ಏಷ್ಯನ್ ಗೇಮ್ಸ್‌ನಲ್ಲೂ ರಾಜಕೀಯ ಬೆರೆಸಿದ ಚೀನಾ
ಅರುಣಾಚಲ ಪ್ರದೇಶ ಮೂಲದ ವುಶು ಪಟುಗಳಿಗೆ ಚೀನಾ ವೀಸಾ ನಿರಾಕರಣೆ
ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡ ಭಾರತದ ವುಶು ಪಟುಗಳು
ನವದೆಹಲಿ(ಸೆ.23): ಭಾರತದ ಅರುಣಾಚಲ ಪ್ರದೇಶದ ಮೂವರು ವುಶು ಪಟುಗಳಿಗೆ ಚೀನಾ ವೀಸಾ ನಿರಾಕರಿಸಿದ್ದು, ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ. ಚೀನಾದ ಈ ನಡೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಚೀನಾ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಅರುಣಾಚಲ ತನ್ನ ದೇಶಕ್ಕೆ ಸೇರಬೇಕು ಎಂದು ಪ್ರತಿಪಾದಿಸುವ ಚೀನಾ, ರಾಜತಾಂತ್ರಿಕ ವಿಚಾರವನ್ನು ಕ್ರೀಡೆಯೊಂದಿಗೆ ಬೆರೆಸಿರುವುದಕ್ಕೆ ಕ್ರೀಡಾಭಿಮಾನಿಗಳಿಂದ ಭಾರಿ ಟೀಕೆ ವ್ಯಕ್ತವಾಗಿದೆ.
ಅರುಣಾಚಲ ಪ್ರದೇಶ ಮೂಲದ ನೈಮನ್ ವ್ಯಾಂಗ್‌ಶೂ, ಓನಿಲ್ ತೆಗಾ ಹಾಗೂ ಮೆಪುಂಗ್ ಲಮ್ಗೂ ಈ ಮೂವರು ಇದೀಗ ಹಾಂಗ್‌ಝೋನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತರಾಗಿದ್ದಾರೆ.
undefined
ವಾಲಿಬಾಲ್: ಭಾರತ ಕ್ವಾರ್ಟರ್‌ಗೆ
ಹಾಂಗ್‌ಝೋ: ಏಷ್ಯನ್ ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ಮುಂದುವರಿಸಿರುವ ಭಾರತ ಪುರುಷರ ವಾಲಿಬಾಲ್ ತಂಡ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಶುಕ್ರವಾರ ಅಂತಿಮ-12ರ ನಾಕೌಟ್ ಪಂದ್ಯದಲ್ಲಿ ವಿಶ್ವ ನಂ.73 ಭಾರತ ತಂಡ, 2018ರ ಕಂಚು ವಿಜೇತ, ವಿಶ್ವ ರ್‍ಯಾಂಕಿಂಗ್‌ನಲ್ಲಿ 43ನೇ ಸ್ಥಾನದಲ್ಲಿರುವ ಚೈನೀಸ್ ತೈಪೆ ವಿರುದ್ಧ 3-0 (25-22, 25-22, 25-21) ಸೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮೊದಲೆರಡು ಪಂದ್ಯಗಳಲ್ಲಿ ಭಾರತ ತಂಡ ಕಾಂಬೋಡಿಯಾ ಹಾಗೂ ಬಲಿಷ್ಠ ದಕ್ಷಿಣ ಕೊರಿಯಾಕ್ಕೆ ಆಘಾತ ನೀಡಿತ್ತು. ಕ್ವಾರ್ಟರ್‌ನಲ್ಲಿ ಭಾರತಕ್ಕೆ ಭಾನುವಾರ ವಿಶ್ವ ನಂ.5 ಜಪಾನ್ ಸವಾಲು ಎದುರಾಗಲಿದೆ.
ಏಷ್ಯಾಡ್‌ನಲ್ಲಿ ಭಾರತದ ಸಾಧನೆ ಏನು? 40 ವರ್ಷಗಳಿಂದ ಭಾರತಕ್ಕೆ ಆತಿಥ್ಯದ ಹಕ್ಕು ಸಿಕ್ಕಿಲ್ಲವೇಕೆ?
ರೋಯಿಂಗ್: ಭಾರತದ ಬಾಲ್‌ರಾಜ್ ಫೈನಲ್‌ಗೆ
ರೋಯಿಂಗ್ ಸ್ಪರ್ಧೆಯಲ್ಲಿ ಭಾರತದ ಮತ್ತೊಬ್ಬ ಕ್ರೀಡಾಪಟು ಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ಪುರುಷರ ಸ್ಕಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಬಾಲ್‌ರಾಜ್ ಪನ್ವಾರ್ ಗೆಲುವು ಸಾಧಿಸಿದರು. ಸೆಮೀಸ್‌ನಲ್ಲಿ ಅವರು 7 ನಿಮಿಷ 22.22 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 3ನೇ ಸ್ಥಾನ ಪಡೆದರು. ಈಗಾಗಲೇ ಕ್ವಾಡ್ರಾಪಲ್, ಲೈಟ್‌ವೇಟ್ ಡಬಲ್ ಸ್ಕಲ್ಸ್, ಪುರುಷರ ಡಬಲ್ ಸ್ಕಲ್ಸ್ ಸೇರಿದಂತೆ ವಿವಿಧ 8 ವಿಭಾಗಗಳಲ್ಲಿ ಭಾರತೀಯರು ಫೈನಲ್‌ಗೇರಿದ್ದಾರೆ.
ಟಿಟಿ: ಭಾರತ ತಂಡಗಳಿಗೆ ಜಯ
ಟೇಬಲ್ ಟೆನಿಸ್‌ನಲ್ಲಿ ಭಾರತ ಪುರುಷ, ಮಹಿಳಾ ತಂಡಗಳು ಶುಭಾರಂಭ ಮಾಡಿವೆ. ಶುಕ್ರವಾರ ತಂಡ ವಿಭಾಗದ ‘ಎಫ್’ ಗುಂಪಿನ ಪಂದ್ಯದಲ್ಲಿ ಪುರುಷರ ತಂಡ ಮೊದಲು ಯೆಮೆನ್ ವಿರುದ್ಧ 3-0ಯಲ್ಲಿ ಗೆದ್ದರೆ, ಆ ಬಳಿಕ ಸಿಂಗಾಪುರವನ್ನು 3-1ರಲ್ಲಿ ಸೋಲಿಸಿತು. ಮಹಿಳಾ ತಂಡವು ‘ಎಫ್’ ಗುಂಪಿನ ಮೊದಲ ಪಂದ್ಯದಲ್ಲಿ ಸಿಂಗಾಪುರ ವಿರುದ್ಧ 3-2ರ ಜಯ ಸಾಧಿಸಿತು. ಪುರುಷರ ತಂಡಕ್ಕೆ ಮುಂದಿನ ಪಂದ್ಯದಲ್ಲಿ ತಜಿಕಿಸ್ತಾನ ಎದುರಾಗಲಿದ್ದು, ಮಹಿಳಾ ತಂಡ ನೇಪಾಳ ವಿರುದ್ಧ ಆಡಲಿದೆ.
ಏಷ್ಯನ್ ಗೇಮ್ಸ್ ಅನಾವರಣಕ್ಕೆ ಕ್ಷಣಗಣನೆ! ಮೈನವಿರೇಳಿಸಲಿದೆ ಉದ್ಘಾಟನಾ ಸಮಾರಂಭ!
ಏಷ್ಯಾಡ್ ಕ್ರಿಕೆಟ್ ತಂಡಕ್ಕೆ ಕರ್ನಾಟಕ ವಿರುದ್ಧ ಸೋಲು!
ಬೆಂಗಳೂರು: ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ಕ್ರಿಕೆಟ್ ತಂಡ ಶುಕ್ರವಾರ ಇಲ್ಲಿನ ಆಲೂರು ಮೈದಾನದಲ್ಲಿ ಕರ್ನಾಟಕ ವಿರುದ್ಧ ಅಭ್ಯಾಸ ಪಂದ್ಯವನ್ನಾಡಿತು. ಈ ಪಂದ್ಯದಲ್ಲಿ ರಾಜ್ಯ ತಂಡ 6 ವಿಕೆಟ್ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ ಇಲೆವೆನ್ 20 ಓವರಲ್ಲಿ 133 ರನ್‌ಗೆ ಆಲೌಟ್ ಆಯಿತು. ಮನೋಜ್ ಭಾಂಡ್ಗೆ 4 ಓವರಲ್ಲಿ 15 ರನ್‌ಗೆ 4 ವಿಕೆಟ್ ಕಿತ್ತರೆ, ವಾಸುಕಿ ಕೌಶಿಕ್ ಹಾಗೂ ಶುಭಾಂಗ್ ಹೆಗ್ಡೆ ತಲಾ 3 ವಿಕೆಟ್ ಕಬಳಿಸಿದರು. ಕರ್ನಾಟಕ 4 ವಿಕೆಟ್ ಕಳೆದುಕೊಂಡು ಇನ್ನೂ 5 ಎಸೆತ ಬಾಕಿ ಇರುವಂತೆ ಜಯಿಸಿತು. ಮನೀಶ್ ಪಾಂಡೆ 40 ಎಸೆತದಲ್ಲಿ 52 ರನ್ ಸಿಡಿಸಿದರು. ಭಾರತ ತಂಡ ಸೋಮವಾರ ಚೀನಾಕ್ಕೆ ಪ್ರಯಾಣಿಸಲಿದೆ.