟ್ಸನ್ ತಿರುವಿನಲ್ಲಿ ಪಾಸ್ ಮಾಡಿದ ಚೆಂಡು ನೇರವಾಗಿ ವಿನೀತ್ ತಡಮಾಡದೆ ಚೆಂಡನ್ನು ಗೋಲುಪೆಟ್ಟಿಗೆಗೆ ನುಸುಳಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಎರಡನೇ ಗೋಲನ್ನು ದಾಖಲಿಸಿ ದರು. ಇನ್ನು ದ್ವಿತೀಯಾರ್ಧದಲ್ಲಂತೂ ಮುಂಬೈ ವಿರುದ್ಧ ಇನ್ನಷ್ಟು ಆಕ್ರಮಣಕಾರಿ ಆಟವಾಡಿದ ವಿನೀತ್ ಮತ್ತೆರಡು ಗೋಲು ಬಾರಿಸಿದರು. ಖಾಬ್ರಾ ಪಾಸ್ ಮಾಡಿದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ವಿನೀತ್, ಎಡಬದಿಯಿಂದ ಗೋಲುಪೆಟ್ಟಿಗೆಗೆ ಸೇರಿಸಿದ ಚೆಂಡನ್ನು ತಡೆಯಲು ಮುಂಬೈ ಗೋಲಿ ವಿಫಲವಾದರು.
ಬೆಂಗಳೂರು ಫುಟ್ಬಾಲ್ ಕ್ಲಬ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂಡದ ಆಟಗಾರರೊಬ್ಬರು ಹ್ಯಾಟ್ರಿಕ್ ಗಳಿಸಿದ್ದು. ಇನ್ನು, ವಿನೀತ್'ಗೆ ಇದು ಎರಡನೇ ಹ್ಯಾಟ್ರಿಕ್ ಆಗಿದೆ. ಎರಡು ಹ್ಯಾಟ್ರಿಕ್ ಗಳಿಸಿರುವ ಎರಡನೇ ಭಾರತೀಯನೆನಿಸಿದ್ದಾರೆ.
ಇದೇ ವೇಳೆ, ಸತತ ಮೂರು ಗೆಲುವು ಪಡೆದಿರುವ ಬಿಎಫ್'ಸಿ ಐ-ಲೀಗ್'ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಮೋಹನ್ ಬಗಾನ್ ಕೂಡ ಸತತ ಮೂರು ಗೆಲುವು ಪಡೆದು ಸಮಾನ ಅಂಕ ಪಡೆದಿದೆಯಾದರೂ ಹೆಚ್ಚು ಗೋಲು ಗಳಿಸಿದ ಆಧಾರದಲ್ಲಿ ಬಿಎಫ್'ಸಿ ಮೊದಲ ಸ್ಥಾನದಲ್ಲಿದೆ.
ಭಾನುವಾರ ಬೆಂಗಳೂರಿಗರು ಕೋಲ್ಕತಾದಲ್ಲಿ ಪ್ರಬಲ ಈಸ್ಟ್ ಬೆಂಗಾಳ್ ತಂಡವನ್ನು ಎದುರಿಸಲಿದ್ದಾರೆ. ಮೊದಲ ಮೂರು ಪಂದ್ಯಗಳನ್ನು ತವರಿನಲ್ಲಿ ಆಡಿ ಗೆಲುವಿನ ಕೇಕೆ ಹಾಕಿದ್ದ ಸುನೀಲ್ ಛೇಟ್ರಿ ಪಡೆಗೆ ಕೋಲ್ಕತಾದ ಬರಾಸಾತ್'ನಲ್ಲಿ ನಡೆಯಲಿರುವ ಪಂದ್ಯ ಅಗ್ನಿಪರೀಕ್ಷೆ ಎನಿಸಲಿದೆ.
(epaper.kannadaprabha.in)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.