
ಮೆಲ್ಬರ್ನ್(ಜ.21): ಆಸ್ಪ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂ ಭಾನುವಾರ ಆಘಾತಕಾರಿ ಫಲಿತಾಂಶಗಳಿಗೆ ಸಾಕ್ಷಿಯಾಯಿತು. ಹಾಲಿ ಚಾಂಪಿಯನ್ ರೋಜರ್ ಫೆಡರರ್‌ಗೆ ಗ್ರೀಸ್‌ನ 20 ವರ್ಷದ ಸ್ಟೆಫಾನೋ ಟಿಟ್ಸಿಪಾಸ್ ಆಘಾತ ನೀಡಿದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಭರವಸೆಯಲ್ಲಿದ್ದ ಆ್ಯಂಜಿಲಿಕ್ ಕೆರ್ಬರ್ ಹಾಗೂ ಮರಿಯಾ ಶರಪೋವಾ ಸಹ ಹೊರಬಿದ್ದರು.
7 ಆಸ್ಪ್ರೇಲಿಯನ್ ಓಪನ್ ಮೇಲೆ ಕಣ್ಣಿಟ್ಟಿದ್ದ ಸ್ವಿಜರ್‌ಲೆಂಡ್‌ನ ಟೆನಿಸ್ ಮಾಂತ್ರಿಕ ಫೆಡರರ್, ತಮಗಿಂತ 17 ವರ್ಷ ಚಿಕ್ಕವರಾದ ಟಿಟ್ಸಿಪಾಸ್ ವಿರುದ್ಧ ಒತ್ತಡಕ್ಕೆ ಸಿಲುಕಿದರು. 7-6, 6-7, 5-7, 6-7 ಸೆಟ್‌ಗಳಲ್ಲಿ ಸೋಲುಂಡು ಫೆಡರರ್ ನಿರಾಸೆ ಅನುಭವಿಸಿದರು. ಇದರೊಂದಿಗೆ ಪುರುಷ ಹಾಗೂ ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್‌ಗಳಿಬ್ಬರೂ ಹೊರಬಿದ್ದಂತಾಗಿದೆ. ಕ್ಯಾರೋಲಿನ್ ವೋಜ್ನಿಯಾಗಿ 3ನೇ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದರು.
ನಡಾಲ್‌ಗೆ ಸುಲಭ ಜಯ: ಚೆಕ್ ಗಣರಾಜ್ಯದ ಥಾಮಸ್ ಬರ್ಡಿಚ್ ವಿರುದ್ಧ 6-0, 6-1, 7-6 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದ ಸ್ಪೇನ್‌ನ ರಾಫೆಲ್ ನಡಾಲ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಸೆಮಿಫೈನಲ್ ಪ್ರವೇಶಿಸಲು 2ನೇ ಶ್ರೇಯಾಂಕಿತ ಆಟಗಾರ ಅಮೆರಿಕದ ಫ್ರಾನ್ಸಿಸ್ ಟಿಯಾಫೋ ವಿರುದ್ಧ ಸೆಣಸಲಿದ್ದಾರೆ.
ಕಳೆದ ವರ್ಷದ ರನ್ನರ್-ಅಪ್ ಕ್ರೊವೇಷಿಯಾದ ಮರಿನ್ ಸಿಲಿಚ್ ಸಹ ಆಘಾತ ಅನುಭವಿಸಿದರು. 22ನೇ ಶ್ರೇಯಾಂಕಿತ ಆಟಗಾರ ಸ್ಪೇನ್‌ನ ಬಟ್ಟಿಸ್ಟಾಅಗುಟ್ ವಿರುದ್ಧ 7-6, 3-6, 2-6, 6-4, 4-6 ಸೆಟ್‌ಗಳಲ್ಲಿ ವೀರೋಚಿತ ಸೋಲು ಕಂಡರು.
ಬುಕ್ಕಿಗಳ ಫೇವರಿಟ್ ಕೆರ್ಬರ್ ಹೊರಕ್ಕೆ: ಬುಕ್ಕಿಗಳ ಪ್ರಕಾರ ಪ್ರಶಸ್ತಿ ಗೆಲ್ಲುಬಹುದಾದ ನೆಚ್ಚಿನ ಆಟಗಾರ್ತಿ ಎನಿಸಿದ್ದ 2016ರ ಚಾಂಪಿಯನ್ ಆ್ಯಂಜಿಲಿಕ್ ಕೆರ್ಬರ್ ಮಹಿಳಾ ಸಿಂಗಲ್ಸ್ 4ನೇ ಸುತ್ತಿನಲ್ಲಿ ಅಮೆರಿಕದ ಶ್ರೇಯಾಂಕ ರಹಿತ ಡೇನಿಯಲ್ ಕಾಲಿನ್ಸ್ ವಿರುದ್ಧ 0-6, 2-6 ಸೆಟ್‌ಗಳಲ್ಲಿ ಹೀನಾಯ ಸೋಲು ಅನುಭವಿಸಿದರು. ಅಮೆರಿಕದ ಕಾಲೇಜ್ ಟೆನಿಸ್ ಟೂರ್ನಿಗಳಲ್ಲಿ ಆಡಿಕೊಂಡಿದ್ದ ಕಾಲಿನ್ಸ್, ಇದೇ ಮೊದಲ ಬಾರಿಗೆ ಆಸ್ಪ್ರೇಲಿಯನ್ ಓಪನ್‌ನಲ್ಲಿ ಕಣಕ್ಕಿಳಿದಿದ್ದಾರೆ. ಈ ಟೂರ್ನಿಗೂ ಮೊದಲು ಅವರು ಗ್ರ್ಯಾಂಡ್‌ಸ್ಲಾಂನಲ್ಲಿ ಒಂದೂ ಪಂದ್ಯ ಗೆದ್ದಿರಲಿಲ್ಲ. ಇದೀಗ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.
ಕ್ರಿಕೆಟ್ ಆಟಗಾರ್ತಿಯೂ ಆಗಿರುವ ಆಸ್ಪ್ರೇಲಿಯಾದ ನಂ.1 ಆಶ್ಲೆ ಬಾರ್ಟಿ, ಮಾಜಿ ಚಾಂಪಿಯನ್ ರಷ್ಯಾದ ಮರಿಯಾ ಶರಪೋವಾರನ್ನು ಹೊರದಬ್ಬಿದರು. ಅತ್ಯುತ್ತಮ ಲಯದಲ್ಲಿದ್ದ ಶರಪೋವಾ 6-4, 1-6, 4-6 ಸೆಟ್‌ಗಳಲ್ಲಿ ಪರಾಭವಗೊಂಡರು. 10 ವರ್ಷಗಳಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಆಸ್ಪ್ರೇಲಿಯಾದ ಮೊದಲ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾದರು. 8ನೇ ಶ್ರೇಯಾಂಕಿತೆ ಪೆಟ್ರಾ ಕ್ವಿಟೋವಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, 5ನೇ ಶ್ರೇಯಾಂಕಿತೆ ಅಮೆರಿಕದ ಸ್ಲೋನ್ ಸ್ಟೀಫನ್ಸ್ ಆಘಾತ ಅನುಭವಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.