ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌: ಕ್ವಾರ್ಟರ್‌ಗೆ ಸಿಂಧು, ಪ್ರಣಯ್‌

By Naveen KodaseFirst Published Apr 28, 2023, 10:17 AM IST
Highlights

ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಶಟ್ಲರ್‌ಗಳ ಮಿಂಚಿನ ಆಟ
ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಪಿ.ವಿ.ಸಿಂಧು, ಎಚ್‌.ಎಸ್‌.ಪ್ರಣಯ್‌
ಸಾತ್ವಿಕ್‌ ಹಾಗೂ ಚಿರಾಗ್‌ ಶೆಟ್ಟಿ ಜೋಡಿ ಕೂಡಾ ಕ್ವಾರ್ಟರ್ಸ್‌ಗೆ ಲಗ್ಗೆ

ದುಬೈ(ಏ.28): ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು, ಎಚ್‌.ಎಸ್‌.ಪ್ರಣಯ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು, ಕಿದಂಬಿ ಶ್ರೀಕಾಂತ್‌ ಪ್ರಿ ಕ್ವಾರ್ಟರ್‌ನಲ್ಲಿ ಸೋತು ಹೊರಬಿದ್ದಿದ್ದಾರೆ. ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಸಿಂಧು, ವಿಶ್ವ ನಂ.9 ಚೀನಾದ ಹಾನ್‌ ಯುಯಿ ವಿರುದ್ಧ 21-12, 21-15 ನೇರ ಗೇಮ್‌ಗಳಲ್ಲಿ ಸುಲಭ ಜಯ ಸಾಧಿಸಿದರು. 

ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಪ್ರಣಯ್‌, ಇಂಡೋನೇಷ್ಯಾದ ದ್ವಿ ವಾರ್ಡೊಯೊ ವಿರುದ್ಧ 21-16, 5-21, 21-18 ಗೇಮ್‌ಗಳಲ್ಲಿ ಪ್ರಯಾಸದ ಜಯ ಸಾಧಿಸಿದರೆ, ಶ್ರೀಕಾಂತ್‌ ಜಪಾನ್‌ನ ಕೊಡಯ್‌ ನರೊಕ ವಿರುದ್ಧ 14-21, 22-20, 9-21ರಲ್ಲಿ ಸೋಲುಂಡರು.

Latest Videos

ಸಾತ್ವಿಕ್‌-ಚಿರಾಗ್‌ ಮುನ್ನಡೆ: ಪುರುಷರ ಡಬಲ್ಸ್‌ನ 2ನೇ ಸುತ್ತಿನಲ್ಲಿ ಸಾತ್ವಿಕ್‌ ಹಾಗೂ ಚಿರಾಗ್‌ ಶೆಟ್ಟಿ ಜೋಡಿ ಕೊರಿಯಾದ ಯೊಂಗ್‌ ಜಿನ್‌ ಹಾಗೂ ಸುಂಗ್‌ ಸೆಯುಂಗ್‌ ವಿರುದ್ಧ 21-13, 21-11ರಲ್ಲಿ ಗೆದ್ದು ಕ್ವಾರ್ಟರ್‌ ಪ್ರವೇಶಿಸಿದರು. ಮಹಿಳಾ ಡಬಲ್ಸ್‌ ಪ್ರಿ ಕ್ವಾರ್ಟರ್‌ನಲ್ಲಿ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಜೋಡಿ ಸೋಲುಂಡಿತು.

ಬ್ರೆಜಿಲ್‌ನ ನಿಘಂಟಿನಲ್ಲಿ ಪೀಲೆ ಹೆಸರಿಗೆ ಸ್ಥಾನ!

ರಿಯೋ ಡಿ ಜನೆರಿಯೋ: ಇತ್ತೀಚೆಗೆ ನಿಧನರಾದ ಫುಟ್ಬಾಲ್‌ ದಂತಕಥೆ ಪೀಲೆ ಅವರ ಹೆಸರು ಈ ಬ್ರೆಜಿಲ್‌ನ ನಿಘಂಟಿನಲ್ಲೂ ಸ್ಥಾನ ಪಡೆದಿದೆ. ಮೈಕೆಲಿಸ್‌ ಎನ್ನುವ ನಿಘಂಟು ಮುದ್ರಣ ಸಂಸ್ಥೆಯು ಪೀಲೆಯ ಹೆಸರನ್ನು ಸೇರ್ಪಡೆಗೊಳಿಸಿದ್ದು, ಅಸಾಧಾರಣ, ಅನನ್ಯ, ಅಪತ್ರಿಮ ಎನ್ನುವ ಪದಗಳಿಗೆ ಪೀಲೆ ಹೆಸರನ್ನು ಗುಣವಾಚಕವಾಗಿ ಬಳಸಬಹುದು ಎಂದು ಪ್ರಕಟಿಸಿದೆ.

ಏಷ್ಯಾಡ್‌ ಚಿನ್ನ ವಿಜೇತ ಬಾಕ್ಸರ್‌ ಕೌರ್‌ ನಿಧನ

ಚಂಡೀಗಢ: ಏಷ್ಯನ್‌ ಗೇಮ್ಸ್‌ ಚಿನ್ನ ವಿಜೇತ, ಪ್ರದರ್ಶನ ಪಂದ್ಯವೊಂದರಲ್ಲಿ ಬಾಕ್ಸಿಂಗ್‌ ದಂತಕಥೆ ಮೊಹಮದ್‌ ಅಲಿ ಜೊತೆ ಸೆಣಸಿದ್ದ ಭಾರತದ ಮಾಜಿ ಬಾಕ್ಸರ್‌ ಕೌರ್‌ ಸಿಂಗ್‌(74) ಅವರು ಅನಾರೋಗ್ಯದ ಕಾರಣ ಗುರುವಾರ ನಿಧನರಾಗಿದ್ದಾರೆ. ಮಾಜಿ ಸೈನಿಕರಾಗಿರುವ ಕೌರ್‌ 1980ರಲ್ಲಿ ಅಲಿ ಜೊತೆ 4 ಸುತ್ತಿನ ಪ್ರದರ್ಶನ ಪಂದ್ಯವಾಡಿದ್ದರು. ಒಲಿಂಪಿಕ್ಸ್‌ನಲ್ಲೂ ಭಾರತವನ್ನು ಪ್ರತಿನಿಧಿಸಿದ್ದ ಅವರು 1982ರಲ್ಲಿ ಅರ್ಜುನ, 1983ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.

Wrestlers Protest ಕುಸ್ತಿಪಟುಗಳ ನಡೆಯಿಂದ ದೇಶದ ಘನತೆಗೆ ಧಕ್ಕೆ: PT ಉಷಾ

ರಾಷ್ಟ್ರೀಯ ಕ್ರೀಡಾ​ಕೂ​ಟ ಉದ್ಘಾ​ಟಿಸ​ಲಿ​ರುವ ಮೋದಿ

ಪಣ​ಜಿ: ಅಕ್ಟೋ​ಬ​ರ್‌​ನ​ಲ್ಲಿ ಗೋವಾದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಗೋವಾ ಮುಖ್ಯ​ಮಂತ್ರಿ ಪ್ರಮೋದ್‌ ಸಾವಂತ್‌ ತಿಳಿ​ಸಿ​ದ್ದಾರೆ. ಬುಧ​ವಾರ ಭಾರ​ತೀಯ ಒಲಿಂಪಿಕ್ಸ್‌ ಸಂಸ್ಥೆ ಮುಖ್ಯಸ್ಥೆ ಪಿ.ಟಿ.​ಉಷಾ ಅವರ ಜೊತೆ ಕ್ರೀಡಾ​ಕೂ​ಟದ ಸಿದ್ಧತೆ ಪರಿ​ಶೀ​ಲ​ನಾ ಸಭೆ ಬಳಿಕ ಮಾತ​ನಾ​ಡಿದ ಸಾವಂತ್‌, ಪ್ರಧಾ​ನಿಯ ಲಭ್ಯ​ತೆಗೆ ಅನು​ಗು​ಣ​ವಾಗಿ ಅ.23 ಅಥವಾ 24ಕ್ಕೆ ಉದ್ಘಾ​ಟನಾ ಸಮಾ​ರಂಭ ಫಟೋ​ರ್ಡಾದ ನೆಹರೂ ಕ್ರೀಡಾಂಗ​ಣ​ದಲ್ಲಿ ನಡೆ​ಸಲಿ​ದ್ದೇವೆ. ನ.10ರ ವರೆಗೂ ಕ್ರೀಡಾ​ಕೂಟ ನಡೆ​ಯ​ಲಿದೆ ಎಂದರು.

ಟಾಫ್ಸ್‌, ಖೇಲೋ ಬಗ್ಗೆ ಜರೀನ್‌ ಮೆಚ್ಚುಗೆ

ನವದೆಹಲಿ: 2 ಬಾರಿ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ ನಿಖಾತ್‌ ಜರೀನ್‌ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಟಾರ್ಗೆಟ್‌ ಒಲಿಂಪಿಕ್ಸ್‌ ಪೋಡಿಯಂ(ಟಾಪ್‌) ಹಾಗೂ ಖೇಲೋ ಇಂಡಿಯಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಯೋಜನೆಗಳು ಭಾರತೀಯ ಕ್ರೀಡಾಪಟುಗಳು ಆರ್ಥಿಕ ಸಮಸ್ಯೆ ಎದುರಿಸದಂತೆ ನೋಡಿಕೊಳ್ಳುತ್ತಿವೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ‘ಮನ್‌ ಕೀ ಬಾತ್‌’ ಕಾರ‍್ಯಕ್ರಮ 100 ಸಂಚಿಕೆಗಳನ್ನು ಪೂರೈಸಿದ ಅಂಗವಾಗಿ ನಡೆಸಲಾದ ಸಂವಾದದಲ್ಲಿ ಪಾಲ್ಗೊಂಡಿದ್ದ ಜರೀನ್‌ ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರೋತ್ಸಾಹವನ್ನು ಶ್ಲಾಘಿಸಿದರು. ‘ಸಾಮಾನ್ಯವಾಗಿ ವಿದೇಶ ಪ್ರವಾಸಗಳಿಗೆ ತೆರಳಿದಾಗ ಖರ್ಚು ವೆಚ್ಚಗಳನ್ನು ನಾವೇ ಭರಿಸಬೇಕಿತ್ತು. ಆದರೆ ಟಾಫ್ಸ್‌ನಿಂದಾಗಿ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ಸಿಗುತ್ತಿದೆ. ಖೇಲೋ ಇಂಡಿಯಾ ಯುವ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಕಲ್ಪಿಸಿದೆ’ ಎಂದು ಜರೀನ್‌ ಖುಷಿ ವ್ಯಕ್ತಪಡಿಸಿದ್ದಾರೆ.

click me!