ಟೆನಿಸ್'ನಲ್ಲಿ ಹೊಸ ಪ್ರಯೋಗ; ಲೈನ್ ಅಂಪೈರ್'ಗೆ ಗೇಟ್ ಪಾಸ್..!

By Suvarna Web DeskFirst Published Sep 20, 2017, 10:03 AM IST
Highlights

ಪಂದ್ಯದ ವೇಳೆ ಯಾವುದೇ ಲೈನ್ ಅಂಪೈರ್‌'ಗಳು ಇರುವುದಿಲ್ಲ. ಅಂಕಣದಲ್ಲಿರುವ ಏಕೈಕ ಅಧಿಕಾರಿ ಎಂದರೆ ಚೇರ್ ಅಂಪೈರ್ ಮಾತ್ರ.

ಲಂಡನ್(ಸೆ.20): ಟೆನಿಸ್‌'ನಲ್ಲಿ ಲೈನ್ ಅಂಪೈರ್‌'ಗಳ ಪಾತ್ರ ಅತ್ಯಂತ ಮಹತ್ವದಾಗಿರಲಿದೆ. ಚೆಂಡು ಅಂಕಣದೊಳಗೆ ಬಿತ್ತೋ ಇಲ್ಲಾ ಹೊರಗೆ ಬಿತ್ತೋ ಎಂದು ನಿರ್ಧರಿಸುವ ಲೈನ್ ಅಂಪೈರ್‌'ಗಳ ತೀರ್ಪಿನ ಮೇಲೆ ಪಂದ್ಯಗಳ ಫಲಿತಾಂಶಗಳು ನಿರ್ಧಾರವಾಗಲಿದೆ. ಆದರೆ ಟೆನಿಸ್ ವೃತ್ತಿಪರರ ಸಂಸ್ಥೆ(ಎಟಿಪಿ) ಲೈನ್ ಅಂಪೈರ್‌'ಗಳನ್ನೇ ತೆಗೆದುಹಾಕಲು ನಿರ್ಧರಿಸಿದೆ.

ಇದೇ ನವೆಂಬರ್‌'ನಲ್ಲಿ ಇಟಲಿಯ ಮಿಲಾನ್‌'ನಲ್ಲಿ ನಡೆಯಲಿರುವ ಎಟಿಪಿ ನೆಕ್ಸ್ಟ್ ಜೆನ್ ಟೆನಿಸ್ ಪಂದ್ಯಾವಳಿಯಲ್ಲಿ ಸಂಪೂರ್ಣ ತಂತ್ರಜ್ಞಾನದ ಸಹಾಯದಿಂದ ಲೈನ್ ಕರೆಗಳನ್ನು ನೀಡಲಾಗುತ್ತದೆ ಎಂದು ಎಟಿಪಿ ತಿಳಿಸಿದೆ. ಇದಕ್ಕಾಗಿ ಹಾಕ್-ಐ ತಂತ್ರಜ್ಞಾನ ಬಳಕೆ ಮಾಡಲಾಗುತ್ತದೆ. ‘ಹಾಕ್-ಐ ಲೈವ್’ ಎಂದು ಈ ತಂತ್ರಜ್ಞಾನಕ್ಕೆ ಹೆಸರಿಡಲಾಗಿದ್ದು, ಪಂದ್ಯದ ವೇಳೆ ಯಾವುದೇ ಲೈನ್ ಅಂಪೈರ್‌'ಗಳು ಇರುವುದಿಲ್ಲ. ಅಂಕಣದಲ್ಲಿರುವ ಏಕೈಕ ಅಧಿಕಾರಿ ಎಂದರೆ ಚೇರ್ ಅಂಪೈರ್ ಮಾತ್ರ. ಹಾಕ್-ಐ ಬಳಕೆಯಾಗುವುದರಿಂದ ಸದ್ಯ ಚಾಲ್ತಿಯಲ್ಲಿರುವ ಅಂಪೈರ್ ತೀರ್ಪು ಮೇಲ್ಮನವಿ ಪದ್ಧತಿಯನ್ನು ಸಹ ನಿಲ್ಲಿಸಲಾಗುತ್ತಿದೆ. ಪ್ರತಿ ಬಾರಿ ‘ಹಾಕ್-ಐ’ ನೀಡುವ ತೀರ್ಪನ್ನು ದೊಡ್ಡ ಪರದೆ ಮೇಲೆ ಬಿತ್ತರಿಸಲಾಗುತ್ತದೆ. ಕೇವಲ ಚೆಂಡಿನ ದಿಕ್ಕು ಮಾತ್ರವಲ್ಲ, ಆಟಗಾರರು ಸರ್ವ್ ಮಾಡುವಾಗ ಬೇಸ್ ಲೈನ್ ತುಳಿದಿದ್ದಾರೆಯೇ ಎನ್ನುವುದನ್ನು ಸಹ ಹಾಕ್-ಐ ಮೂಲಕ ಪತ್ತೆ ಮಾಡಲಾಗುತ್ತದೆ. ಕಂಟ್ರೋಲ್ ರೂಮ್'ನಲ್ಲಿರುವ ಅಧಿಕಾರಿಗಳು ‘ಹಾಕ್-ಐ ಲೈವ್’ ವ್ಯವಸ್ಥೆಯನ್ನು ನಿರ್ವಹಣೆ ಮಾಡಲಿದ್ದಾರೆ.

ಅಂಕ ಪದ್ದತಿಯಲ್ಲೂ ಬದಲಾವಣೆ:

ನೆಕ್ಸ್ಟ್ ಜೆನ್ ಪಂದ್ಯಾವಳಿಯಲ್ಲಿ ನೂತನ ಮಾದರಿಯ ಅಂಕ ಪದ್ಧತಿಯನ್ನೂ ಸಹ ಅಳವಡಿಸಲಾಗುತ್ತಿದೆ. ಪಂದ್ಯಗಳು 5 ಸೆಟ್ ನಡೆಯಲಿದ್ದು, ಯಾರು ವೇಗವಾಗಿ 4 ಗೇಮ್'ಗಳನ್ನು ಗೆಲ್ಲುತ್ತಾರೆ ಎನ್ನುವುದರ ಮೇಲೆ ಸೆಟ್ ನಿರ್ಧಾರವಾಗಲಿದೆ. ತಲಾ 3 ಗೇಮ್‌'ಗಳಿಂದ ಆಟಗಾರರು ಸಮಬಲ ಸಾಧಿಸಿದಲ್ಲಿ ಫಲಿತಾಂಶಕ್ಕಾಗಿ ಟೈ ಬ್ರೇಕರ್ ಮೊರೆ ಹೋಗಲಾಗುತ್ತದೆ.

ಮತ್ತೊಂದು ಮಹತ್ವದ ನಿರ್ಧಾರವೆಂದರೆ ‘ಅಡ್ವಾಂಟೇಜ್’ ಅಂಕವನ್ನು ತೆಗೆದು ಹಾಕಲಾಗುತ್ತಿದೆ. ಅಲ್ಲದೇ ಪ್ರತಿ ಅಂಕದ ನಡುವೆ ಆಟಗಾರರಿಗೆ ಕೇವಲ 25 ಸೆಕೆಂಡ್‌'ಗಳ ಸಮಯ ಮಾತ್ರ ಸಿಗಲಿದೆ. ಪಂದ್ಯದಲ್ಲಿ ಒಬ್ಬ ಆಟಗಾರ ಕೇವಲ 1 ನಿಮಿಷ ಮಾತ್ರ ವೈದ್ಯಕೀಯ ವಿರಾಮ ತೆಗೆದುಕೊಳ್ಳಬಹುದು. ಜತೆಗೆ ಪಂದ್ಯದ ಮಧ್ಯೆಯೇ ಆಟಗಾರರು ತಮ್ಮ ಕೋಚ್'ಗಳೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಲಾಗುತ್ತಿದೆ.

click me!