
ನಗೋಯಾ(ಜಪಾನ್): ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮತ್ತೆ 5 ಪದಕ ಗೆದ್ದಿದೆ. ಆದರೆ ಮಹಿಳಾ ಕ್ರಿಕೆಟ್‌ನಲ್ಲಿ ಸಿಕ್ಕ ನಿರೀಕ್ಷಿತ ಚಿನ್ನದ ಹೊರತಾಗಿ ಬೇರೆ ಕ್ರೀಡೆಗಳಲ್ಲಿ ಭಾರತೀಯರಿಗೆ ಇನ್ನೂ ಬಂಗಾರದ ಭಾಗ್ಯ ಲಭಿಸಿಲ್ಲ. ಗೇಮ್ಸ್‌ನ 5 ದಿನಗಳಲ್ಲಿ ಭಾರತ ಒಟ್ಟು 17 ಪದಕ ಗೆದ್ದಿದೆ. ಆದರೆ ಪಟ್ಟಿಯಲ್ಲಿ ಮಂಗಳವಾರ 8ನೇ ಸ್ಥಾನಕ್ಕೇರಿದ ದೇಶ, ಈಗ 15ನೇ ಸ್ಥಾನಕ್ಕೆ ಕುಸಿದಿದೆ. ಇದೇ ವೇಳೆ ಚೀನಾ ತನ್ನ ಅಧಿಪತ್ಯ ಮುಂದುವರಿಸಿದ್ದು, ಪದಕ ಗಳಿಕೆಯಲ್ಲಿ 125ರ ಗಡಿ ದಾಟಿದೆ.
ಗುರುವಾರ ಭಾರತ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ, ಕಂಚು, ವುಶು ಕ್ರೀಡೆಗಳಲ್ಲಿ ಬೆಳ್ಳಿ ಸಾಧನೆ ಮಾಡಿದರೆ, ಸ್ಕೀಟ್ ಶೂಟಿಂಗ್ ಹಾಗೂ ರೋಯಿಂಗ್‌ನಲ್ಲಿ ಕಂಚು ಪಡೆಯಿತು. ಸದ್ಯ ಭಾರತದ ಬಳಿ 1 ಚಿನ್ನ, 7 ಬೆಳ್ಳಿ, 9 ಕಂಚಿನ ಪದಕಗಳಿವೆ.
ಮಹಿಳೆಯರ ವುಶು ಕ್ರೀಡೆಯಲ್ಲಿ 60 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ ರೋಶಿಬಿನಾ ದೇವಿ ಫೈನಲ್‌ನಲ್ಲಿ ಚೀನಾದ ಝಾಂಗ್ ಕ್ಷಿಯಾಯು ವಿರುದ್ಧ 0-2 ಅಂತರದಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಇದು ಏಷ್ಯಾಡ್‌ನಲ್ಲಿ ರೋಶಿಬಿನಾ ಗೆದ್ದ 2ನೇ ಬೆಳ್ಳಿ ಮತ್ತು ಒಟ್ಟಾರೆ 3ನೇ ಪದಕ. 2018ರಲ್ಲಿ ಕಂಚು ಜಯಿಸಿದ್ದ ಅವರು, 2023ರಲ್ಲಿ ಬೆಳ್ಳಿ ಪಡೆದಿದ್ದರು. ಆದರೆ ಇತರ ವುಶು ಸ್ಪರ್ಧಿಗಳು ನೀರಸ ಪ್ರದರ್ಶನ ತೋರಿ ಪದಕ ಗೆಲ್ಲಲು ವಿಫಲರಾದರು.
ಈ ಬಾರಿ ಕ್ರೀಡಾಕೂಟದಲ್ಲಿ ಭಾರತ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು ಶೂಟರ್‌ಗಳ ಮೇಲೆ. ಈ ಕ್ರೀಡೆಯಲ್ಲಿ ಭಾರತ ಹಲವು ಚಿನ್ನದ ನಿರೀಕ್ಷೆಯಲ್ಲಿತ್ತು. ಆದರೆ ಗೇಮ್ಸ್ ಆರಂಭಗೊಂಡು 5 ದಿನಗಳಾದರೂ ಭಾರತೀಯ ಶೂಟರ್‌ಗಳಿಗೆ ಒಂದೂ ಚಿನ್ನ ಲಭಿಸಿಲ್ಲ. 2023ರ ಗೇಮ್ಸ್‌ನಲ್ಲಿ ಭಾರತ ಈ ಕ್ರೀಡೆಯಲ್ಲಿ 7 ಚಿನ್ನ ಸೇರಿ 22 ಪದಕ ಗೆದ್ದಿತ್ತು ಎಂಬುದು ಗಮನಾರ್ಹ.
ಬುಧವಾರ ಮನು ಭಾಕರ್, ಇಶಾ ಸಿಂಗ್, ಸುರುಚಿ ನಿರಾಸೆ ಮೂಡಿಸಿದ್ದರು. ಗುರುವಾರ ಪುರುಷರ 10 ಮೀ. ಏರ್ ಪಿಸ್ತೂಲ್‌ನಲ್ಲಿ ಕಮಲ್‌ಜೀತ್, ಆಕಾಶ್ ಭಾರಧ್ವಾಜ್ ಹಾಗೂ ಕೇದಾರ್‌ಲಿಂಗ್ ಅರ್ಹತಾ ಸುತ್ತಿನಲ್ಲೇ ಹೊರಬಿದ್ದರು. ಇವರು ಕ್ರಮವಾಗಿ 9, 11 ಹಾಗೂ 35ನೇ ಸ್ಥಾನಿಯಾಗಿ ಫೈನಲ್‌ಗೇರಲು ವಿಫಲರಾದರು. ಇನ್ನು, ತಂಡ ವಿಭಾಗದಲ್ಲೂ ಇವರಿಗೆ ಪದಕ ಸಿಗಲಿಲ್ಲ.
ಈ ಬಾರಿ ಏಷ್ಯನ್ ಗೇಮ್ಸ್‌ನ ಮೊದಲ ದಿನದಿಂದಲೇ ಪ್ರಾಬಲ್ಯ ಸಾಧಿಸುತ್ತಿರುವ ಚೀನಾ, ಗುರುವಾರ ಪದಕ ಬೇಟೆ ಮತ್ತಷ್ಟು ಹೆಚ್ಚಿಸಿತು. ಮೊದಲ ದಿನಗಳಲ್ಲಿ 48 ಚಿನ್ನ ಸೇರಿ 78 ಪದಕ ಗೆದ್ದಿದ್ದ ಚೀನಾ ಸ್ಪರ್ಧಿಗಳು, ಗೇಮ್ಸ್‌ನ 5ನೇ ದಿನವಾದ ಗುರುವಾರ ಒಂದೇ ದಿನ 32 ಚಿನ್ನ ಸೇರಿದಂತೆ 52 ಪದಕ ಗೆದ್ದಿತು. ರೋಯಿಂಗ್‌ನಲ್ಲಿ ಲಭ್ಯವಿದ್ದ 14 ಚಿನ್ನಗಳ ಪೈಕಿ 9ನ್ನು ಜಯಿಸಿದ ಚೀನಾ, ಬ್ಯಾಡ್ಮಿಂಟನ್, ಈಜು, ಕೆನೋಯ್, ಸೈಕ್ಲಿಂಗ್, ವೇಟ್‌ಲಿಫ್ಟಿಂಗ್, ಶೂಟಿಂಗ್‌ನಲ್ಲೂ ಅಧಿಪತ್ಯ ಸಾಧಿಸಿತು. ಸದ್ಯ ಚೀನಾ ಬಳಿ 80 ಚಿನ್ನ, 30 ಬೆಳ್ಳಿ, 20 ಕಂಚು ಸೇರಿ 130 ಪದಕಗಳಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.