20ನೇ ಏಷ್ಯನ್ ಗೇಮ್ಸ್ ಶುರು: ಕದನದ ನಡುವೆ ‘ಹೃದಯ’ ಗೆದ್ದ ಏಷ್ಯನ್‌ ಗೇಮ್ಸ್‌

Kannadaprabha News   | Kannada Prabha
Published : Sep 20, 2026, 11:13 AM IST
Asian Games Opening Ceremony

ಸಾರಾಂಶ

ಜಪಾನ್‌ನ ನಗೋಯಾದಲ್ಲಿ 20ನೇ ಆವೃತ್ತಿಯ ಏಷ್ಯನ್‌ ಗೇಮ್ಸ್‌ಗೆ ಅದ್ಧೂರಿ ಚಾಲನೆ ದೊರೆತಿದ್ದು, 'ಲಯಬದ್ಧ ಹೃದಯ ಬಡಿತ' ಥೀಮ್‌ನೊಂದಿಗೆ ಶಾಂತಿಯ ಸಂದೇಶ ಸಾರಲಾಯಿತು. ಭಾರತದ ಪರ ಮನು ಭಾಕರ್ ಮತ್ತು ಪವನ್ ಶೆರಾವತ್ ತ್ರಿವರ್ಣ ಧ್ವಜ ಹಿಡಿದು ಪಥಸಂಚಲನ ಮುನ್ನಡೆಸಿದರು. ಮುಂದಿನ 15 ದಿನಗಳ ಕಾಲ 45 ದೇಶಗಳ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ.

ನಗೋಯಾ(ಜಪಾನ್‌): ಮಿನಿ ಒಲಿಂಪಿಕ್ಸ್‌ ಖ್ಯಾತಿಯ, 20ನೇ ಆವೃತ್ತಿಯ ಏಷ್ಯನ್‌ ಗೇಮ್ಸ್‌ಗೆ ಶನಿವಾರ ಜಪಾನ್‌ನ ನಗೋಯಾದಲ್ಲಿರುವ ಪಲೋಮಾ ಮಿಜುಹೊ ಕ್ರೀಡಾಂಗಣದಲ್ಲಿ ಅದ್ಧೂರಿ ಚಾಲನೆ ಲಭಿಸಿತು. ವಿಶ್ವದೆಲ್ಲೆಡೆ ಯುದ್ಧದ ಕರಿನೆರಳು ಆವರಿಸಿರುವುದರ ನಡುವೆ ಜಪಾನ್‌ ಪ್ರೀತಿ, ಶಾಂತಿಯ ಸಂದೇಶ ಸಾರುವ ನಿಟ್ಟಿನಲ್ಲಿ ಉದ್ಘಾಟನಾ ಸಮಾರಂಭವನ್ನು ಹೃದಯಮಯಗೊಳಿಸಿತು. ವೇದಿಕೆಯ ಆಕಾರ, ಥೀಮ್‌, ಸಂಕೇತ, ವಿಮಾನ ಹಾರಾಟದ ಮೂಲಕ ವಿಶ್ವದ ಹೃದಯ ಗೆಲ್ಲುವ ಪ್ರಯತ್ನ ಮಾಡಿತು.

ಭಾರತೀಯ ಕಾಲಮಾನ ಶನಿವಾರ ಮಧ್ಯಾಹ್ನ 2.30ಕ್ಕೆ ಉದ್ಘಾಟನಾ ಸಮಾರಂಭ ಆರಂಭಗೊಂಡಿತು. ಸುಮಾರು 2 ಗಂಟೆಗಳ ಕಾಲ ನಡೆದ ಸಮಾರಂಭವು ಸಾಂಪ್ರದಾಯಿಕ ಜಪಾನ್‌ ಸಂಸ್ಕೃತಿ, ಸ್ಥಳೀಯ ಐಚಿ-ನಗೋಯಾ ಇತಿಹಾಸ ಮತ್ತು ಹೈಟೆಕ್ ತಂತ್ರಜ್ಞಾನದ ಮಿಶ್ರಣದಿಂದ ಕೂಡಿತ್ತು. ‘ಹಾರ್ಮೋನಿಕ್ ಹಾರ್ಟ್ ಬೀಟ್’(ಲಯಬದ್ಧ ಹೃದಯ ಬಡಿತ) ಎಂಬ ಥೀಮ್‌ ಬಳಸಿ, ಏಷ್ಯಾದ ಕ್ರೀಡಾಪಟುಗಳು ಮತ್ತು ಜನರು ‘ಹೃದಯದಿಂದ ಹೃದಯಕ್ಕೆ’ ಒಂದಾಗುವುದನ್ನು ಸಂಕೇತಿಸಲು ಹೃದಯಾಕಾರದ ಮುಖ್ಯ ವೇದಿಕೆಯನ್ನು ಬಳಸಲಾಗಿತ್ತು.

ಅಧಿಕೃತ ಉದ್ಘಾಟನೆ:

ಜಪಾನ್‌ನ ಚಕ್ರವರ್ತಿ ನರುಹಿತೊ ಅವರು ಕ್ರೀಡಾಕೂಟವನ್ನು ಅಧಿಕೃತವಾಗಿ ಉದ್ಘಾಟಿಸಿದ್ದಾಗಿ ಘೋಷಿಸಿದರು. ರಾಣಿ ಮಸಾಕೊ, ಒಲಿಂಪಿಕ್‌ ಕೌನ್ಸಿಲ್‌ ಆಫ್‌ ಏಷ್ಯಾದ ಮುಖ್ಯಸ್ಥ ಶೇಖ್ ಜೊಆನ್ ಬಿನ್ ಹಮದ್ ಅಲ್ ಥಾನಿ, ಅಂತಾರಾಷ್ಟ್ರೀಯ ಒಲಿಂಪಿಕ್‌ ಒಕ್ಕೂಟದ ಮುಖ್ಯಸ್ಥೆ ಕಿರ್ಸ್ಟಿ ಕೊವೆಂಟ್ರಿ ಸಮಾರಂಭದಲ್ಲಿ ಪಾಲ್ಗೊಂಡರು.

ಜಪಾನ್ ಭದ್ರತಾ ಪಡೆಯ ಬ್ಲೂ ಇಂಪಲ್ಸ್ ವಿಮಾನಗಳು ಕ್ರೀಡಾಂಗಣದ ಮೇಲೆ ಹೃದಯಾಕಾರದಲ್ಲಿ ಹಾರಾಟ ನಡೆಸಿದವು. ವಯೊಲಿನ್ ವಾದಕ ತಾರೋ ಹಕಾಸೆ ಹೃದಯಾಕಾರದ ವೇದಿಕೆಯ ಮೇಲೆ ಸೊಲೋ ನುಡಿಸಿದರು. 240 ನೃತ್ಯಪಟುಗಳು ‘ವೆಲ್‌ಕಮ್‌’ ಎಂಬ ಪದವನ್ನು ರೂಪಿಸಿದರು. ಗಾಯಕಿ ಕೆಯ್ಕೊ ತೋದಾ ಅವರು ಜಪಾನ್ ರಾಷ್ಟ್ರಗೀತೆಯನ್ನು ಹಾಡಿದರು. ಜಪಾನ್ ಭದ್ರತಾ ಪಡೆಯ 9 ಸದಸ್ಯರು ಧ್ವಜವನ್ನು ತಂದು ಹಾರಿಸಿದರು.

ಸಾಂಸ್ಕೃತಿಕ ಮತ್ತು ತಾಂತ್ರಿಕ ಪ್ರದರ್ಶನ:

ದೈತ್ಯ ಕ್ಯಾಸಲ್ ಬಲೂನ್, ಕಬುಕಿ ನಟರಿಂದ ಹಾರುವ ಸಿಂಹ ನೃತ್ಯ, ಬಿಸಿನೆಸ್ ಸೂಟ್‌ನಲ್ಲಿರುವ ನೃತ್ಯಗಾರರು, ತಂತ್ರಜ್ಞಾನದ ಪ್ರದರ್ಶನ ಗಮನಸೆಳೆಯಿತು. 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್, ಸಾಂಪ್ರದಾಯಿಕ ಸಂಗೀತ ಮತ್ತು ಡಿಜಿಟಲ್ ಬೀಟ್‌ಗಳ ಮಿಶ್ರಣ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.

ಆಕರ್ಷಕ ಪಥಸಂಚಲನ:

ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ 45 ದೇಶಗಳ ಕ್ರೀಡಾಪಟುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಅಫ್ಘಾನಿಸ್ತಾನ ತಂಡ ಮೊದಲು ವೇದಿಕೆಗೆ ಆಗಮಿಸಿತು. ಬಳಿಕ ಇತರ ತಂಡಗಳು ತಮ್ಮ ದೇಶಗಳ ಧ್ವಜದೊಂದಿಗೆ ಸಮಾರಂಭಕ್ಕೆ ಆಗಮಿಸಿದವು. ಜಪಾನ್‌ನ ಒಲಿಂಪಿಕ್ಸ್‌ ಪದಕ ವಿಜೇತರಾದ ಆಯುಮಿ ತಾನಿಮೊಟೊ, ನಾಒಕೊ ತಕಾಹಾಶಿ, ಕೊಸುಕೆ ಹಗಿನೊ ಮತ್ತು ಇತರರು ಏಷ್ಯನ್‌ ಗೇಮ್ಸ್‌ ಧ್ವಜವನ್ನು ಹೊತ್ತು ತಂದರು. ಒಲಿಂಪಿಕ್ಸ್‌ನ ಹ್ಯಾಮರ್‌ ಥ್ರೋ ಚಾಂಪಿಯನ್ ಮುರೊಫುಶಿ ಕೊಜಿ ಮತ್ತು ಅವರ ತಂದೆ ಶಿಗೆನೊಬು (5 ಬಾರಿಯ ಏಷ್ಯನ್ ಚಾಂಪಿಯನ್) ಜಂಟಿಯಾಗಿ ಜ್ಯೋತಿಯನ್ನು ಬೆಳಗಿಸಿದರು. ಗೇಮ್ಸ್‌ನ ಮಸ್ಕಾಟ್ ಹೊನೊಹೊನ್ ಕೂಡ ಸಮಾರಂಭದಲ್ಲಿ ಸಕ್ರಿಯವಾಗಿ ಭಾಗವಹಿಸಿತು.

ಮುಂದಿನ 15 ದಿನಗಳ ಕಾಲ ಏಷ್ಯಾದ 45 ದೇಶಗಳ 11000ದಷ್ಟು ಕ್ರೀಡಾಪಟುಗಳು 43 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದು, ಅ.4ರಂದು ಗೇಮ್ಸ್‌ಗೆ ತೆರೆ ಬೀಳಲಿದೆ.

ಕಿಟ್‌ ಸಿಗದೆ ತೂರ್ ಗೈರು: ಧ್ವಜ ಹಿಡಿದ ಮನು, ಪವನ್

ಸಮಾರಂಭದ ಪಥಸಂಚಲನದಲ್ಲಿ ಭಾರತದ ಧ್ವಜಧಾರಿಗಳಾಗಿ ಒಲಿಂಪಿಕ್ಸ್‌ ಪದಕ ವಿಜೇತ ಶೂಟರ್ ಮನು ಭಾಕರ್‌ ಹಾಗೂ ಏಷ್ಯನ್‌ ಗೇಮ್ಸ್‌ನ 2 ಬಾರಿ ಶಾಟ್‌ಪುಟ್‌ ಚಾಂಪಿಯನ್‌ ತೇಜಿಂದರ್‌ಪಾಲ್‌ ತೂರ್‌ ಪಾಲ್ಗೊಳ್ಳಬೇಕಿತ್ತು. ಆದರೆ ಗೇಮ್ಸ್‌ನ ಅಧಿಕೃತ ಕಿಟ್‌ ಸಿಗದ ಕಾರಣ ತೂರ್‌ ಸಮಾರಂಭಕ್ಕೆ ಗೈರಾದರು. ಅವರ ಅನುಪಸ್ಥಿತಿಯಲ್ಲಿ ತಾರಾ ಕಬಡ್ಡಿ ಆಟಗಾರ ಪವನ್‌ ಶೆರಾವತ್‌ ಅವರು ಮನು ಜೊತೆಗೂಡಿ ತ್ರಿವರ್ಣ ಧ್ವಜ ಹಿಡಿದು ಪಥಸಂಚಲನದಲ್ಲಿ ಭಾರತದ 158 ಸದಸ್ಯರ ತಂಡವನ್ನು ಮುನ್ನಡೆಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ನೈಸ್ ಮೇಟ್' ಬಿಹಾರದ ಹಳ್ಳಿ ಹುಡುಗನ ಕರಾರುವಾಕ್ ಬೌಲಿಂಗ್‌ಗೆ ಆಸ್ಟ್ರೇಲಿಯಾ ದಿಗ್ಗಜ ಬ್ರೆಟ್ ಲೀ ಫಿದಾ
ರಿಷಭ್ ಪಂತ್ ಟೀಂ ಇಂಡಿಯಾ ಏಕದಿನ ಕೆರಿಯರ್ ಮುಗೀತಾ? ಆಕಾಶ್ ಚೋಪ್ರಾ ಹೇಳಿದ್ದೇನು?