ICC World Cup 2023: ಹರಿಣ ಆರ್ಭಟಕ್ಕೆ ಬಾಂಗ್ಲಾ ತತ್ತರ!

By Kannadaprabha News  |  First Published Oct 25, 2023, 10:14 AM IST

ಮೊದಲು ಬ್ಯಾಟ್‌ ಮಾಡಿದ ಆಫ್ರಿಕನ್ನರು 50 ಓವರಲ್ಲಿ 5 ವಿಕೆಟ್‌ಗೆ 382 ರನ್‌ ಕಲೆಹಾಕಿತು. ತಂಡಕ್ಕಿದು ಟೂರ್ನಿಯಲ್ಲಿ 4ನೇ 300+ ಸ್ಕೋರ್‌. ದೊಡ್ಡ ಮೊತ್ತ ನೋಡಿಯೆ ಕಂಗಾಲಾದ ಬಾಂಗ್ಲಾದೇಶ ಮಹ್ಮೂದುಲ್ಲಾ ಹೋರಾಟದ ಹೊರತಾಗಿಯೂ 46.4 ಓವರ್‌ಗಳಲ್ಲಿ 233 ರನ್‌ಗೆ ಸರ್ವಪತನ ಕಂಡಿತು.


ಮುಂಬೈ(ಅ.25): ಈ ಬಾರಿ ವಿಶ್ವಕಪ್‌ನಲ್ಲಿ ದ.ಆಫ್ರಿಕಾದ ಅಬ್ಬರಕ್ಕೆ ಬ್ರೇಕ್‌ ಹಾಕುವವರ್ಯಾರು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗುವ ಲಕ್ಷಣ ಕಂಡುಬರುತ್ತಿಲ್ಲ. ಮತ್ತೆ ತನ್ನ ಎಂದಿನ ಸ್ಫೋಟಕ ಬ್ಯಾಟಿಂಗ್‌ ಮೂಲಕ ಆರ್ಭಟಿಸಿದ ಆಫ್ರಿಕಾ, ಮಂಗಳವಾರ ಬಾಂಗ್ಲಾದೇಶ ವಿರುದ್ಧ 149 ರನ್‌ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಹರಿಣ ಪಡೆ 4ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ಬಾಂಗ್ಲಾ 4ನೇ ಸೋಲಿನ ಮುಖಭಂಗಕ್ಕೊಳಗಾಯಿತು.

ಮೊದಲು ಬ್ಯಾಟ್‌ ಮಾಡಿದ ಆಫ್ರಿಕನ್ನರು 50 ಓವರಲ್ಲಿ 5 ವಿಕೆಟ್‌ಗೆ 382 ರನ್‌ ಕಲೆಹಾಕಿತು. ತಂಡಕ್ಕಿದು ಟೂರ್ನಿಯಲ್ಲಿ 4ನೇ 300+ ಸ್ಕೋರ್‌. ದೊಡ್ಡ ಮೊತ್ತ ನೋಡಿಯೆ ಕಂಗಾಲಾದ ಬಾಂಗ್ಲಾದೇಶ ಮಹ್ಮೂದುಲ್ಲಾ ಹೋರಾಟದ ಹೊರತಾಗಿಯೂ 46.4 ಓವರ್‌ಗಳಲ್ಲಿ 233 ರನ್‌ಗೆ ಸರ್ವಪತನ ಕಂಡಿತು.

Tap to resize

Latest Videos

ದ.ಆಫ್ರಿಕಾದ ವೇಗಿಗಳನ್ನು ಎದುರಿಸಲು ಆರಂಭದಲ್ಲೇ ಪರದಾಡಿದ ಬಾಂಗ್ಲಾ 15 ಓವರ್‌ ವೇಳೆಗೇ 58ಕ್ಕೆ 5 ವಿಕೆಟ್‌ ಕಳೆದುಕೊಂಡಿತು. ಇನ್ನೇನು 200ಕ್ಕೂ ಮೊದಲೇ ಆಲೌಟಾಗುತ್ತೆ ಎಂದುಕೊಂಡಾಗ ಮಹ್ಮೂದುಲ್ಲಾ ದ.ಆಫ್ರಿಕಾ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ ಕ್ರೀಸ್‌ನಲ್ಲಿ ನೆಲೆಯೂರಿದರು. ಏಕಾಂಗಿ ಹೋರಾಟ ನಡೆಸಿದ ಮಹ್ಮೂದುಲ್ಲಾ 111 ಎಸೆತಗಳಲ್ಲಿ 111 ರನ್‌ ಸಿಡಿಸಿ, ತಂಡದ ಸೋಲಿನ ಅಂತರ ಕಡಿಮೆ ಮಾಡಿದರು. ಕೋಟ್ಜೀ 3, ಯಾನ್ಸನ್‌, ರಬಾಡ, ವಿಲಿಯಮ್ಸ್‌ ತಲಾ 2 ವಿಕೆಟ್‌ ಕಿತ್ತರು.

ಡಿ ಕಾಕ್‌ 3ನೇ ಶತಕ: ಶತಕ ಮತ್ತು 300+ ರನ್‌ ಹೊಡೆಯುವುದೇ ಕರಗತ ಮಾಡಿಕೊಂಡಂತಿರುವ ಆಫ್ರಿಕಾ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಬಾಂಗ್ಲಾ ಬೌಲರ್‌ಗಳಿಗೂ ಸಾಧ್ಯವಾಗಲಿಲ್ಲ. ಟೂರ್ನಿಯಲ್ಲಿ 3ನೇ ಶತಕ ಸಿಡಿಸಿದ ಡಿ ಕಾಕ್‌ 140 ಎಸೆತಗಳಲ್ಲಿ 15 ಬೌಂಡರಿ, 7 ಸಿಕ್ಸರ್‌ನೊಂದಿಗೆ 174 ರನ್‌ ಸಿಡಿಸಿ ದ್ವಿಶತಕದಿಂದ ವಂಚಿತರಾದರು. ನಾಯಕ ಮಾರ್ಕ್‌ರಮ್‌ 60ಕ್ಕೆ ವಿಕೆಟ್‌ ಒಪ್ಪಿಸಿದರೆ, ಕ್ಲಾಸೆನ್‌(90) ಮತ್ತೆ ಅಬ್ಬರಿಸಿ ಟೂರ್ನಿಯ 2ನೇ ಶತಕ ಮಿಸ್‌ ಮಾಡಿಕೊಂಡರು. ಮಿಲ್ಲರ್‌ 15 ಎಸೆತಗಳಲ್ಲಿ 34 ರನ್‌ ಚಚ್ಚಿದರು. ಕೊನೆ 13 ಓವರಲ್ಲಿ ತಂಡ 174 ರನ್‌ ಸಿಡಿಸಿತು.

ಸ್ಕೋರ್‌: ದ.ಆಫ್ರಿಕಾ 50 ಓವರಲ್ಲಿ 382/5(ಡಿ ಕಾಕ್‌ 174, ಕ್ಲಾಸೆನ್‌ 90, ಹಸನ್‌ 2-67)
ಬಾಂಗ್ಲಾ 46.4 ಓವರಲ್ಲಿ 233/10 (ಮಹ್ಮೂದುಲ್ಲಾ 111, ಕೋಟ್ಜೀ 3-62) ಪಂದ್ಯಶ್ರೇಷ್ಠ: ಕ್ವಿಂಟನ್‌ ಡಿ ಕಾಕ್‌.

ಟರ್ನಿಂಗ್‌ ಪಾಯಿಂಟ್‌

ಡಿ ಕಾಕ್‌, ಕ್ಲಾಸೆನ್‌ರನ್ನು ಕ್ರೀಸ್‌ನಲ್ಲಿ ನೆಲೆಯೂರಲು ಬಿಟ್ಟ ಬಾಂಗ್ಲಾ ಬೌಲರ್‌ಗಳು ಡೆತ್‌ ಬೌಲಿಂಗ್‌ನಲ್ಲಿ ವಿಪರೀತ ಎಂಬಂತೆ ದುಬಾರಿಯಾದರು. ದೊಡ್ಡ ಮೊತ್ತ ಬೆನ್ನತ್ತುವಾಗ ಬೇಕಾದ ಉತ್ತಮ ಆರಂಭವೂ ಬಾಂಗ್ಲಾಕ್ಕೆ ಸಿಗಲಿಲ್ಲ. ಆರಂಭದಲ್ಲೇ ಸತತ ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖಮಾಡಿತು.

ದ.ಆಫ್ರಿಕಾಕ್ಕೆ ಮುಂದಿನ ಪಂದ್ಯ

ಅ.27ಕ್ಕೆ ಪಾಕ್‌ ವಿರುದ್ಧ, ಚೆನ್ನೈ

ಬಾಂಗ್ಲಾದೇಶಕ್ಕೆ ಮುಂದಿನ ಪಂದ್ಯ

ಅ.28ಕ್ಕೆ ನೆದರ್‌ಲೆಂಡ್ಸ್‌ ವಿರುದ್ಧ, ಕೋಲ್ಕತಾ
 

click me!