ಸರ್‌ಬ್ಜೋತ್ ಸಿಂಗ್, ಅರ್ಜುನ್ ಛೀಮಾ, ಶಿವ ನರ್ವಾಲ್ ಅವರಿದ್ದ ತಂಡ ಫೈನಲ್‌ನಲ್ಲಿ ಚೀನಾವನ್ನು 1 ಅಂಕದಿಂದ ಹಿಂದಿಕ್ಕಿ ಮೊದಲ ಸ್ಥಾನ ಪಡೆಯಿತು. ಭಾರತ 1734 ಅಂಕ ಸಂಪಾದಿಸಿದರೆ, ಚೀನಾ ಒಂದು ಅಂಕ ಕಡಿಮೆ ಪಡೆಯಿತು. 1730 ಅಂಕ ಪಡೆದ ವಿಯೆಟ್ನಾಂ ಕಂಚಿಗೆ ತೃಪ್ತಿಪಟ್ಟಿತು.
ಹಾಂಗ್‌ಝೋ(ಸೆ.29): ಏಷ್ಯನ್ ಗೇಮ್ಸ್ ಶೂಟಿಂಗ್‌ನಲ್ಲಿ ಭಾರತದ ಪ್ರಾಬಲ್ಯ ಮುಂದುವರಿದಿದೆ. ಗುರುವಾರ ಶೂಟಿಂಗ್‌ನಲ್ಲಿ ಒಂದು ಚಿನ್ನ ಸೇರಿ ಭಾರತ ಒಟ್ಟು 3 ಪದಕ ಜಯಿಸಿತು. ಪುರುಷರ 10 ಮೀ. ಏರ್ ಪಿಸ್ತೂಲ್ ತಂಡ ವಿಭಾಗದಲ್ಲಿ ಭಾರತ ಚಿನ್ನಕ್ಕೆ ಗುರಿಯಿಟ್ಟಿತು.
ಸರ್‌ಬ್ಜೋತ್ ಸಿಂಗ್, ಅರ್ಜುನ್ ಛೀಮಾ, ಶಿವ ನರ್ವಾಲ್ ಅವರಿದ್ದ ತಂಡ ಫೈನಲ್‌ನಲ್ಲಿ ಚೀನಾವನ್ನು 1 ಅಂಕದಿಂದ ಹಿಂದಿಕ್ಕಿ ಮೊದಲ ಸ್ಥಾನ ಪಡೆಯಿತು. ಭಾರತ 1734 ಅಂಕ ಸಂಪಾದಿಸಿದರೆ, ಚೀನಾ ಒಂದು ಅಂಕ ಕಡಿಮೆ ಪಡೆಯಿತು. 1730 ಅಂಕ ಪಡೆದ ವಿಯೆಟ್ನಾಂ ಕಂಚಿಗೆ ತೃಪ್ತಿಪಟ್ಟಿತು. ಇದು ಶೂಟಿಂಗ್‌ನಲ್ಲಿ ಭಾರತಕ್ಕೆ 4 ಚಿನ್ನ. 4 ಬೆಳ್ಳಿ, 5 ಕಂಚು ಸಹ ಗೆದ್ದಿರುವ ಶೂಟರ್‌ಗಳು ದೇಶದ ಪದಕ ಖಾತೆಗೆ ಒಟ್ಟು 13 ಪದಕಗಳ ಕೊಡುಗೆ ನೀಡಿದ್ದಾರೆ.
ಪದಕ ಗೆಲ್ಲದವರಿಗೂ ಶುಭಕೋರಿ ಆಶಾ, ಗಂಭೀರ್, ಲಕ್ಷ್ಮಣ್ ಎಡವಟ್ಟು..!
ವೈಯಕ್ತಿಕ ವಿಭಾಗದಲ್ಲಿ ನಿರಾಸೆ: ಸರಬ್ಜೋತ್ ಹಾಗೂ ಅರ್ಜುನ್ ವೈಯಕ್ತಿಕ ವಿಭಾಗದಲ್ಲೂ ಫೈನಲ್ ಪ್ರವೇಶಿಸಿದ್ದರು. ಆದರೆ ಕ್ರಮವಾಗಿ 4 ಹಾಗೂ 8ನೇ ಸ್ಥಾನ ಪಡೆದು, ಪದಕ ರೇಸ್‌ನಿಂದ ಹೊರಬಿದ್ದರು.
ಸ್ಕೀಟ್‌ನಲ್ಲೂ ಪದಕವಿಲ್ಲ: ಮಿಶ್ರ ಸ್ಕೀಟ್ ವಿಭಾಗದಲ್ಲೂ ಭಾರತ ನಿರಾಸೆಗೊಳಗಾಯಿತು. ಗನೇಮತ್ ಸೆಖೋನ್ ಹಾಗೂ ಅನಂತ್‌ಜೀತ್ ಸಿಂಗ್ ಅರ್ಹತಾ ಸುತ್ತಿನಲ್ಲಿ 7ನೇ ಸ್ಥಾನ ಪಡೆದು, ಫೈನಲ್‌ಗೇರಲು ವಿಫಲರಾದರು. ಅಗ್ರ-6 ತಂಡಗಳು ಫೈನಲ್‌ಗೇರಿದವು.
ಅನುಷ್‌ಗೆ 2ನೇ ಪದಕ!
ಈಕ್ವೆಸ್ಟ್ರಿಯನ್ (ಕುದುರೆ ಸವಾರಿ) ತಂಡ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ತಂಡದಲ್ಲಿದ್ದ ಅನುಷ್ ಅಗರ್ವಾಲಾ, ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಪಡೆದರು. ತಮ್ಮ ಕುದುರೆ ‘ಎಟ್ರೊ’ನೊಂದಿಗೆ ಉತ್ತಮ ಪ್ರದರ್ಶನ ನೀಡಿದ ಅನುಷ್, 73.030 ಅಂಕದೊಂದಿಗೆ 3ನೇ ಸ್ಥಾನ ಗಳಿಸಿದರು. 75.780 ಅಂಕ ಪಡೆದ ಮಲೇಷ್ಯಾದ ಮೊಹಮದ್ ಚಿನ್ನ ಜಯಿಸಿದರೆ, ಹಾಂಕಾಂಗ್‌ನ ಜ್ಯಾಕ್ವಲಿನ್ ವಿಂಗ್ 73.450 ಅಂಕದೊಂದಿಗೆ ಬೆಳ್ಳಿಗೆ ಮುತ್ತಿಟ್ಟರು. ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದು ಹೃದಯ್ ವಿಪುಲ್, ಫೈನಲ್‌ನಲ್ಲಿ ಮಂಕಾದರು. ಅವರು ಪದಕ ಸುತ್ತಿಗೆ ಪ್ರವೇಶಿಸಲು ವಿಫಲರಾದರು.
ಫುಟ್‌ಬಾಲ್ ಸೂಪರ್‌ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಗರ್ಲ್‌ಫ್ರೆಂಡ್ ಜಾರ್ಜಿನಾ ರೋಡ್ರಿಗಸ್ ಫೋಟೋ ವೈರಲ್
ಕಳೆದ ಬಾರಿ ಕಂಚು ಗೆದ್ದಿದ್ದ ರೋಶಿಬೀನಾಗೆ ಈ ಸಲ ಬೆಳ್ಳಿ!
ಮಹಿಳೆಯರ ವುಶು ಸ್ಪರ್ಧೆಯ 60 ಕೆ.ಜಿ. ವಿಭಾಗದಲ್ಲಿ ರೋಶಿಬೀನಾ ದೇವಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಫೈನಲ್‌ನಲ್ಲಿ ಅವರು ಚೀನಾದ ವು ಕ್ಸಿಯೊವಿ ವಿರುದ್ಧ 0-2 ಅಂತರದಲ್ಲಿ ವೀರೋಚಿತ ಸೋಲು ಕಂಡರು. 2018ರ ಏಷ್ಯಾಡ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ರೋಶಿಬೀನಾ, ಈ ಸಲ ಒಂದು ಹೆಜ್ಜೆ ಮುಂದೆ ಸಾಗಿದರೂ, ಚಿನ್ನ ಗೆಲ್ಲಬೇಕೆಂಬ 22ರ ಮಣಿಪುರದ ಕ್ರೀಡಾಪಟುವಿನ ಕನಸು ಈಡೇರಲಿಲ್ಲ.
ಮಣಿಪುರದ ಸ್ಥಿತಿ ನೆನೆದು ಗಳಗಳನೆ ಅತ್ತ ರೋಶಿಬೀನಾ
ಪದಕ ಗೆದ್ದ ಬಳಿಕ ರೋಶಿಬೀನಾ, ತಮ್ಮ ತವರು ರಾಜ್ಯ ಮಣಿಪುರದಲ್ಲಿ ಎರಡು ಗುಂಪುಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ನೆನೆದು ಗಳಗಳನೆ ಅತ್ತರು. ‘ಮಣಿಪುರ ಹತ್ತಿಕೊಂಡು ಉರಿಯುತ್ತಿದೆ. ಅಲ್ಲಿನ ಸಂಘರ್ಷ ಯಾವಾಗ ಮುಗಿಯಲಿದೆ ಎಂದು ತಿಳಿಯುತ್ತಿಲ್ಲ. ನಾನು ನನ್ನ ಮನೆಗೆ ಹೋಗಲು ಆಗುತ್ತಿಲ್ಲ. ಈ ಪದಕವನ್ನು ನಮ್ಮನ್ನು ರಕ್ಷಿಸುತ್ತಿರುವವರಿಗೆ ಹಾಗೂ ಸಂಕಷ್ಟದಲ್ಲಿರುವ ನಮ್ಮವರೆಲ್ಲರಿಗೂ ಅರ್ಪಿಸುತ್ತೇನೆ’ ಎಂದು ರೋಶಿಬೀನಾ ಮಾಧ್ಯಮಗಳಿಗೆ ತಿಳಿಸಿದರು.
ಫೈನಲ್‌ಗೂ ಮುನ್ನ ತಮ್ಮ ಪೋಷಕರ ಜೊತೆ ಮಾತನಾಡಿದ್ದಾಗಿ ತಿಳಿಸಿದ ರೋಶಿಬೀನಾ, ‘ಬುಧವಾರ ನಾನು ನನ್ನ ತಂದೆ, ತಾಯಿಗೆ ಕರೆ ಮಾಡಿದ್ದೆ. ಅವರು ಆಟದ ಕಡೆಗಷ್ಟೇ ಗಮನ ಹರಿಸುವಂತೆ ಸೂಚಿಸಿದರು. ನನ್ನ ಕುಟುಂಬ ಸುರಕ್ಷಿತವಾಗಿದೆ. ಸಂಘರ್ಷದ ವಿಷಯ ಕೇಳಿ ನಾನು ವಿಚಲಿತಳಾಗಬಾರದೆಂದು ಹೆಚ್ಚಾಗಿ ಕರೆ ಮಾಡದಂತೆ ಪೋಷಕರು, ಕೋಚ್‌ಗಳು ಸಲಹೆ ನೀಡಿದ್ದಾರೆ’ ಎಂದು ನೋವಿನಿಂದ ನುಡಿದರು.