ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ತಾರಾ ಶಟ್ಲರ್ ಪಿ.ವಿ ಸಿಂಧು ಎರಡನೆ ಸುತ್ತು ಪ್ರವೇಶಿಸಿದ್ದಾರೆ. ಇದರ ಜತೆಗೆ ಯಾವೆಲ್ಲಾ ಭಾರತದ ಶಟ್ಲರ್‌ಗಳು ಶುಭಾರಂಭ ಮಾಡಿದ್ದಾರೆ ಎನ್ನುವುದರ ವರದಿ ಇಲ್ಲಿದೆ ನೋಡಿ...
ಸಿಡ್ನಿ(ಜೂ.06): ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಸಮೀರ್ ವರ್ಮಾ ಇಲ್ಲಿ ಬುಧವಾರ ನಡೆದ ಆಸ್ಪ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೊದಲ ಸುತ್ತಿನ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಿದರು.
ವಿಶ್ವ ನಂ.5 ಸಿಂಧು ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಇಂಡೋನೇಷ್ಯಾದ ಚೊಯಿರುನ್ನಿಸಾ ವಿರುದ್ಧ 21-14, 21-9 ನೇರ ಗೇಮ್‌ಗಳಲ್ಲಿ ಜಯಿಸಿದರು. ಭಾರತೀಯ ಆಟಗಾರ್ತಿಗೆ 2ನೇ ಸುತ್ತಿನಲ್ಲಿ ಥಾಯ್ಲೆಂಡ್‌ನ ಜಿಂಡಪೊಲ್ ಎದುರಾಗಲಿದ್ದಾರೆ.
6ನೇ ಶ್ರೇಯಾಂಕಿತ ಸಮೀರ್, ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಮಲೇಷ್ಯಾದ ಲೀ ಝೀ ಜಿಯಾ ವಿರುದ್ಧ 21-15, 16-21, 21-12 ಗೇಮ್‌ಗಳಲ್ಲಿ ಗೆದ್ದರು. ಸಾಯಿ ಪ್ರಣೀತ್, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಸಹ 2ನೇ ಸುತ್ತಿಗೇರಿತು. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ ಮೊದಲ ಸುತ್ತಲ್ಲೇ ಸೋತು ಹೊರಬಿತ್ತು.