
ನಗೋಯಾ(ಜಪಾನ್): 20ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಆದರೆ ಚಿನ್ನದ ಬರ ಮುಂದುವರಿದಿದೆ. ಬುಧವಾರ ಭಾರತೀಯರು 1 ಬೆಳ್ಳಿ, 4 ಕಂಚಿನ ಪದಕ ಗೆದ್ದರು. ಇದರೊಂದಿಗೆ ಪದಕ ಗಳಿಕೆ 12ಕ್ಕೆ ಏರಿಕೆಯಾಯಿತು. ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಬಂದರೆ, ಶೂಟಿಂಗ್‌ನಲ್ಲಿ ಮತ್ತೆರಡು ಕಂಚು ಲಭಿಸಿದವು. ಬ್ಯಾಡ್ಮಿಂಟನ್‌ನಲ್ಲಿ ಭಾರತ ಪುರುಷರ ತಂಡ ಕಂಚಿಗೆ ತೃಪ್ತಿಪಟ್ಟುಕೊಂಡರೆ, ಸಾಫ್ಟ್ ಟೆನಿಸ್‌ನಲ್ಲಿ ಚೊಚ್ಚಲ ಪದಕ ಒಲಿಯಿತು.
ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತ ಮೀರಾಬಾಯಿ ಚಾನು ಕಳೆದ 12 ವರ್ಷಗಳಿಂದಲೂ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲಲು ಕಾಯುತ್ತಿದ್ದರು. 2014ರಿಂದಲೂ ಸ್ಪರ್ಧಿಸುತ್ತಿರುವ ಅವರಿಗೆ ಈ ಬಾರಿ ಕೊನೆಗೂ ಯಶಸ್ಸು ಲಭಿಸಿತು. ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಒಟ್ಟು 198 ಕೆ.ಜಿ. ಭಾರ ಎತ್ತಿ ಬೆಳ್ಳಿ ಪದಕ ಗೆದ್ದರು. ಉತ್ತರ ಕೊರಿಯಾದ ರಿ ಸೊಂಗ್ ಗುಮ್ ವಿಶ್ವದಾಖಲೆಯ 215 ಕೆ.ಜಿ. ಭಾರದೊಂದಿಗೆ ಚಿನ್ನ ಗೆದ್ದರೆ, ಇಂಡೋನೇಷ್ಯಾದ ಲುಲುಕ್ ಡಯಾನ(191 ಕೆ.ಜಿ.) ಕಂಚು ಪಡೆದರು.
ಗೇಮ್ಸ್‌ನ ಇತಿಹಾಸದಲ್ಲೇ ಭಾರತ ಸಾಫ್ಟ್ ಟೆನಿಸ್‌ನಲ್ಲಿ ಚೊಚ್ಚಲ ಪದಕ ತನ್ನದಾಗಿಸಿಕೊಂಡಿತು. ಬುಧವಾರ ಜಯ್ ಮೀನಾ ಅವರು ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಜಪಾನ್‌ನ ಟಕುಯಾ ಕುರೊಸಕಾ ವಿರುದ್ಧ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಮೀನಾ ಅವರು ಈ ಹಿಂದೆ 2018, 2022ರ ಏಷ್ಯನ್ ಗೇಮ್ಸ್‌ನಲ್ಲೂ ಸ್ಪರ್ಧಿಸಿದ್ದರು.
ಗೇಮ್ಸ್‌ನಲ್ಲಿ ಈ ಬಾರಿ ಶೂಟಿಂಗ್‌ನ ಮಹಿಳೆಯರ 10 ಮೀ. ಏರ್ ಪಿಸ್ತೂಲ್‌ನಲ್ಲಿ ಭಾರತ ಚಿನ್ನದ ಪದಕದ ನಿರೀಕ್ಷೆಯಲ್ಲಿತ್ತು. ಆದರೆ ವಿಶ್ವದ ಅಗ್ರ ಶೂಟರ್‌ಗಳಾದ ಮನು ಭಾಕರ್, ಇಶಾ ಸಿಂಗ್, ಸುರುಚಿ ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲಿ ಕಳಪೆ ಪ್ರದರ್ಶನ ನೀಡಿದರು. ಕಳೆದ ಒಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದಿದ್ದ ಮನು, ಈ ಬಾರಿ ವೈಯಕ್ತಿಕ ವಿಭಾಗದಲ್ಲಿ 579 ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇಶಾ, ಸುರುಚಿ ಫೈನಲ್‌ಗೇರಲೂ ವಿಫಲರಾದರು. ಇನ್ನು, ಮನು, ಇಶಾ ಹಾಗೂ ಸುರುಚಿ ಅವರನ್ನೊಳಗೊಂಡ ತಂಡ 4ನೇ ಸ್ಥಾನ ಪಡೆದುಕೊಂಡಿತು. ಭಾರತ ಹಾಗೂ ವಿಯೆಟ್ನಾಂ 1719 ಅಂಕಗಳೊಂದಿಗೆ ಸಮಬಲ ಸಾಧಿಸಿದರೂ, ಅತಿ ಹೆಚ್ಚು ಬಾರಿ 10 ಅಂಕಕ್ಕೆ ಶೂಟ್ ಮಾಡಿದ ಕಾರಣಕ್ಕೆ ವಿಯೆಟ್ನಾಂ 3ನೇ ಸ್ಥಾನಿಯಾಯಿತು. ಮನು ಇನ್ನು 25 ಮೀ. ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಈ ವಿಭಾಗದಲ್ಲಿ ಅವರು 2022ರಲ್ಲಿ ಚಿನ್ನ ಗೆದ್ದಿದ್ದರು.
ನಗೋಯಾ: ಏಷ್ಯನ್ ಗೇಮ್ಸ್‌ನ ಅಥ್ಲೆಟಿಕ್ಸ್ ಬುಧವಾರ ಆರಂಭಗೊಂಡಿದ್ದು, ಭಾರತೀಯರು ಇರುವ ವಿಭಾಗಗಳ ಸ್ಪರ್ಧೆಗಳು ಗುರುವಾರ ಶುರುವಾಗಲಿದೆ. ಈ ಬಾರಿ ಭಾರತೀಯರು 25ರಿಂದ 30 ಪದಕಗಳನ್ನು ಗೆಲ್ಲುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದ್ದಾರೆ.
2022ರ ಏಷ್ಯಾಡ್‌ನಲ್ಲಿ ಭಾರತ 6 ಚಿನ್ನ, 14 ಬೆಳ್ಳಿ ಹಾಗೂ 9 ಕಂಚು ಸೇರಿದಂತೆ 29 ಪದಕ ಗೆದ್ದಿತ್ತು. ಈ ಬಾರಿ ಅಥ್ಲೆಟಿಕ್ಸ್‌ನಲ್ಲಿ 75 ಭಾರತೀಯರು ಸ್ಪರ್ಧೆಯಲ್ಲಿದ್ದಾರೆ. ಈ ಪೈಕಿ ಶಾಟ್‌ಪುಟ್ ಪಟು ತೇಜಿಂದರ್‌ಪಾಲ್ ತೂರ್ ಸತತ 3ನೇ ಆವೃತ್ತಿಯಲ್ಲೂ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಲಾಂಗ್‌ಜಂಪ್ ಪಟು ಮುರಳಿ ಶ್ರೀಶಂಕರ್, ಓಟಗಾರರಾದ ಗುಲ್ವೀರ್ ಸಿಂಗ್, ಅನಿಮೇಶ್ ಕುಜೂರ್, ಅವಿನಾಶ್ ಸಾಬ್ಳೆ, ಪಾರುಲ್ ಚೌಧರಿ ಸೇರಿ ಹಲವರು ಅಮೋಘ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದಾರೆ. ಅಥ್ಲೆಟಿಕ್ಸ್ ಸ್ಪರ್ಧೆಗಳು ಸೆ.29ಕ್ಕೆ ಕೊನೆಗೊಳ್ಳಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.