
ನವದೆಹಲಿ: ಅಲಿರೇಜಾ ಮಿರ್ಜಾಯಿನ್ ಮತ್ತು ಆಕಾಶ್ ಶಿಂದೆ ಅವರ ಸೂಪರ್ 10 ಸಾಹಸಗಳಿಂದ ಮಿಂಚಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ 18ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 28 ಅಂಕಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಬುಲ್ಸ್, ಲೀಗ್ ಹಂತದಲ್ಲಿಆಡಿದ 18 ಪಂದ್ಯಗಳಲ್ಲಿ11 ಗೆಲುವು ಮತ್ತು 7 ಸೋಲುಗಳೊಂದಿಗೆ 22 ಅಂಕಗಳನ್ನು ಕಲೆಹಾಕಿತು. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಿತು.
ತ್ಯಾಗರಾಜ್ ಒಳಾಂಗಣ ಕ್ರೀಡಾಗಣದಲ್ಲಿ ಗುರುವಾರ ನಡೆದ ಮೊದಲ ಪಂದ್ಯದಲ್ಲಿಅತ್ಯಮೋಘ ಆಟ ಪ್ರದರ್ಶಿಸಿದ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ 54-26 ಅಂಕಗಳಿಂದ ಗುಜರಾತ್ ಗೆ ಸೋಲುಣಿಸಿತು. ಇದರೊಂದಿಗೆ ಕೋಚ್ ಬಿ.ಸಿ. ರಮೇಶ್ ಗರಿಡಿಯಲ್ಲಿ ಪಳಗಿರುವ ಬುಲ್ಸ್, ಇದೇ 25ರಿಂದ ಆರಂಭವಾಗಲಿರುವ ಪ್ಲೇಆಫ್ ಸುತ್ತಿಗೆ ಭರ್ಜರಿಯಾಗಿ ತಯಾರಿ ನಡೆಸಿತು. ಅತ್ತ 18 ಪಂದ್ಯಗಳಿಂದ ಕೇವಲ 12 ಅಂಕಗಳನ್ನು ಕಲೆಹಾಕಲಷ್ಟೇ ಶಕ್ತವಾದ ಗುಜರಾತ್ ಜೈಂಟ್ಸ್, 12 ತಂಡಗಳ ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಸೀಮಿತಗೊಂಡಿತು.
ಬೆಂಗಳೂರು ಬುಲ್ಸ್ ತಂಡದ ಪರ ಅಲಿರೇಜಾ (10 ಅಂಕ) ಮತ್ತು ಆಕಾಶ್ ಶಿಂದೆ (11 ಅಂಕ) ಸೂಪರ್ 10 ಸಾಹಸ ಮಾಡಿದರು. ಇವರಲ್ಲದೆ, ಡಿಫೆಂಡರ್ ಸಂಜಯ್, ಆಶೀಶ್ ಮತ್ತು ದೀಪಕ್ ಶಂಕರ್ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಅತ್ತ ಗುಜರಾತ್ ತಂಡದ ಪರ ಶ್ರೀಧರ್ ಕದಂ(7 ಅಂಕ) ಮತ್ತು ಹಿಮಾಂಶು (5 ಅಂಕ) ಹೊರತುಪಡಿಸಿ ಉಳಿಸಿದವರು ನಿರಾಸೆ ಮಡಿಸಿದರು.
ಅ.26ರಂದು ಮಿನಿ ಕ್ವಾಲಿಫೈಯರ್ ನಡೆಯಲಿದ್ದು, ಅಂಕಪಟ್ಟಿಯ 3ನೇ ಸ್ಥಾನಿ ಬೆಂಗಳೂರು ಹಾಗೂ 4ನೇ ಸ್ಥಾನಿ ತೆಲುಗು ಟೈಟಾನ್ಸ್ ಸೆಣಸಾಡಲಿವೆ. ಅದರಲ್ಲಿ ಗೆದ್ದ ತಂಡ ಎಲಿಮಿನೇಟರ್ -3 ಪ್ರವೇಶಿಸಲಿದ್ದು, ಅದರಲ್ಲೂ ಗೆದ್ದರೆ ಕ್ವಾಲಿಫೈಯರ್ -2ಗೇರಲಿದೆ. ಅಲ್ಲಿಯೂ ಗೆದ್ದರೆ ಫೈನಲ್ ತಲುಪಲಿದೆ. ಇನ್ನು, ಮಿನಿ ಕ್ವಾಲಿಫೈಯರ್ ನಲ್ಲಿ ಸೋಲುವ ತಂಡ ಎಲಿಮಿನೇಟರ್-2 ಆಡಬೇಕಾಗುತ್ತದೆ. ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳಾದ ಪುಣೇರಿ ಪಲ್ಟನ್-ದಬಾಂಗ್ ಡೆಲ್ಲಿ ಅ.27ರಂದು ಕ್ವಾಲಿಫೈಯರ್-1ರಲ್ಲಿ ಆಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.