
ಹಾಂಗ್‌ಝೋ(ಅ.25): ನೂರು ಪದಕಗಳ ಗುರಿಯೊಂದಿಗೆ ಚೀನಾದ ಹಾಂಗ್‌ಝೋ ನಗರಕ್ಕೆ ತೆರಳಿರುವ ಭಾರತದ ಪ್ಯಾರಾ ಕ್ರೀಡಾಪಟುಗಳು ಪದಕ ಬೇಟೆಯನ್ನು ಭರ್ಜರಿಯಾಗಿಯೇ ಆರಂಭಿಸಿದ್ದಾರೆ. 4ನೇ ಆವೃತ್ತಿ ಕ್ರೀಡಾಕೂಟದ ಮೊದಲ ದಿನವಾದ ಸೋಮವಾರ ಬರೋಬ್ಬರಿ 17 ಪದಕ ಬಾಚಿದ್ದ ಭಾರತ, ಮಂಗಳವಾರವೂ ಅಷ್ಟೇ ಸಂಖ್ಯೆಯ ಪದಕಗಳನ್ನು ಖಾತೆಗೆ ಸೇರ್ಪಡೆಗೊಳಿಸಿತು. ಸದ್ಯ ಭಾರತ ಒಟ್ಟಾರೆ 9 ಚಿನ್ನ ಸೇರಿ 34 ಪದಕ ಗೆದ್ದಿದ್ದು, ಪದಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
ನವ ಬಂಗಾರ: ಮೊದಲ ದಿನ 6 ಚಿನ್ನ ಗೆದ್ದಿದ್ದ ಭಾರತ ಮಂಗಳವಾರ ಮತ್ತೆ 3 ಚಿನ್ನ ಪಡೆಯಿತು. ಪುರುಷರ ಕ್ಲಬ್ ಥ್ರೋ-ಎಫ್51 ವಿಭಾಗದಲ್ಲಿ ಪ್ರಣವ್, ಪುರುಷರ ಹೈಜಂಪ್ ಟಿ63 ವಿಭಾಗದಲ್ಲಿ ಶೈಲೇಶ್ ಕುಮಾರ್, ಹೈಜಂಪ್ ಟಿ47 ಸ್ಪರ್ಧೆಯಲ್ಲಿ ನಿಶಾದ್ ಕುಮಾರ್, ಹೈಜಂಪ್ ಟಿ64 ವಿಭಾಗದಲ್ಲಿ ಪ್ರವೀಣ್ ಕುಮಾರ್ ಚಿನ್ನ ಗೆದ್ದರು. 500 ಮೀ. ಓಟದ ಟಿ11 ವಿಭಾಗದಲ್ಲಿ ಅಂಕುರ್ ಧರ್ಮ, ಮಹಿಳೆಯರ 10 ಮೀ. ಏರ್ ರೈಫಲ್ ಎಸ್‌ಎಚ್1 ವಿಭಾಗದಲ್ಲಿ ಅವನಿ ಲೇಖರಾ ಬಂಗಾರದ ಪದಕಕ್ಕೆ ಮುತ್ತಿಟ್ಟರು.
ICC World Cup 2023: ಹರಿಣ ಆರ್ಭಟಕ್ಕೆ ಬಾಂಗ್ಲಾ ತತ್ತರ!
ಇನ್ನು, 2ನೇ ದಿನ ಕೆನೋ ಮಹಿಳೆಯರ ಕೆಎಲ್ 2 ವಿಭಾಗದಲ್ಲಿ ಪ್ರಾಚಿ ಯಾದವ್, ಮಹಿಳೆಯರ 400 ಮೀ. ಟಿ20 ವಿಭಾಗದಲ್ಲಿ ದೀಪ್ತಿ ಜೀವಾಂಜಿ, ಪುರುಷರ ಡಿಸ್ಕಸ್ ಎಸೆತದ ಎಫ್54/56 ವಿಭಾಗದಲ್ಲಿ ನೀರಜ್ ಯಾದವ್ ಸ್ವರ್ಣ ಸಾಧನೆ ಮಾಡಿದರು. ಇದೇ ವೇಳೆ ಪುರುಷರ 5000 ಮೀ. ಟಿ13 ವಿಭಾಗದಲ್ಲಿ ಶರತ್ ಶಂಕರಪ್ಪ ಚಿನ್ನ ಗೆದ್ದರೂ, ಸ್ಪರ್ಧೆಯಲ್ಲಿ ಕೇವಲ ಇಬ್ಬರೇ ಇದ್ದ ಕಾರಣ ಪದಕವನ್ನು ಪರಿಗಣಿಸಲಿಲ್ಲ.
ಕ್ಲೀನ್‌ಸ್ವೀಪ್: ಇನ್ನು ಪುರುಷರ ಡಿಸ್ಕಸ್ ಎಸೆತ ಎಫ್54/56 ವಿಭಾಗದಲ್ಲಿ ಭಾರತ ಕ್ಲೀನ್‌ಸ್ವೀಪ್ ಸಾಧಿಸಿತು. ನೀರಜ್ ಚಿನ್ನ ಗೆದ್ದರೆ, ಯೋಗೇಶ್ ಕಥುನಿಯಾ ಹಾಗೂ ಮುತ್ತುರಾಜ ಕ್ರಮವಾಗಿ ಬೆಳ್ಳಿ, ಕಂಚು ಜಯಿಸಿದರು.
ಭಾರತ ಸದ್ಯ 12 ಬೆಳ್ಳಿ ಹಾಗೂ 13 ಕಂಚಿನ ಪದಕಗಳನ್ನೂ ತನ್ನದಾಗಿಸಿಕೊಂಡಿದೆ. ಸೋಮವಾರ 6 ಬೆಳ್ಳಿ, 5 ಕಂಚು ಲಭಿಸಿದ್ದರೆ, ಮಂಗಳವಾರ 6 ಬೆಳ್ಳಿ, 8 ಕಂಚು ಜಯಿಸಿದೆ. ಅಂಕಪಟ್ಟಿಯಲ್ಲಿ ಸದ್ಯ ಚೀನಾ 67 ಚಿನ್ನ ಸೇರಿ 165 ಪದಕಗೊಂದಿಗೆ ಅಗ್ರಸ್ಥಾನದಲ್ಲಿದೆ.
ಏಕದಿನ ವಿಶ್ವಕಪ್‌ನಲ್ಲಿ 3ನೇ ಶತಕ ಚಚ್ಚಿದ ಕ್ವಿಂಟನ್ ಡಿ ಕಾಕ್..! ಹೊಸ ದಾಖಲೆ ಬರೆದ ಓಪನ್ನರ್
2014ರ ದಾಖಲೆ ಪತನ!
ಭಾರತ 2014ರ ಪ್ಯಾರಾ ಏಷ್ಯಾಡ್‌ನಲ್ಲಿ 3 ಚಿನ್ನ ಸೇರಿ 33 ಪದಕ ಗೆದ್ದಿತ್ತು. ಅದನ್ನು ಈ ಬಾರಿ ಎರಡೇ ದಿನದಲ್ಲಿ ಹಿಂದಿಕ್ಕಿದೆ. 2018ರಲ್ಲಿ 72 ಪದಕ ಗೆದ್ದಿದ್ದ ಭಾರತ, ಈ ಬಾರಿ 100ರ ನಿರೀಕ್ಷೆಯಲ್ಲಿದೆ. ಕ್ರೀಡಾಕೂಟ ಇನ್ನೂ 4 ದಿನ ಬಾಕಿ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.