ರಾಜಕೀಯ ಕಾರಣಗಳಿಂದ ಭಾರತದಲ್ಲಿ ಕ್ರೀಡೆಗೆ ಅಷ್ಟಾಗಿ ಪ್ರೋತ್ಸಾಹ, ಮಹತ್ವವೂ ಇರಲಿಲ್ಲ ಎಂದು ಹಲವು ಮಾಜಿ ಅಥ್ಲೀಟ್‌ಗಳು ನೋವಿನಿಂದ ನುಡಿದಿರುವುದನ್ನು ಕೇಳಿದ್ದೇವೆ. 1986ರಿಂದ 1998ರ ವರೆಗಿನ 4 ಏಷ್ಯನ್ ಗೇಮ್ಸ್‌ಗಳಲ್ಲಿ ಭಾರತ ಒಟ್ಟು ಗೆದ್ದಿದ್ದು 17 ಚಿನ್ನದ ಪದಕಗಳನ್ನು ಮಾತ್ರ. ಈ ಅಂಕಿ-ಅಂಶವೇ ದೇಶದಲ್ಲಿ ಕ್ರೀಡೆಗಿದ್ದ ಪ್ರೋತ್ಸಾಹ ಎಂತದ್ದು ಎನ್ನುವುದಕ್ಕೆ ಸಾಕ್ಷಿ.
ಹಾಂಗ್ಝೂ(ಸೆ.23): ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಸಾಧನೆ ಏನು?, ದೇಶ ಈವರೆಗೆ ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದ ಪದಕಗಳೆಷ್ಟು?, ಭಾರತ ಈ ಹಿಂದೆ ಎಷ್ಟು ಬಾರಿ ಈ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಟಾಪ್ 10 ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟುಗಳು ಯಾರು? ಹೀಗೆ ಹಲವು ಪ್ರಶ್ನೆಗಳು ಮೂಡುವುದು ಸಹಜ. ಅವುಗಳಿಗೆ ಉತ್ತರ ಇಲ್ಲಿದೆ ನೋಡಿ
ಏಷ್ಯಾಡ್‌ಗೆ ಭಾರತ ಎರಡು ಬಾರಿ ಆತಿಥ್ಯ!
ಏಷ್ಯನ್ ಗೇಮ್ಸ್ ಆರಂಭಿಸುವಲ್ಲಿ ಭಾರತದ ಪಾತ್ರವೂ ಮಹತದ್ದಾಗಿದೆ. ಏಷ್ಯನ್ ಗೇಮ್ಸ್ ಫೆಡರೇಶನ್‌ನ 5 ಸ್ಥಾಪಕ ರಾಷ್ಟ್ರಗಳ ಪೈಕಿ ಭಾರತ ಸಹ ಒಂದು. 1951ರಲ್ಲಿ ಚೊಚ್ಚಲ ಏಷ್ಯನ್ ಗೇಮ್ಸ್ ಭಾರತದಲ್ಲೇ ನಡೆದಿತ್ತು ಎನ್ನುವುದು ವಿಶೇಷ. ರಾಷ್ಟ್ರ ರಾಜಧಾನಿ ನವದೆಹಲಿ ಕೂಟಕ್ಕೆ ಆತಿಥ್ಯ ವಹಿಸಿತ್ತು. 11 ರಾಷ್ಟ್ರಗಳ 489 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಭಾರತ 15 ಚಿನ್ನ ಸೇರಿ ಒಟ್ಟು 51 ಪದಕ ಜಯಿಸಿ, ಪದಕ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿತ್ತು. ಆ ಬಳಿಕ ಭಾರತ 1982ರಲ್ಲಿ ಮತ್ತೊಮ್ಮೆ ‘ಮಿನಿ ಒಲಿಂಪಿಕ್ಸ್’ ಖ್ಯಾತಿಯ ಏಷ್ಯನ್ ಗೇಮ್ಸ್‌ಗೆ ಆತಿಥ್ಯ ನೀಡಿತು. ಆಗಲೂ ನವದೆಹಲಿಯಲ್ಲೇ ಕ್ರೀಡಾಕೂಟ ಆಯೋಜನೆಗೊಂಡಿತ್ತು. 33 ದೇಶಗಳ 4500ಕ್ಕೂ ಅಧಿಕ ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಭಾರತ 13 ಚಿನ್ನ ಸೇರಿ ಒಟ್ಟು 57 ಪದಕ ಗೆದ್ದು, ಪದಕ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿತ್ತು.
Asian Games 2023: ಮತ್ತೆ ಬಂತು ಮಿನಿ ಒಲಿಂಪಿಕ್ಸ್..!
40 ವರ್ಷಗಳಿಂದ ಭಾರತಕ್ಕೆ ಸಿಕ್ಕಿಲ್ಲ ಆತಿಥ್ಯ ಹಕ್ಕು ಏಕೆ?
ಭಾರತ ಏಷ್ಯನ್ ಗೇಮ್ಸ್ ಫೆಡರೇಶನ್‌ನ ಸ್ಥಾಪಕ ರಾಷ್ಟ್ರಗಳಲ್ಲಿ ಒಂದಾದರೂ, ಕಳೆದ 4 ದಶಕಗಳಿಂದ ಭಾರತಕ್ಕೆ ಆತಿಥ್ಯ ಹಕ್ಕು ಸಿಕ್ಕಿಲ್ಲ. ಇದಕ್ಕೆ ಪ್ರಮುಖ ಕಾರಣ ಮೂಲಸೌಕರ್ಯಗಳ ಕೊರತೆ. ಭಾರತದಲ್ಲಿ ಏಷ್ಯನ್ ಗೇಮ್ಸ್‌ನಂತಹ ದೊಡ್ಡ ಕ್ರೀಡಾಕೂಟಗಳನ್ನು ಆಯೋಜಿಸಲು ಗುಣಮಟ್ಟದ ಕ್ರೀಡಾಂಗಣಗಳ ಕೊರತೆ ಇದೆ. ಅಥ್ಲೆಟಿಕ್ಸ್, ಫುಟ್ಬಾಲ್‌ನಂತಹ ಕ್ರೀಡೆಗಳನ್ನು ನಡೆಸಲು ಸಮಸ್ಯೆ ಇಲ್ಲವಾದರೂ, ಸೈಕ್ಲಿಂಗ್ ಸ್ಪರ್ಧೆಗಳಿಗೆ ಬೇಕಿರುವ ವೆಲ್‌ಡ್ರೋಮ್, ಒಲಿಂಪಿಕ್ಸ್ ಗುಣಮಟ್ಟದ ಈಜುಕೊಳ ಸೇರಿ ಇನ್ನೂ ಅನೇಕ ಕ್ರೀಡೆಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಿರಲಿಲ್ಲ. ರಾಜಕೀಯ ಕಾರಣಗಳಿಂದ ಭಾರತದಲ್ಲಿ ಕ್ರೀಡೆಗೆ ಅಷ್ಟಾಗಿ ಪ್ರೋತ್ಸಾಹ, ಮಹತ್ವವೂ ಇರಲಿಲ್ಲ ಎಂದು ಹಲವು ಮಾಜಿ ಅಥ್ಲೀಟ್‌ಗಳು ನೋವಿನಿಂದ ನುಡಿದಿರುವುದನ್ನು ಕೇಳಿದ್ದೇವೆ. 1986ರಿಂದ 1998ರ ವರೆಗಿನ 4 ಏಷ್ಯನ್ ಗೇಮ್ಸ್‌ಗಳಲ್ಲಿ ಭಾರತ ಒಟ್ಟು ಗೆದ್ದಿದ್ದು 17 ಚಿನ್ನದ ಪದಕಗಳನ್ನು ಮಾತ್ರ. ಈ ಅಂಕಿ-ಅಂಶವೇ ದೇಶದಲ್ಲಿ ಕ್ರೀಡೆಗಿದ್ದ ಪ್ರೋತ್ಸಾಹ ಎಂತದ್ದು ಎನ್ನುವುದಕ್ಕೆ ಸಾಕ್ಷಿ.
2000ರ ಬಳಿಕ ಭಾರತೀಯ ಕ್ರೀಡಾಪಟುಗಳ ಪ್ರದರ್ಶನ ಗುಣಮಟ್ಟ ಸುಧಾರಿಸಿತು. ಆದರೆ, 2010ರಲ್ಲಿ ಭಾರತ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದಾಗ ಕೂಟದ ಆಯೋಜನೆಯಲ್ಲಿ ಆದ ಭ್ರಷ್ಟಾಚಾರ ದೇಶಕ್ಕೆ ಭಾರಿ ಹಿನ್ನಡೆ ಉಂಟು ಮಾಡಿದ್ದು ಸುಳ್ಳಲ್ಲ. ಇದೀಗ 2034ರ ವರೆಗೂ ಆತಿಥ್ಯ ವಹಿಸುವ ರಾಷ್ಟ್ರಗಳು ಯಾವುವು ಎನ್ನುವುದು ಈಗಾಗಲೇ ನಿರ್ಧಾರವಾಗಿದೆ. ಇನ್ನೇನಿದ್ದರೂ 2038ರ ಕೂಟಕ್ಕೆ ಭಾರತಕ್ಕೆ ಬಿಡ್ ಸಲ್ಲಿಸಬೇಕಿದೆ.
ಏಷ್ಯನ್ ಗೇಮ್ಸ್ ಅನಾವರಣಕ್ಕೆ ಕ್ಷಣಗಣನೆ! ಮೈನವಿರೇಳಿಸಲಿದೆ ಉದ್ಘಾಟನಾ ಸಮಾರಂಭ!
ಪದಕ ಬೇಟೆಯಲ್ಲಿ ಭಾರತ ನಂ.5!
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಟಾಪ್-5 ರಾಷ್ಟ್ರಗಳಲ್ಲಿ ಒಂದು. ಈ ವರೆಗಿನ ಎಲ್ಲಾ 18 ಆವೃತ್ತಿಗಳಲ್ಲಿ ಪಾಲ್ಗೊಂಡಿರುವ ಭಾರತ, ಒಟ್ಟು 155 ಚಿನ್ನ, 201 ಬೆಳ್ಳಿ, 316 ಕಂಚಿನ ಪದಕಗಳೊಂದಿಗೆ ಒಟ್ಟಾರೆ 672 ಪದಕ ಜಯಿಸಿದೆ. 2018ರಲ್ಲಿ ಜಕಾರ್ತದಲ್ಲಿ ನಡೆದ ಕ್ರೀಡಾಕೂಟ ಭಾರತದ ಪಾಲಿನ ಅತ್ಯಂತ ಯಶಸ್ವಿ ಅಭಿಯಾನ ಎನಿಸಿದೆ. 16 ಚಿನ್ನ, 23 ಬೆಳ್ಳಿ, 31 ಕಂಚು ಸೇರಿ ಒಟ್ಟು 70 ಪದಕ ಗೆದ್ದಿತ್ತು. 2010ರ ಗುವಾಂಗ್ಝು ಗೇಮ್ಸ್‌ನಲ್ಲಿ 14 ಚಿನ್ನ ಸೇರ 65 ಪದಕ ಗೆದ್ದಿದ್ದ ಭಾರತ, 1982ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕೂಟದಲ್ಲಿ 13 ಚಿನ್ನ ಸೇರಿ 57 ಪದಕ ಬಾಚಿಕೊಂಡಿತ್ತು. 2014ರ ಇಂಚಾನ್ ಗೇಮ್ಸ್‌ನಲ್ಲಿ 11 ಚಿನ್ನ ಸೇರಿ 57 ಪದಕ, 2006ರ ದೋಹಾ ಗೇಮ್ಸ್‌ನಲ್ಲಿ 10 ಚಿನ್ನ ಸೇರಿ ಒಟ್ಟು 53 ಪದಕ ಗೆದ್ದಿತ್ತು. ಇವು ಭಾರತದ ಪಾಲಿಗೆ ಅತ್ಯಂತ ಯಶಸ್ಸು ತಂದುಕೊಟ್ಟ ಅಗ್ರ-5 ಏಷ್ಯನ್ ಗೇಮ್ಸ್‌ಗಳು.
1990ರಲ್ಲಿ ಕೇವಲ 1 ಚಿನ್ನ!
ಭಾರತ ಹಲವು ಆವೃತ್ತಿಗಳಲ್ಲಿ ಊಹೆಗೂ ನಿಲುಕದಷ್ಟು ಕಳಪೆ ಪ್ರದರ್ಶನ ನೀಡಿದ್ದೂ ಇದೆ. 1990ರಲ್ಲಿ ಬೀಜಿಂಗ್ ಗೇಮ್ಸ್‌ನಲ್ಲಿ ಕೇವಲ 1 ಚಿನ್ನ ಸೇರಿ 23 ಪದಕ ಗೆದ್ದಿತ್ತು. 1958ರ ಟೋಕಿಯೋ ಗೇಮ್ಸ್‌ನಲ್ಲಿ 5 ಚಿನ್ನ ಸೇರಿ 13 ಪದಕ, 1966ರ ಬ್ಯಾಂಕಾಕ್ ಗೇಮ್ಸ್‌ನಲ್ಲಿ 7 ಚಿನ್ನ ಸೇರಿ 21 ಪದಕ, 1994ರ ಹಿರೋಶಿಮಾ ಗೇಮ್ಸ್‌ನಲ್ಲಿ 4 ಚಿನ್ನ ಸೇರಿ 23 ಪದಕ, 1974ರ ತೆಹ್ರಾನ್ ಗೇಮ್ಸ್‌ನಲ್ಲಿ 4 ಚಿನ್ನ ಸೇರಿ 28 ಪದಕ ಗೆದ್ದಿದ್ದು ಭಾರತದ ಅಗ್ರ-5 ಕಳಪೆ ಸಾಧನೆ ಎನಿಸಿದೆ.
ಭಾರತದ ಟಾಪ್-10 ಏಷ್ಯಾಡ್ ತಾರೆಯರು ಯಾರು?
1. ಲಿಯಾಂಡರ್ ಪೇಸ್, ಟೆನಿಸ್
ಟೆನಿಸ್ ಸಿಂಗಲ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ. 5 ಚಿನ್ನ, 3 ಕಂಚು. ಒಟ್ಟು 8 ಪದಕ ವಿಜೇತ.
2. ಪಿ.ಟಿ. ಉಷಾ, ಅಥ್ಲೆಟಿಕ್ಸ್
ದಿಗ್ಗಜ ಓಟಗಾರ್ತಿ ಪಿ.ಟಿ.ಉಷಾ ಅತಿಹೆಚ್ಚು ಪದಕ ಗೆದ್ದಿರುವ ಭಾರತೀಯ ಅಥ್ಲೀಟ್. 4 ಚಿನ್ನ, 7 ಬೆಳ್ಳಿ ಸೇರಿ ಒಟ್ಟು 11 ಪದಕ.
3. ಜಸ್‌ಪಾಲ್ ರಾಣಾ, ಶೂಟಿಂಗ್
ಏಷ್ಯಾಡ್ ಶೂಟಿಂಗ್‌ನಲ್ಲಿ ಭಾರತದ ಯಶಸ್ವಿ ಕ್ರೀಡಾಪಟು. 4 ಚಿನ್ನ, ತಲಾ 2 ಬೆಳ್ಳಿ, ಕಂಚು ಸೇರಿ ಒಟ್ಟು 8 ಪದಕ ವಿಜೇತ.
4. ಮಿಲ್ಖಾ ಸಿಂಗ್, ಅಥ್ಲೆಟಿಕ್ಸ್
ದೇಶದ ವೇಗದ ಓಟಗಾರ ಮಿಲ್ಖಾ ಸಿಂಗ್ 4 ಚಿನ್ನ ಗೆದ್ದಿದ್ದಾರೆ. 1958ರಲ್ಲಿ 200, 400 ಮೀ., 1962ರಲ್ಲಿ 400 ಮೀ. 4X400 ಮೀ. ರಿಲೇಯಲ್ಲಿ ಚಿನ್ನ.
5. ಪರ್ದುಮನ್ ಬ್ರಾರ್, ಅಥ್ಲೆಟಿಕ್ಸ್
3 ಚಿನ್ನ, 1 ಬೆಳ್ಳಿ, 1 ಕಂಚು ಗೆದ್ದಿರುವ ಅಥ್ಲೀಟ್. ಡಿಸ್ಕಸ್ ಎಸೆತದಲ್ಲಿ 1, ಶಾಟ್‌ಪುಟ್‌ನಲ್ಲಿ 2 ಚಿನ್ನದ ಪದಕ. 1954, 58, 62ರ ಗೇಮ್ಸ್‌ಗಳಲ್ಲಿ ಪದಕ ಸಾಧನೆ.
6. ಎಂ.ಆರ್.ಪೂವಮ್ಮ, ಅಥ್ಲೆಟಿಕ್ಸ್
ಕರ್ನಾಟಕದ ಓಟಗಾರ್ತಿ ಪೂವಮ್ಮ 3 ಚಿನ್ನ, 1 ಕಂಚಿನ ಪದಕ ಒಡತಿ. 2014ರಲ್ಲಿ ತಲಾ 1 ಚಿನ್ನ, 1 ಕಂಚು, 2018ರಲ್ಲಿ 2 ಚಿನ್ನದ ಪದಕ ಜಯಸಿದ್ದರು.
7. ನವ್‌ನೀತ್ ಗೌತಮ್, ಕಬಡ್ಡಿ
ಭಾರತ ಪುರುಷರ ಕಬಡ್ಡಿ ತಂಡ ಏಷ್ಯಾಡ್‌ನಲ್ಲಿ 7 ಚಿನ್ನ ಗೆದ್ದಿದ್ದು, ನವ್‌ನೀತ್ ಗೌತಮ್ 3 ಬಾರಿ ತಂಡದಲ್ಲಿದ್ದರು. 2006, 2010, 2014ರಲ್ಲಿ ಚಿನ್ನಕ್ಕೆ ಮುತ್ತಿಟ್ಟಿದ್ದರು.
8. ರಾಕೇಶ್ ಕುಮಾರ್, ಕಬಡ್ಡಿ
ಭಾರತದ ಶ್ರೇಷ್ಠ ಕಬಡ್ಡಿ ಆಟಗಾರರಲ್ಲಿ ಒಬ್ಬರಾದ ರಾಕೇಶ್ ಕುಮಾರ್ 2006, 2010, 2014ರಲ್ಲಿ ಚಿನ್ನ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು.
9. ಸಾನಿಯಾ ಮಿರ್ಜಾ, ಟೆನಿಸ್
ದಿಗ್ಗಜ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಏಷ್ಯನ್ ಗೇಮ್ಸ್‌ನಲ್ಲೂ ಪದಕ ಬೇಟೆ ನಡೆಸಿದ್ದಾರೆ. 2 ಚಿನ್ನ, ತಲಾ 3 ಬೆಳ್ಳಿ, ಕಂಚು ಸೇರಿ 8 ಪದಕ ಗೆದ್ದಿದ್ದಾರೆ.
10. ಮನ್‌ಜೀತ್ ಕೌರ್, ಅಥ್ಲೆಟಿಕ್ಸ್
400 ಮೀ. ಓಟದ ‘ರಾಣಿ’ ಮನ್‌ಜೀತ್ ಕೌರ್ 2 ಚಿನ್ನ, 1 ಬೆಳ್ಳಿ ಗೆದ್ದಿದ್ದಾರೆ. 2006, 2010ರಲ್ಲಿ 4X400 ಮೀ. ರಿಲೇಯಲ್ಲಿ ಚಿನ್ನ, 2006ರಲ್ಲಿ 400 ಮೀ. ಓಟದಲ್ಲಿ ಬೆಳ್ಳಿ.