ವೆಲ್‌ಕಮ್‌ ಟು ನಗೋಯಾ; ನಿಮಗೆ ಗೊತ್ತಾ, ಏಷ್ಯನ್‌ ಗೇಮ್ಸ್‌ನ ಮೊದಲ ಮಾಸ್ಕಾಟ್‌ ಹೆಸರು ‘ಅಪ್ಪು’!

Kannadaprabha News   | Kannada Prabha
Published : Sep 19, 2026, 09:30 AM IST
Asian Games Opening Ceremony

ಸಾರಾಂಶ

ಜಪಾನ್‌ನ ಐಚಿ ಮತ್ತು ನಗೋಯಾದಲ್ಲಿ 20ನೇ ಆವೃತ್ತಿಯ ಏಷ್ಯನ್ ಗೇಮ್ಸ್ ನಡೆಯಲು ಸಜ್ಜಾಗಿದೆ. 1951ರಲ್ಲಿ ಭಾರತದಲ್ಲಿಯೇ ಆರಂಭವಾದ ಈ ಕ್ರೀಡಾಕೂಟದಲ್ಲಿ ಭಾರತ ಈವರೆಗೆ 779 ಪದಕಗಳನ್ನು ಗೆದ್ದು ಬೀಗಿದೆ. ಈ ಬಾರಿಯ ಕ್ರೀಡಾಕೂಟದಲ್ಲಿ 45 ದೇಶಗಳ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು 43 ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ.

ಮಿನಿ ಒಲಿಂಪಿಕ್ಸ್‌ ಖ್ಯಾತಿಯ, ಏಷ್ಯಾಡ್‌ ಎಂದೂ ಕರೆಯಲ್ಪಡುವ ಏಷ್ಯನ್‌ ಗೇಮ್ಸ್‌ ಮತ್ತೆ ಬಂದಿದೆ. ಏಷ್ಯಾದ ರಾಷ್ಟ್ರಗಳು ಒಟ್ಟುಗೂಡಿ ಆಡುವ ಈ ಕ್ರೀಡಾಕೂಟಕ್ಕೆ ಈ ಬಾರಿ ಜಪಾನ್‌ ಆತಿಥ್ಯ ವಹಿಸಲಿದೆ. ಭಾರೀ ಅವ್ಯವಸ್ಥೆಗಳ ನಡುವೆಯೂ 20ನೇ ಆವೃತ್ತಿಯ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲು ಅಲ್ಲಿನ ಐಚಿ, ನಗೋಯಾ ನಗರಗಳು ಸಜ್ಜಾಗಿದೆ. ಈ ಕ್ರೀಡಾಕೂಟ ಆರಂಭಗೊಂಡಿದ್ದು ಯಾವಾಗ? ಯಾಕೆ?, ಈವರೆಗೂ ಎಲ್ಲೆಲ್ಲಿ ಗೇಮ್ಸ್‌ ಆಯೋಜನೆಗೊಂಡಿವೆ? ಅತಿ ಹೆಚ್ಚು ಪದಕ ಗೆದ್ದ ದೇಶಗಳು ಯಾವುವು? ಭಾರತದ ಸಾಧನೆ ಏನು ಎಂಬುದರ ಬಗ್ಗೆ ಮಾಹಿತಿಯನ್ನು ‘ಕನ್ನಡಪ್ರಭ’ ನಿಮ್ಮ ಮುಂದಿಡುತ್ತಿದೆ.

ಭಾರತೀಯನಿಂದ ಹುಟ್ಟಿದ ಗೇಮ್ಸ್‌ ಕಲ್ಪನೆ, ಭಾರತದ ಡೆಲ್ಲಿಯಲ್ಲಿ ಮೊದಲ ಗೇಮ್ಸ್‌

ಜಾಗತಿಕ ಮಟ್ಟದಲ್ಲಿ ಒಲಿಂಪಿಕ್ಸ್‌ ಇರುವ ಹಾಗೆ, ಏಷ್ಯಾ ದೇಶಗಳ ನಡುವೆ ಏಷ್ಯನ್‌ ಗೇಮ್ಸ್‌ ನಡೆಯುತ್ತದೆ. 2ನೇ ಮಹಾಯುದ್ಧದ ನಂತರ ಏಷ್ಯಾದ ದೇಶಗಳ ನಡುವೆ ಸ್ನೇಹ, ಏಕತೆ ಮತ್ತು ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ಈ ಗೇಮ್ಸ್‌ ಆರಂಭಿಸಲಾಯಿತು. 1948ರಲ್ಲಿ ಲಂಡನ್‌ ಒಲಿಂಪಿಕ್‌ ಸಮಯದಲ್ಲಿ, ಅಂತಾರಾಷ್ಟ್ರೀಯ ಒಲಿಂಪಿಕ್‌ ಕೌನ್ಸಿಲ್‌ನ ಭಾರತದ ಪ್ರತಿನಿಧಿ ಗುರು ದತ್ತ್‌ ಸೊಂಧಿ ಅವರಿಂದ ಗೇಮ್ಸ್‌ನ ಕಲ್ಪನೆ ಮೂಡಿಬಂತು.

ಅದಕ್ಕೂ ಮೊದಲು ‘ಫಾರ್‌ ಈಸ್ಟರ್ನ್‌ ಚಾಂಪಿಯನ್‌ಶಿಪ್‌ ಗೇಮ್ಸ್‌’ (1913–1938) ಮತ್ತು ‘ವೆಸ್ಟ್‌ ಏಷ್ಯನ್‌ ಗೇಮ್ಸ್‌’ ಎಂಬ ಸಣ್ಣ ಪ್ರಾದೇಶಿಕ ಕ್ರೀಡಾಕೂಟಗಳು ಇದ್ದವು. ಅವು ನಿಂತುಹೋದ ನಂತರ ಇಡೀ ಏಷ್ಯಾಕ್ಕೆ ಒಂದು ದೊಡ್ಡ ಕ್ರೀಡಾಕೂಟ ಬೇಕೆಂದು ಯೋಚಿಸಲಾಯಿತು. ಹೀಗಾಗಿ 1949ರಲ್ಲಿ ಏಷ್ಯನ್‌ ಗೇಮ್ಸ್‌ ಫೆಡರೇಷನ್‌ ಸ್ಥಾಪನೆಯಾಯಿತು. ಮೊದಲ ಏಷ್ಯನ್‌ ಗೇಮ್ಸ್‌ 1951ರಲ್ಲಿ ನವದೆಹಲಿಯಲ್ಲಿ ನಡೆಯಿತು.

ಏಷ್ಯನ್‌ ಗೇಮ್ಸ್‌ನ ಮೊದಲ ಮಾಸ್ಕಾಟ್‌ ಹೆಸರು ‘ಅಪ್ಪು’!

ಯಾವುದೇ ಕ್ರೀಡಾಕೂಟದ ವೇಳೆ ಸಂಪೂರ್ಣ ಗೇಮ್‌ನ ಪ್ರತಿನಿಧಿಸುವ ರೀತಿ, ಗೊಂಬೆ ಆಕಾರದಲ್ಲಿ ‘ಮಾಸ್ಕಾಟ್‌’ ಇರುತ್ತದೆ. ಏಷ್ಯನ್‌ ಕ್ರೀಡಾಕೂಟದಲ್ಲಿ ಮೊದಲ ಬಾರಿ ಮಾಸ್ಕಾಟ್‌ ಪರಿಚಯಿಸಿದ್ದು 1982ರಲ್ಲಿ. ನವದೆಹಲಿಯಲ್ಲಿ ನಡೆದಿದ್ದ ಆ ಗೇಮ್ಸ್‌ನಲ್ಲಿ ಮುದ್ದಾದ ಭಾರತೀಯ ಆನೆಯ ಮರಿಯ ರೂಪದ ಮಾಸ್ಕಾಟ್‌ಗೆ ‘ಅಪ್ಪು’ ಎಂದು ಹೆಸರಿಡಲಾಗಿತ್ತು. ಈ ಬಾರಿ ಗೇಮ್ಸ್‌ನ ಮಾಸ್ಕಾಟ್ ಹೊನೊಹೊನ್. ಇದು ನಗೋಯಾ ಕೋಟೆಯ ಸಂಕೇತವಾದ ಶಚಿಹೊಕೊ (ಹುಲಿ ತಲೆ) ಮತ್ತು ಕ್ರೀಡಾಪಟುಗಳ ಹೃದಯದಲ್ಲಿರುವ ಉತ್ಸಾಹದ ಜ್ವಾಲೆಯನ್ನು ಸಂಯೋಜಿಸಿ ರಚಿಸಲಾಗಿದೆ. ಕೆಂಪು ಬಣ್ಣ ಮತ್ತು ದೊಡ್ಡ ಕಣ್ಣುಗಳು ಇದರ ವಿಶೇಷತೆ.

ಭಾರತ ಈವರೆಗೂ ಗೆದ್ದಿದ್ದು 779 ಪದಕ

ಈವರೆಗಿನ ಪ್ರತಿ ಕ್ರೀಡಾಕೂಟದಲ್ಲೂ ಪಾಲ್ಗೊಂಡಿರುವ ಭಾರತ ಒಟ್ಟು 779 ಪದಕ ಗೆದ್ದಿದೆ. ಇದರಲ್ಲಿ 183 ಚಿನ್ನ, 239 ಬೆಳ್ಳಿ ಹಾಗೂ 357 ಕಂಚು ಒಳಗೊಂಡಿವೆ. ಗರಿಷ್ಠ ಪದಕ ಗೆದ್ದ ದೇಶಗಳ ಪೈಕಿ ಭಾರತಕ್ಕೆ 5ನೇ ಸ್ಥಾನ. 1674 ಚಿನ್ನ ಸೇರಿದಂತೆ 3,570 ಪದಕ ಗೆದ್ದಿರುವ ಚೀನಾ ಅಗ್ರಸ್ಥಾನದಲ್ಲಿದ್ದರೆ, 1084 ಚಿನ್ನ ಸೇರಿ 3,242 ಪದಕ ಪಡೆದಿರುವ ಜಪಾನ್‌ 2ನೇ ಸ್ಥಾನದಲ್ಲಿದೆ. ದಕ್ಷಿಣ ಕೊರಿಯಾ 787 ಚಿನ್ನ ಸೇರಿ 2,425 ಪದಕ ಗೆದ್ದಿದ್ದು, ಇರಾನ್‌ 192 ಚಿನ್ನ ಸೇರಿದಂತೆ 611 ಪದಕ ತನ್ನದಾಗಿಸಿಕೊಂಡಿವೆ.

ಮೊದಲ ಗೇಮ್ಸ್‌ನಲ್ಲಿ 6, ಈ ಸಲ 43 ಕ್ರೀಡೆಗಳು

1952ರಲ್ಲಿ ನಡೆದ ಚೊಚ್ಚಲ ಏಷ್ಯನ್‌ ಗೇಮ್ಸ್‌ನಲ್ಲಿ ಕೇವಲ 6 ಕ್ರೀಡೆಗಳಿದ್ದವು. ಅಥ್ಲೆಟಿಕ್ಸ್‌, ಈಜು, ಬಾಸ್ಕೆಟ್‌ಬಾಲ್‌, ಸೈಕ್ಲಿಂಗ್‌, ಫುಟ್ಬಾಲ್‌ ಹಾಗೂ ವೇಟ್‌ಲಿಫ್ಟಿಂಗ್‌ ಸ್ಪರ್ಧೆಗಳನ್ನು ನಡೆಸಲಾಗಿತ್ತು. 57 ಪದಕ ಸ್ಪರ್ಧೆಗಳು ನಡೆದಿದ್ದವು. 489 ಅಥ್ಲೀಟ್‌ಗಳು ಪಾಲ್ಗೊಂಡಿದ್ದರು. ಈ ಬಾರಿ ಗೇಮ್ಸ್‌ನಲ್ಲಿ 43 ಕ್ರೀಡೆಗಳಿವೆ. ಒಟ್ಟು 71 ವಿಭಾಗಗಳ್ಲಿ 469 ಪದಕ ಸ್ಪರ್ಧೆಗಳು ನಡೆಯಲಿವೆ. 10 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳಿದ್ದಾರೆ.

1982ರಿಂದಲೂ ಚೀನಾ ಪದಕ ಪಟ್ಟಿಯಲ್ಲಿ ನಂ.1

ಗೇಮ್ಸ್‌ನಲ್ಲಿ 40ಕ್ಕೂ ಹೆಚ್ಚು ದೇಶಗಳು ಪಾಲ್ಗೊಳ್ಳುತ್ತಿದ್ದರೂ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತಿರುವುದು ಜಪಾನ್‌ ಮತ್ತು ಚೀನಾ ಮಾತ್ರ. ಮೊದಲ 8 ಆವೃತ್ತಿಗಳಲ್ಲಿ ಜಪಾನ್‌ ಸತತವಾಗಿ ನಂ.1 ಆಗಿತ್ತು. ಆದರೆ 1982ರಿಂದ 2022ರ ವರೆಗಿನ ಏಲ್ಲಾ ಗೇಮ್ಸ್‌ಗಳಲ್ಲಿ ಚೀನಾ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.

ಏಷ್ಯನ್‌ ಗೇಮ್ಸ್‌ ಮಾಹಿತಿ

ಎಲ್ಲಿ?: ಜಪಾನ್‌ನ ಐಚಿ, ನಗೋಯಾ

ಎಷ್ಟು ದಿನ?: ಸೆ.19ರಿಂದ ಅ.4

ಎಷ್ಟು ಕ್ರೀಡೆ?: ಒಟ್ಟು 43 ಕ್ರೀಡೆಗಳು

ಎಷ್ಟು ಪದಕ?: 469 ಪದಕ ಸ್ಪರ್ಧೆಗಳು.

ಎಷ್ಟು ಅಥ್ಲೀಟ್ಸ್?: 10000+

43 ಕ್ರೀಡೆ

ಕ್ರೀಡಾಕೂಟದಲ್ಲಿ ಒಟ್ಟು 43 ಕ್ರೀಡೆಗಳನ್ನು ಆಡಿಸಲಾಗುತ್ತದೆ.

54 ಸ್ಥಳ

ಐಚಿ, ನಗೋಯಾದ 54 ಕಡೆಗಳಲ್ಲಿ ಗೇಮ್ಸ್‌ ಆಯೋಜನೆ.

45 ದೇಶ

ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಒಟ್ಟು ದೇಶಗಳ ಸಂಖ್ಯೆ 45

37 ಕ್ರೀಡೆ

ಈ ಬಾರಿ 37 ಕ್ರೀಡೆಗಳಲ್ಲಿ ಭಾರತದ ಅಥ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

"ಶತಕ ಬಾರಿಸುವ ಮುನ್ನವೇ ಬಂದಿತ್ತು ಆ ಒಂದು ಮೆಸೇಜ್!" – ಸಿಡಿಲಬ್ಬರದ ಬ್ಯಾಟಿಂಗ್‌ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ!
ಜಸ್ಟ್‌ 18 ಎಸೆತದಲ್ಲಿ ದ್ರಾವಿಡ್‌ ಪುತ್ರ ಅನ್ವಯ್‌ ಮಿಂಚಿನ ಬ್ಯಾಟಿಂಗ್‌, ಥ್ರಿಲ್ಲರ್‌ ಮ್ಯಾಚ್‌ ಗೆದ್ದ ಭಾರತ ಅಂಡರ್‌-19 ಟೀಮ್‌