Australian Open 2024: ಸುಮಿತ್‌ ನಗಾಲ್‌ ಗೆಲುವಿನ ಓಟಕ್ಕೆ ಬ್ರೇಕ್‌

By Kannadaprabha NewsFirst Published Jan 19, 2024, 10:05 AM IST
Highlights

ಭಾರತದ ತಾರಾ ಟೆನಿಸಿಗ ಸುಮಿತ್‌ ನಗಾಲ್‌ರ ಆಸ್ಟ್ರೇಲಿಯನ್‌ ಓಪನ್‌ನ ಜಯದ ಓಟಕ್ಕೆ ಬ್ರೇಕ್‌ ಬಿದ್ದಿದೆ. ಗುರುವಾರ ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ನಗಾಲ್‌ ಶಾಂಗ್‌ ಜುಂಚೆಂಗ್‌ ವಿರುದ್ಧ 6-2, 3-6, 5-7, 4-6 ಸೆಟ್‌ಗಳಲ್ಲಿ ಸೋತು ಹೊರಬಿದ್ದರು.

ಮೆಲ್ಬರ್ನ್‌(ಜ.19): ಅರ್ಹತಾ ಸುತ್ತಿನಲ್ಲಿ 3 ಪಂದ್ಯಗಳಲ್ಲಿ ಗೆದ್ದು, ಬಳಿಕ ಪ್ರಧಾನ ಸುತ್ತಿನಲ್ಲೂ ಗೆಲುವು ಸಾಧಿಸಿ ಗಮನ ಸೆಳೆದಿದ್ದ ಭಾರತದ ತಾರಾ ಟೆನಿಸಿಗ ಸುಮಿತ್‌ ನಗಾಲ್‌ರ ಆಸ್ಟ್ರೇಲಿಯನ್‌ ಓಪನ್‌ನ ಜಯದ ಓಟಕ್ಕೆ ಬ್ರೇಕ್‌ ಬಿದ್ದಿದೆ. ಗುರುವಾರ ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ನಗಾಲ್‌ ಶಾಂಗ್‌ ಜುಂಚೆಂಗ್‌ ವಿರುದ್ಧ 6-2, 3-6, 5-7, 4-6 ಸೆಟ್‌ಗಳಲ್ಲಿ ಸೋತು ಹೊರಬಿದ್ದರು.

ಇಗಾ, ಕಾರ್ಲೊಸ್‌ಗೆ ಜಯ: ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಕಾರ್ಲೊಸ್‌ ಆಲ್ಕರಜ್‌, ನಾರ್ವೆಯ ಕ್ಯಾಸ್ಪೆರ್‌ ರುಡ್‌, ಅಲೆಕ್ಸಾಂಡರ್‌ ಜ್ವೆರೆವ್‌ 3ನೇ ಸುತ್ತಿಗೆ ಲಗ್ಗೆ ಇಟ್ಟರು. ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಇಗಾ ಸ್ವಿಯಾಟೆಕ್‌, ಅಜರೆಂಕಾ 3ನೇ ಸುತ್ತಿಗೇರಿದರೆ, ಎಮ್ಮಾ ರಾಡುಕಾನು, ಎಲೆನಾ ರಬೈಕೆನಾ ಸೋತು ಹೊರಬಿದ್ದರು.

ಬೋಪಣ್ಣ ಶುಭಾರಂಭ

ಪುರುಷರ ಡಬಲ್ಸ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಕಣಕ್ಕಿಳಿದಿರುವ ಭಾರತದ ರೋಹನ್‌ ಬೋಪಣ್ಣ ಶುಭಾರಂಭ ಮಾಡಿದ್ದಾರೆ. ಆದರೆ ವಿಜಯ್‌ ಪ್ರಶಾಂತ್‌-ಅನಿರುದ್ಧ್‌ ಚಂದ್ರಶೇಕರ್ ಜೋಡಿ ಮೊದಲ ಸುತ್ತಲ್ಲೇ ಸೋತು ಹೊರಬಿತ್ತು.

ಎಸ್‌ಎಫ್‌ಎ ಕೂಟ: ಇಂದು ವಾಲಿಬಾಲ್‌, ಬಾಸ್ಕೆಟ್‌ಬಾಲ್‌

ಬೆಂಗಳೂರು: ಇಲ್ಲಿನ ಪಡುಕೋಣೆ ದ್ರಾವಿಡ್ ಕ್ರೀಡಾ ಅಕಾಡೆಮಿಯಲ್ಲಿ ನಡೆಯುತ್ತಿರುವ ಎಸ್‌ಎಫ್‌ಎ ಚಾಂಪಿಯನ್‌ಶಿಪ್‌ನ 3ನೇ ದಿನ ಅಥ್ಲೆಟಿಕ್ಸ್ ಜೊತೆಗೆ ಟೆನಿಸ್ ಹಾಗೂ ಫುಟ್ಬಾಲ್‌ ಪಂದ್ಯಗಳನ್ನು ಆಡಿಸಲಾಯಿತು. ಸುಮಾರು 550ಕ್ಕೂ ಹೆಚ್ಚು ಕ್ರೀಡಾಪಟುಗಳು 3 ಕ್ರೀಡೆಗಳಲ್ಲಿ ಪಾಲ್ಗೊಂಡರು. ಅಥ್ಲೆಟಿಕ್ಸ್‌ನಲ್ಲಿ ಅಂಡರ್‌-8 ಹಾಗೂ ಅಂಡರ್‌-12 ವಿಭಾಗಗಳಲ್ಲಿ ಲಾಂಗ್‌ಜಂಪ್‌, ಹೈಜಂಪ್‌, ರಿಲೇ ಓಟದ ಸ್ಪರ್ಧೆಗಳು ನಡೆಯಿತು. ಫುಟ್ಬಾಲ್‌ನಲ್ಲಿ ಅಂಡರ್-14, ಅಂಡರ್-16 ವಿಭಾಗದ ಸ್ಪರ್ಧೆಗಳು ಆಯೋಜನೆಗೊಂಡವು. 4ನೇ ದಿನವಾದ ಶುಕ್ರವಾರ ಬ್ಯಾಡ್ಮಿಂಟನ್, ವಾಲಿಬಾಲ್ ಮತ್ತು ಬಾಸ್ಕೆಟ್‌ಬಾಲ್ ಪಂದ್ಯಗಳು ನಡೆಯಲಿವೆ.

ಬೋಶಿಯಾ ಕ್ರೀಡಾಕೂಟ: ಜ.26ರಂದು ಆಯ್ಕೆ ಪ್ರಕ್ರಿಯೆ

ಬೆಂಗಳೂರು: ಫೆ.7ರಿಂದ 12ರ ವರೆಗೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ 8ನೇ ರಾಷ್ಟ್ರೀಯ ಪ್ಯಾರಾ ಬೋಶಿಯ ಚಾಂಪಿಯನ್‌ಶಿಪ್‌ ನಡೆಯಲಿದ್ದು, ಕೂಟಕ್ಕೆ ರಾಜ್ಯದ ಕ್ರೀಡಾಪಟುಗಳ ಆಯ್ಕೆಗಾಗಿ ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ, ಕರ್ನಾಟಕ ಪ್ಯಾರಾ ಬೋಶಿಯ ಕ್ರೀಡಾ ಸಂಸ್ಥೆ ವತಿಯಿಂದ ಜ.26ರಂದು ಆಯ್ಕೆ ಪ್ರಕ್ರಿಯೆ ಆಯೋಜಿಸಲಿದೆ. ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ ನಗರದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
 

click me!