ಬೆಂಗಳೂರು ಚಾಂಪಿಯನ್ಸ್ ತಂಡಗಳಿಗೆ ಕ್ರೀಡಾಂಗಣ ಸಮಸ್ಯೆ

By Web Desk  |  First Published Mar 19, 2019, 12:33 PM IST

ಕಬಡ್ಡಿ, ಬ್ಯಾಡ್ಮಿಂಟನ್ ಬಳಿಕ ಇದೀಗ ಫುಟ್ಬಾಲ್’ನಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿರುವ ಬೆಂಗಳೂರು ತಂಡಗಳಿಗೆ ಸ್ವಂತ ತವರಿಲ್ಲದೇ ಅತಂತ್ರವಾಗಿವೆ. ಈ ಕುರಿತಂತೆ ಸುವರ್ಣನ್ಯೂಸ್ ಸಹೋದರ ಸಂಸ್ಥೆ ’ಕನ್ನಡಪ್ರಭ’ ಬೆಳಕು ಚೆಲ್ಲುವ ವರದಿ ಇಲ್ಲಿದೆ ನೋಡಿ..  


ಬೆಂಗಳೂರು[ಮಾ.19]: ಭಾರತೀಯ ಕ್ರೀಡೆಯಲ್ಲೀಗ ಬೆಂಗಳೂರು ತಂಡಗಳದ್ದೇ ಮೇಲುಗೈ. ಪ್ರತಿಷ್ಠಿತ ಲೀಗ್‌ಗಳಲ್ಲಿ ಬೆಂಗಳೂರಿನ ಒಂದೊಂದೇ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮುತ್ತಿದೆ. ಮೊದಲು ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ ತನ್ನ ಚೊಚ್ಚಲ ಟ್ರೋಫಿ ಎತ್ತಿಹಿಡಿದರೆ, ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲಿ ಬೆಂಗಳೂರು ರಾರ‍ಯಪ್ಟ​ರ್ಸ್ ತಂಡ ಟ್ರೋಫಿ ಗೆದ್ದಿತ್ತು. ಮೊನ್ನೆಯಷ್ಟೇ ಬೆಂಗಳೂರು ಎಫ್‌ಸಿ, ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಪ್ರಶಸ್ತಿಯನ್ನು ಮೊದಲ ಬಾರಿಗೆ ಎತ್ತಿಹಿಡಿದು ಇತಿಹಾಸ ಬರೆಯಿತು. ಒಂದೆಡೆ ಬೆಂಗಳೂರು ತಂಡಗಳು ಪ್ರಶಸ್ತಿ ಬೇಟೆಯಲ್ಲಿ ಯಶಸ್ವಿಯಾಗುತ್ತಿದ್ದರೆ, ಮತ್ತೊಂದೆಡೆ ಚಾಂಪಿಯನ್‌ ತಂಡಗಳಿಗೆ ತವರಿನಲ್ಲಿ ನೆಲೆ ಇಲ್ಲದಂತಾಗುತ್ತಿದೆ.

ಪ್ರೊ ಕಬಡ್ಡಿ ಬೆಂಗಳೂರಿನಿಂದ ಎತ್ತಂಗಡಿಯಾಗಿ ಎರಡು ವರ್ಷವೇ ಕಳೆದಿದೆ. 5ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ ತನ್ನ ತವರಿನ ಚರಣದ ಪಂದ್ಯಗಳನ್ನು ನಾಗ್ಪುರದಲ್ಲಿ ಆಡಿತ್ತು. 6ನೇ ಆವೃತ್ತಿಯಲ್ಲಿ ಪುಣೆಗೆ ಸ್ಥಳಾಂತರಗೊಂಡಿತ್ತು. ಇದೀಗ ಬೆಂಗಳೂರು ಎಫ್‌ಸಿ ತಂಡವೂ ತನ್ನ ತವರು ಮೈದಾನ ಕಂಠೀರವವನ್ನು ಕಳೆದುಕೊಳ್ಳುವ ಆತಂಕಕ್ಕೀಡಾಗಿದೆ.

Tap to resize

Latest Videos

undefined

ರಾಜ್ಯ ಕ್ರೀಡಾ ಇಲಾಖೆಯೊಂದಿಗೆ ಬಿಎಫ್‌ಸಿ ತಂಡ ಮಾಡಿಕೊಂಡಿದ್ದ ಒಪ್ಪಂದ 2017ರಲ್ಲೇ ಮುಕ್ತಾಯಗೊಂಡಿತ್ತು. ಆ ಬಳಿಕ ತಂಡ ಕ್ರೀಡಾಂಗಣವನ್ನು ಬಾಡಿಗೆಗೆ ಪಡೆದು ಪಂದ್ಯಗಳನ್ನು ಆಯೋಜಿಸುತಿತ್ತು. ಪ್ರತಿ ಪಂದ್ಯಕ್ಕೆ ಬಿಎಫ್‌ಸಿ ಮಾಲೀಕರು 2.5 ಲಕ್ಷ ರುಪಾಯಿ ಬಾಡಿಗೆ ಪಾವತಿಸುತ್ತಿದ್ದರು ಎನ್ನಲಾಗಿದೆ. ಮಾ.11ರಂದು ಕಂಠೀರವ ಕ್ರೀಡಾಂಗಣದಲ್ಲಿ ಈ ಆವೃತ್ತಿಯ ಕೊನೆ ಪಂದ್ಯವನ್ನಾಡಿದ ಬಿಎಫ್‌ಸಿ, ಇನ್ಮುಂದೆ ಕ್ರೀಡಾಂಗಣದ ಬಳಕೆ ಮಾಡಲು ಅವಕಾಶವಿದೆಯೇ ಎನ್ನುವ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ಕರ್ನಾಟಕ ಅಥ್ಲೆಟಿಕ್ಸ್‌ ಸಂಸ್ಥೆ, ಕಂಠೀರವವನ್ನು ಬಿಎಫ್‌ಸಿ ತಂಡ ಬಳಕೆ ಮಾಡುವುದರಿಂದ ತನ್ನ ಅಥ್ಲೀಟ್‌ಗಳಿಗೆ ತೊಂದರೆಯಾಗುತ್ತಿದೆ ಎಂದು ಹಿಂದಿನಿಂದಲೂ ದೂರುತ್ತಾ ಬಂದಿದೆ. ಜತೆಗೆ ಬಿಎಫ್‌ಸಿಗೆ ಕ್ರೀಡಾಂಗಣವನ್ನು ನೀಡಬಾರದು ಎನ್ನುವ ತನ್ನ ಹೋರಾಟವನ್ನು ಮುಂದುವರಿಸಿದೆ.

ಕಪ್ ನಮ್ದೆ: ಗೋವಾ ಮಣಿಸಿ ISL ಪ್ರಶಸ್ತಿ ಗೆದ್ದ ಬೆಂಗಳೂರು FC!

ಬಿಎಫ್‌ಸಿ ತಂಡದ ಮಾಲೀಕತ್ವ ಹೊಂದಿರುವ ಜೆಎಸ್‌ಡಬ್ಲ್ಯು ಸಂಸ್ಥೆಯೊಂದಿಗೆ ಒಪ್ಪಂದ ನವೀಕರಿಸುವ, ಬಿಎಫ್‌ಸಿ ಪಂದ್ಯಗಳಿಗೆ ಕ್ರೀಡಾಂಗಣವನ್ನು ನೀಡುವ ಕುರಿತು ಕ್ರೀಡಾ ಸಚಿವಾಲಯ ಮಾ.15ರಂದು ಸಭೆ ಕರೆದಿತ್ತು. ಆದರೆ ಸಭೆ ಇನ್ನೂ ನಡೆದಿಲ್ಲ. ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಸಭೆ ಮಾ.15ಕ್ಕೆ ನಿಗದಿಯಾಗಿತ್ತು. ಆದರೆ ಚುನಾವಣಾ ದಿನಾಂಕ ಪ್ರಕಟಗೊಂಡ ಕಾರಣ, ಸಚಿವರಿಗೆ ಸಭೆ ನಡೆಸಲು ಬಿಡುವಿಲ್ಲ. ಈ ವರ್ಷದ ಪಂದ್ಯಗಳು ಮುಕ್ತಾಯಗೊಂಡಿದೆ ಅಲ್ವಾ. ಬಿಎಫ್‌ಸಿಗೆ ಕ್ರೀಡಾಂಗಣ ನೀಡಬೇಕೋ ಬೇಡವೋ ಎನ್ನುವುದನ್ನು ಸಚಿವಾಲಯ ನಿರ್ಧರಿಸಲಿದೆ’ ಎಂದರು.

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಚಾಂಪಿಯನ್

ಕರ್ನಾಟಕ ಅಥ್ಲೆಟಿಕ್ಸ್‌ ಸಂಸ್ಥೆಯ ಸಿಇಒ ಎಲ್ವಿಸ್‌ ಜೋಸೆಫ್‌ರನ್ನು ‘ಕನ್ನಡಪ್ರಭ’ ಸಂಪರ್ಕಿಸಿದಾಗ, ‘ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೀಟ್‌ಗಳ ಅಭ್ಯಾಸಕ್ಕೆ ಯಾವುದೇ ತೊಂದರೆಯಾಗಲು ಬಿಡುವುದಿಲ್ಲ. ಫುಟ್ಬಾಲ್‌ ತಂಡಕ್ಕೆ ಅನುಮತಿ ನೀಡಬಾರದು ಎನ್ನುವ ನಮ್ಮ ಹೋರಾಟ ಮುಂದುವರಿಯಲಿದೆ. ಖಾಸಗೀಕರಣದಿಂದ ಯಾವುದೇ ಲಾಭವಾಗಿಲ್ಲ. ಬೆಂಗಳೂರು ತಂಡದಲ್ಲಿ ಒಬ್ಬನೇ ಒಬ್ಬ ಕರ್ನಾಟಕದ ಆಟಗಾರನಿಗೂ ಅವಕಾಶ ನೀಡಿಲ್ಲ. ನಾವ್ಯಾಕೆ ಅವರಿಗೆ ಬೆಂಬಲ ನೀಡಬೇಕು’ ಎಂದರು.

ಬೆಂಗಳೂರು ರ‍್ಯಾಪ್ಟರ್ಸ್ PBL ಚಾಂಪಿಯನ್

ಇದೇ ವೇಳೆ ಬಿಎಫ್‌ಸಿ ಮಾಲೀಕರು, ಕರ್ನಾಟಕದ ಅಥ್ಲೀಟ್‌ಗಳಿಗೆ ಎಲ್ಲಾ ರೀತಿಯಲ್ಲೂ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಕಂಠೀರವದಲ್ಲಿ ಹೊಸದಾಗಿ 200 ಮೀ. ಟ್ರ್ಯಾಕ್‌ ನಿರ್ಮಿಸಿಕೊಡುವ, ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಪ್ರಸ್ತಾಪವನ್ನೂ ಇರಿಸಲಾಗಿದೆ. ಆದರೆ ಅಥ್ಲೆಟಿಕ್‌ ಸಂಸ್ಥೆ ಯಾವುದನ್ನೂ ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಸರ್ಕಾರ, ಕ್ರೀಡಾ ಇಲಾಖೆ, ಅಧಿಕಾರಿಗಳು ಹಾಗೂ ತಂಡಗಳ ಮಾಲೀಕರ ನಡುವಿನ ತಿಕ್ಕಾಟದಿಂದಾಗಿ ಬೆಂಗಳೂರು ಹಾಗೂ ಕರ್ನಾಟಕದ ಅಭಿಮಾನಿಗಳು ರೋಚಕ ಕ್ರೀಡಾನುಭವದಿಂದ ವಂಚಿತರಾಗುತ್ತಿದ್ದಾರೆ.

ಸಮಸ್ಯೆಗೆ ಕಾರಣವೇನು?

ಕಬಡ್ಡಿ ಪಂದ್ಯಗಳು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿತ್ತು. ಆದರೆ ಅಲ್ಲೀಗ ಅಂತಾರಾಷ್ಟ್ರೀಯ ಗುಣಮಟ್ಟದ ಬಾಸ್ಕೆಟ್‌ಬಾಲ್‌ ಕೋರ್ಟ್‌ ನಿರ್ಮಿಸಲಾಗಿದೆ. ಬಾಸ್ಕೆಟ್‌ಬಾಲ್‌ ಕೋರ್ಟ್‌ ಹಾಳಾಗಲಿದೆ ಎನ್ನುವ ನೆಪ ಹೇಳಿ ಕಬಡ್ಡಿ ಪಂದ್ಯಗಳನ್ನು ಎತ್ತಂಗಡಿ ಮಾಡಿಸಲಾಗಿತ್ತು. ಆದರೆ ಬ್ಯಾಡ್ಮಿಂಟನ್‌ ಪಂದ್ಯಗಳಿಗೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅವಕಾಶ ನೀಡಿದ್ದೇಕೆ ಎನ್ನುವ ಪ್ರಶ್ನೆಗೆ ಕ್ರೀಡಾ ಇಲಾಖೆ ಬಳಿ ಉತ್ತರವಿಲ್ಲ. ಇದೀಗ ಬಿಎಫ್‌ಸಿ ತಂಡದ ವಿರುದ್ಧವೂ ಅಂತದ್ದೇ ಆರೋಪಗಳು ಕೇಳಿಬರುತ್ತಿವೆ. ಫುಟ್ಬಾಲ್‌ ಪಂದ್ಯಗಳ ಆಯೋಜನೆಯಿಂದಾಗಿ ಟ್ರ್ಯಾಕ್‌ ಕಿತ್ತುಹೋಗಿದೆ. ರಾಜ್ಯದ ನೂರಾರು ಅಥ್ಲೀಟ್‌ಗಳಿಗೆ ತೊಂದರೆಯಾಗುತ್ತಿದೆ ಎಂದು ಅಥ್ಲೆಟಿಕ್‌ ಸಂಸ್ಥೆ ಹೋರಾಟ ನಡೆಸುತ್ತಿದೆ.

ತಂಡಗಳ ಮೇಲಾಗುವ ಪರಿಣಾಮವೇನು?

ಬೆಂಗಳೂರು ಹಾಗೂ ರಾಜ್ಯದಲ್ಲಿ ಎಲ್ಲಾ ಕ್ರೀಡೆಗಳಿಗೂ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಪ್ರತಿಯೊಂದು ತಂಡ ಸಹ ಇಲ್ಲಿ ಆಡಲು ಇಚ್ಛಿಸುತ್ತದೆ. ಆದರೆ ಪಂದ್ಯಗಳು ಸ್ಥಳಾಂತರಗೊಂಡರೆ ತಂಡಗಳಿಗೆ ತವರಿನ ಲಾಭ ಸಿಗುವುದಿಲ್ಲ. ತವರಲ್ಲಿ ಮಿಂಚಿ, ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಳ್ಳುವ ಅವಕಾಶ ಆಟಗಾರರ ಕೈತಪ್ಪಲಿದೆ. ಫ್ರಾಂಚೈಸಿಗಳಿಗೆ ತವರಿನಲ್ಲಿ ಸಿಗುವ ಜಾಹೀರಾತು, ಟಿಕೆಟ್‌ ಮಾರಾಟದಿಂದ ಬರುವ ಹಣ ಕಡಿತಗೊಳ್ಳಲಿದೆ.

ಅಭಿಮಾನಿಗಳಿಗೆ ನಷ್ಟ! ಬೆಂಗಳೂರು ಕ್ರೀಡಾ ನಗರಿ. ರಾಜ್ಯದ ಜನ ಎಲ್ಲಾ ಕ್ರೀಡೆಗಳನ್ನು ಪ್ರೀತಿಸುತ್ತಾರೆ. ಈಗಾಗಲೇ 2 ವರ್ಷದಿಂದ ರೋಚಕ ಕಬಡ್ಡಿ ಪಂದ್ಯಗಳನ್ನು ನೋಡುವ ಅವಕಾಶ ಇಲ್ಲಿನ ಅಭಿಮಾನಿಗಳಿಗೆ ಸಿಗುತ್ತಿಲ್ಲ. ಐಎಸ್‌ಎಲ್‌ ಸೇರಿದಂತೆ ಬೆಂಗಳೂರು ಫುಟ್ಬಾಲ್‌ ಕ್ಲಬ್‌ ತಂಡ ಆಡುವ ಪಂದ್ಯಗಳಿಗೆ ಕನಿಷ್ಠ 15ರಿಂದ 20 ಸಾವಿರ ಪ್ರೇಕ್ಷಕರು ಕಂಠೀರವ ಕ್ರೀಡಾಂಗಣದಲ್ಲಿ ಸೇರುತ್ತಾರೆ. ಬಿಎಫ್‌ಸಿ ಪಂದ್ಯಗಳು ಸ್ಥಳಾಂತರಗೊಂಡರೆ ಇಲ್ಲಿನ ಫುಟ್ಬಾಲ್‌ ಅಭಿಮಾನಿಗಳಿಗೆ ನಷ್ಟವಾಗಲಿದೆ.

ರಾಜ್ಯದಲ್ಲಿ ಅಥ್ಲೆಟಿಕ್ಸ್‌ ಹಾಗೂ ಫುಟ್ಬಾಲ್‌ ಒಟ್ಟಿಗೆ ಏಳಿಗೆಯತ್ತ ಸಾಗಬೇಕು ಎನ್ನುವುದು ನಮ್ಮ ಆಶಯ. ಜೆಎಸ್‌ಡಬ್ಲ್ಯು ಸಂಸ್ಥೆ ಹಲವು ವರ್ಷಗಳಿಂದ ಕ್ರೀಡಾಭಿವೃದ್ಧಿಯಲ್ಲಿ ತೊಡಗಿದೆ. ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೀಟ್‌ಗಳಿಗೆ ಬೇಕಿರುವ ಸೌಲಭ್ಯಗಳನ್ನು ಒದಗಿಸಲು ನಾವು ಸಿದ್ಧವಿದ್ದೇವೆ. ಬಿಎಫ್‌ಸಿ ತಂಡಕ್ಕೆ ಆಡಲು ಅನುಮತಿ ಬೇಕಿದೆ. ಬೆಂಗಳೂರು ಬಿಟ್ಟು ಬೇರೆಡೆ ಪಂದ್ಯಗಳನ್ನು ನಡೆಸುವ ಬಗ್ಗೆ ನಾವು ಯೋಚಿಸಲು ಸಹ ಸಾಧ್ಯವಿಲ್ಲ. - ಮುಸ್ತಾಫ ಗೌಸ್‌, ಸಿಇಒ, ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್

ಕಂಠೀರವ ಕ್ರೀಡಾಂಗಣದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ ಎಂದು ಜೆಎಸ್‌ಡಬ್ಲ್ಯು ಸಂಸ್ಥೆ ಹೇಳುತ್ತಿದೆ. ಅವರು ಯಾರನ್ನು ಕೇಳಿ ಮಾಡಿದರು. ಯಾವುದೇ ಕೆಲಸ ಮಾಡುವ ಮೊದಲು ನಮ್ಮನ್ನೇನೂ ಅವರು ಸಂಪರ್ಕಿಸಿಲ್ಲ. 4 ವರ್ಷಗಳಿಂದ ಹಲವು ಅಥ್ಲೀಟ್‌ಗಳಿಗೆ ತೊಂದರೆಯಾಗಿದೆ. ಕಂಠೀರವದಲ್ಲಿ ಫುಟ್ಬಾಲ್‌ ನಿಲ್ಲಿಸಬೇಕು ಎಂದು ಕ್ರೀಡಾ ಇಲಾಖೆ ಆಯುಕ್ತರು ಹಾಗೂ ಕ್ರೀಡಾ ಸಚಿವರಿಗೆ ಪತ್ರ ಬರೆದಿದ್ದೇವೆ. - ಎಲ್ವಿಸ್‌ ಜೋಸೆಫ್‌, ಸಿಇಒ, ಕರ್ನಾಟಕ ಅಥ್ಲೆಟಿಕ್ಸ್‌ ಸಂಸ್ಥೆ

ವರದಿ: ಸ್ಪಂದನ್ ಕಣಿಯಾರ್, ಕನ್ನಡಪ್ರಭ

click me!