ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ 8ನೇ ಆವೃತ್ತಿಯಲ್ಲಿ ಬಳ್ಳಾರಿ ಟಸ್ಕರ್ಸ್ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಬಿಜಾಪುರ ಬುಲ್ಸ್ ಮಣಿಸಿದ ಬಳ್ಳಾರಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.
ಬೆಂಗಳೂರು(ಆ.20): ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಬಳ್ಳಾರಿ ಟಸ್ಕರ್ಸ್ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಹಾಲಿ ಚಾಂಪಿಯನ್ ಬಿಜಾಪುರ ಬುಲ್ಸ್ ವಿರುದ್ಧ ಅಜಿತ್ ಕಾರ್ತಿಕ್ ಹಾಗೂ ಅಭಿಷೇಕ್ ರೆಡ್ಡಿ ಹಾಫ್ ಸೆಂಚುರಿ ನೆರವಿನಿಂದ ಬಳ್ಳಾರಿ ಟಸ್ಕರ್ಸ್ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಬಳ್ಳಾರಿ ಸತತ 3ನೇ ಗೆಲುವು ಸಾಧಿಸೋ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿತು..
ಇದನ್ನೂ ಓದಿ: KPL ಟ್ರೋಫಿ ಲಾಂಚ್; ವೇದಾಗೆ ಫಿದಾ ಆದ ಸುದೀಪ್!
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಟಸ್ಕರ್ಸ್ ಆರಂಭದಲ್ಲೇ ಯಶಸ್ಸು ಕಂಡಿತು. ಬಿಜಾಪುರ ತಂಡದ ಬಿ.ಜಿ. ನವೀನ್ ಅವರಿಗೆ ಖಾತೆ ತೆರೆಯಲು ಅವಕಾಶ ನೀಡಲಿಲ್ಲ. ಆದರೆ ರಾಜು ಭಟ್ಕಳ್ ಹಾಗೂ ಭರತ್ ಚಿಪ್ಲಿ 84 ರನ್ ಜೊತೆಯಾಟವಾಡಿದರು. ಸ್ಫೋಟಕ ಬ್ಯಾಟಿಂಗ್ ಗೆ ಹೆಸರಾಗಿರುವ ಭರತ್ ಚಿಲ್ಪಿ 39 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅರ್ಧ ಶತಕ ದಾಖಲಿಸಿದರು. ನಂತರ ರಾಜು ಭಟ್ಕಳ್ 43 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 62 ರನ್ ಸಿಡಿಸಿ ಸವಾಲಿನ ಮೊತ್ತದಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮವಾಗಿ ಬುಲ್ಸ್ 20 ಓವರ್ ಗಳಲ್ಲಿ 8.1 ಸರಾಸರಿಯಂತೆ 162 ರನ್ ಗಳಿಸಿತು.
ಇದನ್ನೂ ಓದಿ: ಮಳೆಯಿಂದಾಗಿ KPL ಟೂರ್ನಿಯಲ್ಲಿ ಬದಲಾವಣೆ; ಹೊಸ ವೇಳಾಪಟ್ಟಿ ಪ್ರಕಟ!
163 ರನ್ ಗುರಿ ಬೆನ್ನಟ್ಟಿದ ಬಳ್ಳಾರಿ ಉತ್ತಮ ಆರಂಭ ಪಡೆಯಿತು. ಅಭಿಷೇಕ್ ರೆಡ್ಡಿ ಹಾಗೂ ಕಾರ್ತಿಕ್ ಸಿಎ ಶತಕದ ಜೊತೆಯಾಟ ನೀಡಿದರು. ಕಾರ್ತಿಕ್ 57 ರನ್ ಸಿಡಿಸಿ ಔಟಾದರು. ಇನ್ನು ಅಭಿಷೇಕ್ ಇನ್ನಿಂಗ್ಸ್ ಮುಂದುವರಿಸಿದರು. ದೇವದತ್ ಪಡಿಕ್ಕಲ್ ಜೊತೆ ಇನ್ನಿಂಗ್ಸ್ ಕಟ್ಟಿದ ಅಭಿಷೇಕ್ ಅಜೇಯ 67 ರನ್ ಸಿಡಿದರು. ದೇವದತ್ತ ಪಡಿಕ್ಕಲ್ (29) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಬಳ್ಳಾರಿ ಟಸ್ಕರ್ಸ್ ತಂಡ ಹಾಲಿ ಚಾಂಪಿಯನ್ ತಂಡ ಬಿಜಾಪುರ ಬುಲ್ಸ್ ವಿರುದ್ಧ 7 ವಿಕೆಟ್ ಗಳ ಜಯ ಗಳಿಸಿತು.