
ಬೆಂಗಳೂರು(ಜ.18): ಭಾರತ ಹಾಗೂ ಆಫ್ಘಾನಿಸ್ತಾನ ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಟಿ20 ಪಂದ್ಯವು ಹಲವು ರೋಚಕ ಹಾಗೂ ನಾಟಕೀಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯವು ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್ ಕೂಡಾ ಟೈ ಆಗಿದ್ದರಿಂದ ಮತ್ತೊಂದು ಸೂಪರ್ ಓವರ್ ಕೂಡಾ ನಡೆಯಿತು. ಹೀಗಿರುವಾಗ, ಮೊದಲ ಸೂಪರ್ ಆಡಿದ್ದ ರೋಹಿತ್ ಶರ್ಮಾ, ಎರಡನೇ ಬಾರಿಗೆ ಕೂಡಾ ಸೂಪರ್ ಓವರ್ ಆಡಿದ್ದರು. ಇದರ ಹಿಂದಿನ ಮೈಂಡ್ ಗೇಮ್ ಬಗ್ಗೆ ಟೀಂ ಇಂಡಿಯಾ ಹೆಡ್‌ಕೋಚ್ ರಾಹುಲ್ ದ್ರಾವಿಡ್ ತುಟಿಬಿಚ್ಚಿದ್ದಾರೆ.
ಹೌದು, ಆಫ್ಘಾನಿಸ್ತಾನ ಎದುರಿನ ಮೊದಲ ಸೂಪರ್ ಓವರ್‌ನ ಕೊನೆಯ ಎಸೆತಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕ್ರೀಸ್ ತೊರೆದರು. ಆದರೆ ಅದು ರೋಹಿತ್ ಶರ್ಮಾ ರಿಟೈರ್ಡ್ ಹರ್ಟ್ ಅಥವಾ ರಿಟೈರ್ಡ್ ಔಟ್ ಎನ್ನುವುದರ ಬಗ್ಗೆ ಹಲವರಿಗೆ ಹಲವು ಗೊಂದಲಗಳು ನಿರ್ಮಾಣವಾದವು. ಕೊನೆಯ ಎಸೆತದಲ್ಲಿ ಭಾರತ ಗೆಲ್ಲಲು ಎರಡು ರನ್ ಅಗತ್ಯವಿತ್ತು. ಈ ಸಂದರ್ಭದಲ್ಲಿ ನಾನ್ ಸ್ಟ್ರೈಕರ್‌ನಲ್ಲಿದ್ದ ರೋಹಿತ್ ಶರ್ಮಾ ದಿಢೀರ್ ಎನ್ನುವಂತೆ ಮೈದಾನ ತೊರೆದಿದ್ದರು. ಹೀಗಾಗಿ ಮೂರನೇ ಬ್ಯಾಟರ್ ರೂಪದಲ್ಲಿ ರಿಂಕು ಸಿಂಗ್ ಕ್ರೀಸ್‌ಗಿಳಿದರಾದರೂ, ಸ್ಟ್ರೈಕ್‌ನಲ್ಲಿದ್ದ ಯಶಸ್ವಿ ಜೈಸ್ವಾಲ್ ಕೇವಲ ಒಂದು ರನ್ ಗಳಿಸಿದ್ದರಿಂದಾಗಿ ಮತ್ತೆ ಪಂದ್ಯ ಸೂಪರ್ ಓವರ್‌ನತ್ತ ಸಾಗಿತು.
ಟೀಂ ಇಂಡಿಯಾದಲ್ಲಿದ್ದಾರೆ ರಾಮ-ಲಕ್ಷ್ಮಣರು..! ಒಬ್ಬ ಕನ್ನಡದ ಮನೆ ಮಗ.. ಮತ್ತೊಬ್ಬ ಕರ್ನಾಟಕದ ದತ್ತು ಮಗ..!
ಸೂಪರ್ ಓವರ್ ರೂಲ್ಸ್ ಪ್ರಕಾರ, ಒಂದು ವೇಳೆ ಸೂಪರ್ ಓವರ್ ಆಡುತ್ತಿದ್ದ ಬ್ಯಾಟರ್ ರಿಟೈರ್ಡ್ ಔಟ್ ಆದರೆ, ಮತ್ತೆ ನಡೆಯುವ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಇರುವುದಿಲ್ಲ. ಆದರೆ ರೋಹಿತ್ ಶರ್ಮಾ ಹೇಗೆ ಕ್ರೀಸ್‌ಗಿಳಿದರು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಇದಕ್ಕೆ ಉತ್ತರ, ಒಂದುವೇಳೆ ಎದುರಾಳಿ ತಂಡದ ನಾಯಕ ಅಥವಾ ಕೋಚ್ ಆ ಬ್ಯಾಟರ್ ಎರಡನೇ ಬಾರಿಗೆ ಸೂಪರ್ ಓವರ್ ಆಡಲು ತಮ್ಮ ತಕರಾರು ಇಲ್ಲ ಎಂದಾದರೇ, ಆಡಲು ಅವಕಾಶವಿರುತ್ತದೆ. ಹೀಗಾಗಿಯೇ ರೋಹಿತ್ ಶರ್ಮಾ ಮತ್ತೊಮ್ಮೆ ಕ್ರೀಸ್‌ಗಿಳಿಯಲು ಅವಕಾಶ ಸಿಕ್ಕಂತೆ ಆಯಿತು.
ಟೀಂ ಇಂಡಿಯಾ ಹೆಡ್‌ಕೋಚ್ ರಾಹುಲ್ ದ್ರಾವಿಡ್, ಈ ಕುರಿತಂತೆ ಪಂದ್ಯ ಮುಕ್ತಾಯದ ಬಳಿಕ ರವಿಚಂದ್ರನ್ ಅಶ್ವಿನ್ ಅವರ ತಂತ್ರಗಾರಿಕೆಯನ್ನು ಮೆಲುಕು ಹಾಕಿದ್ದಾರೆ. 2022ರ ಐಪಿಎಲ್‌ನ ರಾಜಸ್ಥಾನ ರಾಯಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ವೇಳೆಯಲ್ಲಿ ಇದೇ ರೀತಿಯ ತಂತ್ರಗಾರಿಕೆ ಮಾಡಿದ್ದನ್ನು ದ್ರಾವಿಡ್ ನೆನಪಿಸಿಕೊಂಡಿದ್ದಾರೆ.
ಮುದ್ದೇನಹಳ್ಳಿ ಹೊಸ ಕ್ರಿಕೆಟ್ ಸ್ಟೇಡಿಯಂ ಉದ್ಘಾಟನೆ ಇಂದು; ಉದ್ಘಾಟನಾ ಪಂದ್ಯ ಆಡಲಿರುವ ಸನ್ನಿ, ಯುವಿ, ತೆಂಡುಲ್ಕರ್
"ಇದು ಅಶ್ವಿನ್ ಅವರ ರೀತಿಯ ಆಲೋಚನೆಯಾಗಿತ್ತು. ತಮ್ಮನ್ನು ತಾವು ಹೊರಗಿಟ್ಟುಕೊಳ್ಳುವಂತೆ ಮಾಡುವುದು ಆಶ್ ಲೆವೆಲ್ ಥಿಂಕಿಂಗ್ ಆಗಿದೆ" ಎಂದು ರಾಹುಲ್ ದ್ರಾವಿಡ್ ಮುಗುಳು ನಗೆ ಬೀರಿದ್ದಾರೆ.
ರಾಹುಲ್ ದ್ರಾವಿಡ್ ಏನಂದ್ರು ನೀವೇ ಕೇಳಿ:
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.