ಆಸ್ಟ್ರೇಲಿಯನ್ ಓಪನ್: ನಾವು ಟೆನಿಸ್‌ ಆಟಗಾರರೇ, ಮೃಗಾಲಯದ ಪ್ರಾಣಿಗಳೇ?: ಟೆನಿಸರ್‌ ತಾರೆ ಇಗಾ ಕಿಡಿ!

Published : Jan 29, 2026, 10:29 AM IST
Iga Swiatek

ಸಾರಾಂಶ

ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಆಟಗಾರ್ತಿ ಕೊಕೊ ಗಾಫ್‌ರ ಗೌಪ್ಯತೆ ಉಲ್ಲಂಘಿಸಿದ್ದಕ್ಕೆ ಇಗಾ ಸ್ವಿಯಾಟೆಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ನೋವಾಕ್‌ ಜೋಕೋವಿಚ್‌ ಮತ್ತು ಯಾನಿಕ್‌ ಸಿನ್ನರ್‌ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಸೆಣಸಲಿದ್ದಾರೆ.

ಮೆಲ್ಬರ್ನ್‌: ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೋಲಿನ ಬಳಿಕ ಅಮೆರಿಕದ ಕೊಕೊ ಗಾಫ್‌ ತಮ್ಮ ರ್‍ಯಾಕೆಟ್ ಪುಡಿಗಟ್ಟಿದ್ದನ್ನು ವಿಡಿಯೋ ಮಾಡಿದ್ದಕ್ಕೆ ಪೋಲೆಂಡ್‌ನ ತಾರಾ ಆಟಗಾರ್ತಿ ಇಗಾ ಸ್ವಿಯಾಟೆಕ್‌ ಕಿಡಿಕಾರಿದ್ದು, ‘ನಾವು ಟೆನಿಸ್‌ ಆಟಗಾರರೇ ಅಥವಾ ಮೃಗಾಯದಲ್ಲಿರುವ ಪ್ರಾಣಿಗಳೇ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಾಫ್‌ ಕ್ವಾರ್ಟರ್ ಫೈನಲ್‌ನಲ್ಲಿ ಎಲಿನಾ ಸ್ವಿಟೋಲಿನಾ ವಿರುದ್ಧ ಸೋತು ಡ್ರೆಸ್ಸಿಂಗ್‌ ರೂಮ್‌ ಕಡೆ ತೆರಳುತ್ತಿದ್ದಾಗ ರ್‍ಯಾಕೆಟ್ ನೆಲಕ್ಕೆ ಬಡಿದು ಪುಡಿಗಟ್ಟಿದ್ದರು. ಆದರೆ ಇದು ವಿಡಿಯೋದಲ್ಲಿ ಸೆರೆಯಾಗಿತ್ತು. ಆಟಗಾರರ ಗೌಪ್ಯತೆ ಕಾಪಾಡದ್ದಕ್ಕೆ ಇಗಾ ಅಸಮಾಧಾನ ವ್ಯಕ್ತಪಡಿದ್ದು, ‘ನಾವು ಟೆನಿಸ್‌ ಆಟಗಾರರೇ ಅಥವಾ ಮೃಗಾಲಯದಲ್ಲಿರುವ ಪ್ರಾಣಿಗಳೇ? ಸ್ವಲ್ಪವಾದರೂ ಗೌಪ್ಯತೆ ಇದ್ದರೆ ಒಳ್ಳೆಯದು. ಯಾವಾಗಲೂ ಇತರರು ಗಮನಿಸುತ್ತಿರಬೇಕಾಗಿಲ್ಲ’ ಎಂದಿದ್ದಾರೆ.

ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಜೋಕೋವಿಚ್‌, ಸಿನ್ನರ್‌

ಮೆಲ್ಬರ್ನ್‌: ದಿಗ್ಗಜ ಟೆನಿಸಿಗ, 24 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ನೋವಾಕ್‌ ಜೋಕೋವಿಚ್‌ ಈ ಬಾರಿ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಕಳೆದೆರಡು ಬಾರಿ ಚಾಂಪಿಯನ್ ಯಾನಿಕ್‌ ಸಿನ್ನರ್‌ ಕೂಡಾ ಅಂತಿಮ 4ರ ಘಟ್ಟ ತಲುಪಿದ್ದಾರೆ.

ಟೂರ್ನಿಯಲ್ಲಿ 10 ಬಾರಿ ಚಾಂಪಿಯನ್‌, ಸರ್ಬಿಯಾದ ಜೋಕೋವಿಚ್‌ ಅವರು ಬುಧವಾರ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ 5ನೇ ಶ್ರೇಯಾಂಕಿತ, ಇಟಲಿಯ ಲೊರೆಂಜೊ ಮುಸೆಟ್ಟಿ ವಿರುದ್ಧ ಆಡಿದರು. ಮೊದಲೆರಡು ಸೆಟ್‌ನಲ್ಲಿ ಮುಸೆಟ್ಟಿ ಗೆದ್ದರೂ, 3ನೇ ಸೆಟ್‌ನಲ್ಲಿ ಜೋಕೋ 3-1ರಲ್ಲಿ ಮುನ್ನಡೆಯಲ್ಲಿದ್ದರು. ಈ ವೇಳೆ ಮುಸೆಟ್ಟಿ ಗಾಯಗೊಂಡ ಕಾರಣ ಜೋಕೋವಿಚ್‌ ಸೆಮೀಸ್‌ ಪ್ರವೇಶಿಸುವ ಅವಕಾಶ ಪಡೆದುಕೊಂಡರು.

ಮತ್ತೊಂದು ಕ್ವಾರ್ಟರ್‌ನಲ್ಲಿ ಅಮೆರಿಕದ 8ನೇ ಶ್ರೇಯಾಂಕಿತ ಬೆನ್‌ ಶೆಲ್ಟನ್‌ ವಿರುದ್ಧ ವಿಶ್ವ ನಂ.2 ಸಿನ್ನರ್‌ 6-3, 6-4, 6-4 ನೇರ ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು.

ಸ್ವಿಯಾಟೆಕ್‌ ಔಟ್‌:

6 ಬಾರಿ ಗ್ರ್ಯಾನ್‌ಸ್ಲಾಂ ಗೆದ್ದಿದ್ದರೂ ಆಸ್ಟ್ರೇಲಿಯನ್‌ ಓಪನ್‌ ಗೆಲ್ಲಲಾಗದ ಪೋಲೆಂಡ್‌ ತಾರೆ ಇಗಾ ಸ್ವಿಯಾಟೆಕ್‌ ಈ ಬಾರಿಯೂ ಪ್ರಶಸ್ತಿ ತಪ್ಪಿಸಿಕೊಂಡರು. ಅವರು ಬುಧವಾರ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ 5ನೇ ಶ್ರೇಯಾಂಕಿತ ಎಲೆನಾ ರಬೈಕೆನಾ ವಿರುದ್ಧ 5-7, 1-6 ಸೆಟ್‌ಗಳಲ್ಲಿ ಸೋತು ಹೊರಬಿದ್ದರು. ಮತ್ತೊಂದು ಕ್ವಾರ್ಟರ್‌ನಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾ ತಮ್ಮದೇ ದೇಶದ ಅಮಂಡಾ ಅನಿಸಿಮೋವಾ ವಿರುದ್ಧ ಗೆದ್ದು ಸೆಮಿಫೈನಲ್‌ ತಲುಪಿದರು.

ಜೋಕೋ-ಸಿನ್ನರ್‌ ಸೆಮೀಸ್‌ ನಾಳೆ

ಕಳೆದ ಒಂದೆರಡು ವರ್ಷಗಳಿಂದ ಜೋಕೋವಿಚ್‌ಗೆ ಪ್ರಮುಖ ಸವಾಲು ಒಡ್ಡುತ್ತಿರುವ ಯುವ ಸೂಪರ್‌ಸ್ಟಾರ್‌ ಸಿನ್ನರ್‌ ಈ ಬಾರಿಯೂ ಜೋಕೋಗೆ ಪೈಪೋಟಿ ನೀಡಲಿದ್ದಾರೆ. ಇವರಿಬ್ಬರ ನಡುವಿನ ಸೆಮಿಫೈನಲ್‌ ಪಂದ್ಯ ಶುಕ್ರವಾರ ನಡೆಯಲಿದೆ. ಪಂದ್ಯದಲ್ಲಿ ಸಿನ್ನರ್‌ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದಾರೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಆಲ್ಕರಜ್‌ ಹಾಗೂ ಅಲೆಕ್ಸಾಂಡರ್‌ ಜ್ವೆರೆವ್‌ ಸೆಣಸಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟಿ20 ವಿಶ್ವಕಪ್ ಗೆಲುವಿಗೆ ಭಾರತ ದಾಟಬೇಕಿದೆ 9 ಅಗ್ನಿಪರೀಕ್ಷೆ! ಈ ಸಮಸ್ಯೆಗಳಿಟ್ಟುಕೊಂಡು ಕಪ್ ಗೆಲ್ಲುತ್ತಾ?
ಪೆನ್‌ ಪಾಯಿಂಟ್‌ ಕ್ರಿಕೆಟ್‌: ಎಮಾರ್‌ ಸ್ಟ್ರೈಕರ್ಸ್‌ ಚಾಂಪಿಯನ್‌, ಅಟ್ಯಾಕರ್ಸ್‌ ರನ್ನರ್‌-ಅಪ್‌